ಬೆಂಗಳೂರು: ಜಗತ್ತಿನಾದ್ಯಂತ ಆಡಳಿತ, ವ್ಯಾಪಾರದ ರೂಪುರೇಷೆಗಳಲ್ಲಿ ಬದಲಾವಣೆಗಳಾದರೂ, ಕೂಡ ಬೆಂಗಳೂರಿನ ಆರ್ಥಿಕತೆ ನಿರಂತರವಾಗಿ ಅಭಿವೃದ್ಧಿಯಾಗುತ್ತಲೇ ಸಾಗುತ್ತಿರುವುದು ಶ್ಲಾಘನೀಯವಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಟರ್ಮಿನಲ್ 2 ಹಾಗೂ 108 ಅಡಿ ಎತ್ತರದ ನಾಡಪ್ರಭು ಕೆಂಪೇಗೌಡರ ‘ಪ್ರಗತಿ ಪ್ರತಿಮೆ’ ಲೋಕಾರ್ಪಣೆ ಮಾಡಿದ ನಂತರ ನಡೆದ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ನಾಡಪ್ರಭು ಕೆಂಪೇಗೌಡರ ಕಲ್ಪನೆಯ ಬೆಂಗಳೂರಿನ ಸಮಗ್ರ ವಿಕಾಸಕ್ಕೆ ಸರ್ಕಾರ ಬದ್ಧವಾಗಿದೆ. ವಾಣಿಜ್ಯ, ಸಂಸ್ಕೃತಿ, ಪರಂಪರೆ, ಆಡಳಿತದ ಸಮರ್ಪಕ ಸಂಯೋಜನೆಯಿಂದ ಕೆಂಪೇಗೌಡರು ಬೆಂಗಳೂರು ನಗರ ನಿರ್ಮಾಣಕ್ಕೆ ಬುನಾದಿ ಹಾಕಿದರು. ದೇಶದ ಮೊದಲ ಮೇಕ್ ಇನ್ ಇಂಡಿಯಾ ವಂದೇ ಭಾರತ ರೈಲು ಕರ್ನಾಟಕದಿಂದ ಲೋಕಾರ್ಪಣೆಗೊಂಡಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿರುವ ಟರ್ಮಿನಲ್ 2 ಅತ್ಯಂತ ಸುಂದರವಾಗಿದೆ.
ಸ್ಟಾರ್ಟ್ ಅಪ್‌ಗಳಿಂದ ಭಾರತ ಸಶಕ್ತಗೊಂಡಿದೆ. ವಂದೇ ಭಾರತ ರೈಲು ನವಭಾರತದ ನಿರ್ಮಾಣದ ಪ್ರತೀಕ. ವಂದೇ ಭಾರತ್ ರೈಲುಗಳು ಭಾರತೀಯ ರೈಲ್ವೇಗೆ ಹೊಸ ಆಯಾಮ ನೀಡಿವೆ. ಶ್ರೀಕೃಷ್ಣನ ಭಕ್ತರಾಗಿದ್ದ ಕನಕದಾಸರು ಸಹಬಾಳ್ವೆಯ ಸಂದೇಶ ಸಾರಿದರು. ವೀರ ವನಿತೆ ಒನಕೆ ಓಬವ್ವನ ಸಾಹಸ ಮನೋಭಾವ ಸದಾ ಸ್ಪೂರ್ತಿ ಎಂದು ಪ್ರಧಾನಿ ಪ್ರಶಂಸಿಸಿದರು.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಆದಿಚುಂಚನಗಿರಿ ನಿರ್ಮಲಾನಂದ ಸ್ವಾಮೀಜಿ, ನಂಜಾವಧೂತ ಸ್ವಾಮೀಜಿ, ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವರಾದ ಎ.ನಾರಾಯಣಸ್ವಾಮಿ, ಭಗವಂತ್ ಖೂಬಾ, ಶೋಭಾ ಕರಂದ್ಲಾಜೆ, ಸಂಸದ ಸದಾನಂದಗೌಡ, ಸಚಿವರಾದ ಅರಗ ಜ್ಞಾನೇಂದ್ರ, ಸಿ. ಎನ್. ಅಶ್ವತ್ಥನಾರಾಯಣ, ಡಾ. ಕೆ. ಸುಧಾಕರ್, ವಿ. ಸುನೀಲ್ ಕುಮಾರ್, ಆರ್.ಅಶೋಕ, ಮುಂತಾದವರು ಉಪಸ್ಥಿತರಿದ್ದರು.