ವಿದ್ಯಾಗಿರಿ, ಜೂ. 5: ಕತೆ ತನ್ನೊಳಗೆ ಕರೆದೊಯ್ಯಬೇಕು. ಅಲ್ಲಿ ಓದುಗ ತನ್ನನ್ನು ಗುರುತಿಸುವಂತಾಗಬೇಕು. ಅದೇ ಅತ್ಯುತ್ತಮ ಕತೆ ಎಂದು ಇತಿಹಾಸ ಸಂಶೋಧಕ, ನಿವೃತ್ತ ಪ್ರಾಧ್ಯಾಪಕ ಡಾ.ಪುಂಡಿಕಾಯಿ ಗಣಪಯ್ಯ ಭಟ್ ಹೇಳಿದರು. ಆಳ್ವಾಸ್ ಕಾಲೇಜಿನ ಕನ್ನಡ ವಿಭಾಗ ಮತ್ತು ಐ.ಕ್ಯೂ.ಎ.ಸಿ ಸಹಯೋಗದಲ್ಲಿ ಬುಧವಾರ ಕುವೆಂಪು ಸಭಾಂಗಣಲ್ಲಿ ನಡೆದ ‘ಕಡಿದ ದಾರಿ’ ಕಥಾಸಂಕಲನ ಬಿಡುಗಡೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ನಮ್ಮನ್ನು ಓದಿಸಿಕೊಂಡು ಹೋಗುವ ಕೃತಿಯನ್ನು ನಾವು ಗುರುತಿಸುತ್ತೇವೆ. ಅದರ ವಿಷಯಗಳನ್ನು ನಾವು ಬದುಕಿನಲ್ಲಿ ಅಳವಡಿಸಿಕೊಳ್ಳುತ್ತೇವೆ ಎಂದರು. ‘ಕಡಿದ ದಾರಿ’ ಪುಸ್ತಕವು ತೀರ್ಥಹಳ್ಳಿ ಸುತ್ತಮುತ್ತಲಿನ ಗ್ರಾಮೀಣ ಪರಿಸರದ ಹವ್ಯಕ ಬ್ರಾಹ್ಮಣ ಕುಟುಂಬವೊಂದರ ಕಥನವನ್ನು ಒಳಗೊಂಡಿದೆ. ಅಲ್ಲಿನ ಕಷ್ಟ, ವಾಸ್ತವ ಚಿತ್ರಣಗಳಿವೆ ಎಂದರು.
ಒಂದು ಸಮುದಾಯದ ಆಚಾರ ವಿಚಾರಗಳ ಏರುಪೇರಿನ ಕಥೆಯೇ ಪುಸ್ತಕದಲ್ಲಿದೆ. ೧೬ ಕಥೆಗಳಾಗಿ ರೂಪುಗೊಂಡಿದೆ. ಕೃತಿಯು ತನ್ನದೇ ವಿಶೇಷ ಅನುಭವ ಒಳಗೊಂಡಿದ್ದು, ಕಲ್ಪನೆಯ ಅಂಶಗಳು ಇಲ್ಲದೇ ಅನುಭವದ ಕಥೆಗಳೇ ಪುಸ್ತಕ ರೂಪದಲ್ಲಿ ಹೊರಬಂದಿದೆ ಎಂದು ವಿವರಿಸಿದರು. ಕೃತಿಕಾರ ಸಹ ಪ್ರಾಧ್ಯಾಪಕ ಹರೀಶ್ ಜಿ.ಟಿ. ಮಾತನಾಡಿ, ಸಾಹಿತ್ಯ ಅಂದರೆ ನಮ್ಮನ್ನು ನಾವೇ ಕಾಣುವಂತಹದ್ದು. ಸಾಹಿತ್ಯ ಎಂದರೆ ಕಲ್ಪನೆ ಅಲ್ಲ. ಮನಸ್ಸಿನಲ್ಲಿ ಹುಟ್ಟುವ ವಿಚಾರ. ನಮ್ಮ ಪರಿಸರವನ್ನು ಸೂಕ್ಷ್ಮವಾಗಿ ಗ್ರಹಿಸಿಕೊಂಡು ಹೋದರೆ ಸಾಹಿತ್ಯ ಹುಟ್ಟಿಕೊಳ್ಳುತ್ತದೆ ಎಂದರು. ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಮಾತನಾಡಿ, ಕೃತಿ ನಮ್ಮೊಳಗೆ ಸಂವಾದ ಹುಟ್ಟು ಹಾಕಬೇಕು. ಆಗ ಮಾತ್ರ ಕಥೆ ಯಶಸ್ಸನ್ನು ಕಾಣುತ್ತದೆ ಎಂದರು. ಕತೆಗಾರ ತನ್ನ ಪರಿಸರದ ಸೌಂದರ್ಯವನ್ನು ಅಂತಃಕರಣದ ಮೂಲಕ ಆಸ್ವಾದಿಸಿದಾಗ ಮತ್ತು ಪ್ರಕೃತಿಯ ಜೊತೆ ಅನುಸಂಧಾನವನ್ನು ಮಾಡಿಕೊಂಡಾಗ ಕಥೆಗಳು ಹುಟ್ಟುತ್ತವೆ. ಕತೆಗಳು ವ್ಯಕ್ತಿತ್ವದ ಉನ್ನತಿ ಹಾಗೂ ಸಮಾಜಕ್ಕೆ ಸಂದೇಶ ನೀಡುತ್ತವೆ ಎಂದರು.
ಆಳ್ವಾಸ್ ಕಾಲೇಜಿನ ಆಡಳಿತಾಧಿಕಾರಿ ಬಾಲಕೃಷ್ಣ ಶೆಟ್ಟಿ, ಕನ್ನಡ ವಿಭಾಗದ ಪ್ರಾಧ್ಯಾಪಕರು ಮತ್ತು ವಿದ್ಯಾರ್ಥಿಗಳು ಇದ್ದರು. ಕನ್ನಡ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಡಾ. ಜ್ಯೋತಿ ರೈ ವಂದಿಸಿ, ವಿದ್ಯಾರ್ಥಿ ಶಶಾಂಕ್ ನಿರೂಪಿಸಿದರು.