ಬೆಂಗಳೂರು: ಇಂದು ತಜ್ಞರ ಜತೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಮಹತ್ವದ ಸಭೆ ನಡೆಯಿತು. ಕೋವಿಡ್ ನಿಯಂತ್ರಿಸಲು ಹೇರಿದ್ದ ವೀಕೆಂಡ್ ಕರ್ಫ್ಯೂ ಅನ್ನು ಸರ್ಕಾರ ತೆರವುಗೊಳಿಸಿದೆ.
ಈ ಕುರಿತು ಮಾಹಿತಿ ನೀಡಿದ ಕಂದಾಯ ಸಚಿವ ಆರ್ ಅಶೋಕ್, ತಜ್ಞರ ವರದಿಯ ಆಧಾರದಲ್ಲಿ ಈ ನಿರ್ಣಯ ಕೈಗೊಳ್ಳಲಾಗಿದೆ. ಆಸ್ಪತ್ರೆ ಸೇರುವವರ ಸಂಖ್ಯೆ ಶೇಕಡ 5ಕ್ಕಿಂತ ಹೆಚ್ಚಳವಾದರೆ ಮತ್ತೊಮ್ಮೆ ವಾರಾಂತ್ಯ ಕರ್ಫ್ಯೂ ಹೇರುವ ಬಗ್ಗೆ ನಿರ್ಧಾರ ಕೈಗೊಳ್ಳಬೇಕಾಗುತ್ತದೆ ಎಂದು ಸಚಿವ ಅಶೋಕ್ ಹೇಳಿದರು. ಜನರು ಇದಕ್ಕೆ ಆಸ್ಪದ ಕೊಡಬಾರದು.
ಕೋವಿಡ್ ಮುನ್ನೆಚ್ಚರಿಕೆ ಕ್ರಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಎಂದು ಅವರು ಹೇಳಿದರು. ರಾತ್ರಿ 10ರಿಂದ ಬೆಳಿಗ್ಗೆ 5 ಗಂಟೆಯವರೆಗೆ ನೈಟ್ ಕರ್ಫ್ಯೂ ಮುಂದುವರಿಯಲಿದೆ. ಬಾರ್, ಹೊಟೇಲ್, ರೆಸ್ಟೋರೆಂಟ್ ಗಳಲ್ಲಿ ಶೇಕಡ 50 ರಷ್ಟು ಸಾಮರ್ಥ್ಯದೊಂದಿಗೆ ಕಾರ್ಯನಿರ್ವಹಿಸಬೇಕು. ಬೆಂಗಳೂರು ಹೊರತುಪಡಿಸಿ ಉಳಿದೆಲ್ಲೆಡೆ ಶಾಲೆಗಳಲ್ಲಿ ಭೌತಿಕ ತರಗತಿಗಳು ಪುನರಾರಂಭವಾಗಲಿದೆ.