ಮಂಗಳೂರು, ಜೂ.13: ಬಾಲಕಾರ್ಮಿಕ ಪದ್ಧತಿಯನ್ನು ತಳಮಟ್ಟದಿಂದ ತೊಡೆದು ಹಾಕಲು ಸಂಬಂಧಿಸಿದ ಇಲಾಖೆಗಳ ಅಧಿಕಾರಿಗಳು, ಸಂಘ ಸಂಸ್ಥೆಗಳು, ಸಾರ್ವಜನಿಕರು ಯತ್ನಿಸಬೇಕು ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರಾದ ರವೀಂದ್ರ ಎಂ. ಜೋಶಿ ಅವರು ಕರೆ ನೀಡಿದರು.
ಅವರು ಜೂ.12ರ ಸೋಮವಾರ ನಗರದ ಜಿಲ್ಲಾ ಪಂಚಾಯತ್ ನ ನೇತ್ರಾವತಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಮಂಗಳೂರು ಮಹಾನಗರ ಪಾಲಿಕೆ, ಕಾರ್ಮಿಕ ಇಲಾಖೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘ, ಪೊಲೀಸ್ ಇಲಾಖೆ, ಮಂಗಳೂರು ವಕೀಲರ ಸಂಘ ಹಾಗೂ ಜಿಲ್ಲೆಯ ಮಕ್ಕಳ ಸಹಾಯವಾಣಿ ಮತ್ತು ಸಂಬಂಧಿತ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ವಿಶ್ವ ಬಾಲಕಾರ್ಮಿಕ ಪದ್ಧತಿ ವಿರೋಧಿ ದಿನದ ಪ್ರಯುಕ್ತ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.
ಮಕ್ಕಳ ರಕ್ಷಣೆಗೆ ಸರ್ಕಾರ ಹಲವು ಕಾನೂನು ಹಾಗೂ ಯೋಜನೆಗಳನ್ನು ಜಾರಿಗೊಳಿಸಿದೆ. ಆದಾಗ್ಯೂ
ಪೋಷಕರಿಲ್ಲದ ಮಕ್ಕಳು ಅಥವಾ ಬಡತನದಿಂದಾಗಿ ಹೋಟೆಲ್, ಅಂಗಡಿಗಳು, ಗ್ಯಾರೇಜ್, ಕಾರ್ಖಾನೆಗಳು ಇತರೆಡೆ ಕೆಲಸ ಮಾಡುವ ಬಾಲಕಾರ್ಮಿಕರು ಕಂಡು ಬಂದರೆ ಅವರ ಮಾಹಿತಿಯನ್ನು ಕಾರ್ಮಿಕ ಇಲಾಖೆಗೆ ನೀಡಿ ಆ ಮಕ್ಕಳ ಪೋಷಣೆ ಹಾಗೂ ಶಿಕ್ಷಣ ಪಡೆಯಲು ಪ್ರಜ್ಞಾವಂತ ನಾಗರೀಕರು ಸಹಕರಿಸಬೇಕು ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಶೋಭಾ ಬಿ.ಜಿ. ಅವರು ಹೇಳಿದರು. ಮಕ್ಕಳ ಕಲ್ಯಾಣ ಸಮಿತಿ ಅಧ್ಯಕ್ಷೆ ರೆನ್ನಿ ಡಿಸೋಜಾ ಅವರು ಮಾತನಾಡಿ, ಶಿಕ್ಷಣ ಪಡೆಯುವುದು ಪ್ರತಿಯೊಂದು ಮಗುವಿನ ಹಕ್ಕಾಗಿದೆ. ಶಾಲೆಯಿಂದ ಹೊರಗುಳಿದ ಮಕ್ಕಳು ಕಂಡುಬಂದರೆ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡಬೇಕು ಎಂದರು. ಬಾಲಕಾರ್ಮಿಕ ಕಾಯ್ದೆಯ ಬಗ್ಗೆ ಹಿರಿಯ ವಕೀಲ ಕೆ. ನಿಕೇಶ್ ಶೆಟ್ಟಿ ಉಪನ್ಯಾಸ ನೀಡಿದರು.
ಇದೇ ಸಂದರ್ಭದಲ್ಲಿ ಬಾಲಕಾರ್ಮಿಕರ ರಕ್ಷಣೆ ಮತ್ತು ಮಕ್ಕಳ ಹಕ್ಕುಗಳಿಗಾಗಿ ದುಡಿದ ಪ್ರೊ. ಹಿಲ್ದಾ ರಾಯಪ್ಪನ್ ಮತ್ತು ರೆನ್ನಿ ಡಿಸೋಜ ಅವರನ್ನು ಸನ್ಮಾನಿಸಲಾಯಿತು. ಬಾಲ ಕಾರ್ಮಿಕ ವಿರೋಧಿ ದಿನ ಕುರಿತ ಜಾಗೃತಿ ಮೂಡಿಸಲು ಹಮ್ಮಿಕೊಳ್ಳಲಾಗಿದ್ದ ಭಾಷಣ ಮತ್ತು ಚಿತ್ರಕಲಾ ಸ್ಪರ್ಧೆಗಳಲ್ಲಿ ವಿಜೇತರಾದ ಬಿಜೈನ ಚಿಣ್ಣರ ತಂಗುಧಾಮ, ಬೊಂದೇಲ್ ನ ಬಾಲಕರ ಬಾಲಮಂದಿರ ಹಾಗೂ ಮೂಡಬಿದ್ರೆಯ ಪ್ರಜ್ಞಾ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಮಂಗಳೂರು ವಿಭಾಗದ ಸಹಾಯಕ ಕಾರ್ಮಿಕ ಆಯುಕ್ತ ಶಿವಕುಮಾರ್ ಬಿ.ಈ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಮಿಕ ಅಧಿಕಾರಿ ವಿಲ್ಮಾ ಎಲಿಜಬತ್ ತಾವ್ರೂ ಸ್ವಾಗತಿಸಿದರು. ಹಿರಿಯ ಕಾರ್ಮಿಕ ನಿರೀಕ್ಷಕ ಜೀವನ್ ಕುಮಾರ್ ವಂದಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ನಾಯಕ್, ಮಹಿಳಾ ಮತ್ತು ಮಕ್ಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಪಾಪಬೋವಿ, ಕಾರ್ಖಾನೆಗಳು ಮತ್ತು ಬಾಯ್ಲರ್ ಇಲಾಖೆಯ ಉಪ ನಿರ್ದೇಶಕ ರಾಜೇಶ್ ಮಿಶ್ರಿಕೋಟೆ, ಜಿಲ್ಲಾ ಬಾಲಕಾರ್ಮಿಕ ಯೋಜನಾ ಸಂಘದ ಯೋಜನಾ ನಿರ್ದೇಶಕ ಶ್ರೀನಿವಾಸ್ ಮತ್ತು ಸಿಬ್ಬಂದಿ, ಇಲಾಖೆಯ ಎಲ್ಲಾ ಹಿರಿಯ ಕಾರ್ಮಿಕ ನಿರೀಕ್ಷಕರು, ಸಂಘ ಸಂಸ್ಥೆಗಳ ಪ್ರತಿನಿಧಿಗಳು ಸ್ತ್ರೀಶಕ್ತಿ ಮತ್ತು ಸ್ವಸಹಾಯ ಗುಂಪಿನ ಸದಸ್ಯರು ಭಾಗವಹಿಸಿದರು. ಇದಕ್ಕೂ ಮುನ್ನ ಉರ್ವಸ್ಟೋರ್ ವೃತ್ತದಿಂದ ಆಯೋಜಿಸಲಾಗಿದ್ದ ಜಾಗೃತಿ ಜಾಥಾಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಕುಮಾರ್ ಚಾಲನೆ ನೀಡಿದರು.