ವಿದ್ಯಾಗಿರಿ(ಮೂಡುಬಿದಿರೆ), ಜು. 10: ಸಿನಿಮಾವು ಕಲೆ, ತಂತ್ರಜ್ಞಾನದ ಸಮ್ಮಿಲನವಾಗಿದ್ದು, ವಿಜ್ಞಾನ, ಮನೋರಂಜನೆ ಎಲ್ಲವೂ ಇಲ್ಲಿದೆ. ಇದು ಅತ್ಯಂತ ಪ್ರಭಾವ ಬೀರುವ ಮಾಧ್ಯಮ ಎಂದು ಸಿನಿಮಾ ಬರಹಗಾರ ಮತ್ತು ಕಲಾ ನಿರ್ದೇಶಕ ತಮ್ಮ ಲಕ್ಷ್ಮಣ ಹೇಳಿದರು. ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಭಾಗದ ಸಿನಿಮಾ ಸಮಾಜದಲ್ಲಿ ‘ಸಿನಿಮಾ ಮತ್ತು ಸಿನಿಮಾ ನಿರ್ಮಾಣ’ ವಿಷಯದ ಕುರಿತು ನಡೆದ ಕಾರ್ಯಾಗಾರದಲ್ಲಿ ಅವರು ಮಾತನಾಡಿದರು. ಮಾನವನು ನೀರಿನಲ್ಲಿ ಪ್ರತಿಬಿಂಬವನ್ನು ನೋಡಿ ಕನ್ನಡಿಯನ್ನು ಆವಿಷ್ಕರಿಸಿದ್ದು, ಮುಂದುವರಿದ ಭಾಗವಾಗಿ ಚಿತ್ರಗಳಿಗೆ ‘ಚಲನಚಿತ್ರ’ ಆವಿಷ್ಕರಿಸಿದ್ದಾನೆ. ಲುಮಿರೇ ಸಹೋದರರು ಅಭಿವೃದ್ಧಿಪಡಿಸಿದ ಸಿನಿಮಾವು ಅನೇಕ ಆವಿಷ್ಕಾರಗಳ ಪರಿಣಾಮವಾಗಿ ಇಂದು ವಿಶ್ವದಾದ್ಯಂತ ಮನ್ನಣೆ ಪಡೆದಿದೆ ಎಂದರು.
ಸಿನಿಮಾದಲ್ಲಿ ಬಂಡವಾಳ ಹೂಡಿ, ಯಶಸ್ವಿಯಾದರೆ ಬಹುಬೇಗನೆ ಲಾಭಗಳಿಸಲು ಸಾಧ್ಯ ಎಂದರು. ಲಾಜಿಕ್, ಮ್ಯಾಜಿಕ್, ಗಿಮಿಕ್, ಟೆಕ್ನಿಕ್ಸ್, ಮೇಕಿಂಗ್ ಇತ್ಯಾದಿ ಸೂತ್ರಗಳಿವೆ. ಕಥೆಗಿಂತಲೂ ಹೆಚ್ಚಾಗಿ ನಿರ್ದೇಶಕನ ಸೃಜನಶೀಲತೆ ಮುಖ್ಯ. ಪಾತ್ರಕ್ಕೆ ತಕ್ಕ ಕಲಾವಿದರನ್ನು ಆರಿಸುವ ಸೂಕ್ಷ್ಮತೆ ನಿರ್ದೇಶಕ ಹೊಂದಿರಬೇಕು. ಚಲನಚಿತ್ರದಲ್ಲಿ ವಸ್ತ್ರ ವಿನ್ಯಾಸ, ಕೇಶಾಲಂಕಾರ, ಸಂಗೀತ, ಛಾಯಾಗ್ರಹಣ, ನೃತ್ಯದಂತಹ ಅನೇಕ ವಿಭಾಗಗಳಿವೆ. ಉತ್ತಮ ಚಿತ್ರೀಕರಣಕ್ಕೆ ಪೂರ್ವ ತಯಾರಿ ಹಾಗೂ ಅನುಕ್ರಮವಾದ ಕಥಾ ಬರವಣಿಗೆ ಅತೀ ಮುಖ್ಯ. ಚಿತ್ರೀಕರಣದಲ್ಲಿ ಛಾಯಾಗ್ರಾಹಕ, ಕಲಾ ನಿರ್ದೇಶಕ ಹಾಗೂ ತಂತ್ರಜ್ಞರು ಮುಖ್ಯ ಪಾತ್ರ ವಹಿಸುತ್ತಾರೆ. ಕಾಲಘಟ್ಟದ ಬಗ್ಗೆ ಕಲಾ ನಿರ್ದೇಶಕನಿಗೆ ಮಾಹಿತಿ ಇರಬೇಕು ಎಂದರು.
ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಸಿನಿಮಾ ಹಾಗೂ ಜೀವನಕ್ಕೆ ಅವಿನಾಭಾವ ಸಂಬಂಧವಿದೆ. ತಾವು ಸ್ವತಃ ಅನುಭವಿಸಿದ ಘಟನೆಗಳಿಂದ ಕಥೆಗಳು ಸೃಜಿಸುತ್ತವೆ. ನಂತರ ಇದೇ ಉತ್ತಮ ಸಿನಿಮಾವಾಗಿ ಹೊರಹೊಮ್ಮುತ್ತದೆ. ಹಿಂದೆಲ್ಲ ಜನರು ಪುರಾಣಗಳನ್ನು ಉಲ್ಲೇಖಸಿ ಮಾತನಾಡುತ್ತಿದ್ದರು. ಇಂದು ಸಿನಿಮಾವನ್ನು ಉಲ್ಲೇಖಸಿ ಮಾತನಾಡುವಷ್ಟು ಪ್ರಭಾವ ಬೀರಿದೆ. ಇದರಿಂದ ಒಳಿತು- ಕೆಡುಕು ಎರಡೂ ಆಗಿದೆ ಎಂದರು. ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ ಮಾತನಾಡಿದರು. ಪ್ರಾಧ್ಯಾಪಕರಾದ ಡಾ. ಶ್ರೀನಿವಾಸ ಹೊಡೆಯಾಲ, ಸಾತ್ವಿಕ್, ಹರ್ಷವರ್ಧನ ಪಿ.ಆರ್., ಸೈಯ್ಯದ್ ಸಮನ್, ನವ್ಯಾ, ದೀಕ್ಷಿತಾ, ನಿಶಾನ್ ಕೋಟ್ಯಾನ್, ಇಂಚರಾಗೌಡ ಇದ್ದರು. ವಿದ್ಯಾರ್ಥಿಗಳಾದ ಅವಿನಾಶ್ ಕಟೀಲ್, ನೇಹಾ ಕೊಠಾರಿ, ಪ್ರಖ್ಯಾತ್ ಕಾರ್ಯಕ್ರಮ ನಿರೂಪಿಸಿದರು.