ಬೆಂಗಳೂರು, ಫೆ.16: (ಉಡುಪಿ ಬುಲೆಟಿನ್ ವರದಿ) ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶುಕ್ರವಾರ ವಿಧಾನಸಭೆಯಲ್ಲಿ ದಾಖಲೆಯ 15ನೇ ಬಜೆಟ್ ಮಂಡಿಸಿದರು. ಬಜೆಟ್ ಮುಖ್ಯಾಂಶಗಳು: ವಿವಿಧ ರೈತಪರ ಯೋಜನೆಗಳನ್ನು ಒಗ್ಗೂಡಿಸಿ ಸಮಗ್ರ ಕೃಷಿ ಉತ್ತೇಜಿಸುವ ಕರ್ನಾಟಕ ರೈತ ಸಮೃದ್ಧಿ ಯೋಜನೆ ಜಾರಿ. ಕೃಷಿ ಯೋಜನೆಗಳ ಪರಿಣಾಮಕಾರಿ ಅನುಷ್ಠಾನಕ್ಕಾಗಿ ಕೃಷಿ ಅಭಿವೃದ್ಧಿ ಪ್ರಾಧಿಕಾರ ರಚನೆ. ಕೈಗೆಟುಕುವ ದರದಲ್ಲಿ ಸಂಸ್ಕರಿಸಿದ ಸಿರಿಧಾನ್ಯಗಳು ಹಾಗೂ ಮೌಲ್ಯವರ್ಧಿತ ಸಿರಿಧಾನ್ಯ ಉತ್ಪನ್ನಗಳನ್ನು ಒದಗಿಸಲು ‘ನಮ್ಮ ಮಿಲ್ಲೆಟ್’ ಕಾರ್ಯಕ್ರಮ ಪ್ರಾರಂಭ. ತೋಟಗಾರಿಕೆ ಕುರಿತು ತಾಂತ್ರಿಕ ಸಲಹೆ, ಮಾರುಕಟ್ಟೆ ಸಂಪರ್ಕ, ಕೃಷಿ ಯಂತ್ರೋಪಕರಣಗಳು ಹಾಗೂ ಉತ್ಪನ್ನಗಳನ್ನು ಒಂದೇ ಸೂರಿನಡಿ ಒದಗಿಸಲು ಆಯ್ದ ಜಿಲ್ಲೆಗಳಲ್ಲಿ ‘ಕಿಸಾನ್ ಮಾಲ್’ ಸ್ಥಾಪನೆ. ರಫ್ತು ಉತ್ತೇಜನಕ್ಕಾಗಿ ಬೆಂಗಳೂರಿನಲ್ಲಿ ಸುಸಜ್ಜಿತವಾದ ಅಂತಾರಾಷ್ಟ್ರೀಯ ಮಟ್ಟದ ವಾಣಿಜ್ಯ ಪುಷ್ಪ ಮಾರುಕಟ್ಟೆ ಸ್ಥಾಪನೆ. ಚಿಕ್ಕಮಗಳೂರಿನಲ್ಲಿ ಸ್ಪೈಸ್ ಪಾರ್ಕ್ ಅಭಿವೃದ್ಧಿ. ಆಯ್ದ 20 ತಾಲೂಕುಗಳಲ್ಲಿ ಪಶು ಆಸ್ಪತ್ರೆಗಳನ್ನು ಪಾಲಿಕ್ಲಿನಿಕ್ ಗಳಾಗಿ ಮೇಲ್ದರ್ಜೆಗೇರಿಸಲು ರೂ.10 ಕೋಟಿ. ಪುತ್ತೂರು ಪಶು ವೈದ್ಯಕೀಯ ಕಾಲೇಜು ಕಾರ್ಯಾರಂಭಕ್ಕೆ ಕ್ರಮ. ಮೀನುಗಾರರ ರಕ್ಷಣೆಗೆ ಸಮುದ್ರ ಆಂಬುಲೆನ್ಸ್ ಖರೀದಿಗೆ ರೂ. 7 ಕೋಟಿ ಅನುದಾನ. ಮತ್ಸ್ಯ ಆಶಾಕಿರಣ ಯೋಜನೆಯಡಿ ಕರಾವಳಿ ಮೀನುಗಾರರ ಪರಿಹಾರದ ರಾಜ್ಯದ ಪಾಲು ರೂ. 3,000ಕ್ಕೆ ಹೆಚ್ಚಳ. ವಿವಿಧ ವಸತಿ ಯೋಜನೆಯಡಿ 10,000 ವಸತಿ ರಹಿತ ಮೀನುಗಾರರಿಗೆ ಮನೆ ನಿರ್ಮಿಸಲು ಕ್ರಮ.
ಮಂಗಳೂರಿನಲ್ಲಿ ರೂ. 35 ಕೋಟಿ ವೆಚ್ಚದಲ್ಲಿ ಅತ್ಯಾಧುನಿಕ ಕೃಷಿ ಸಂಕೀರ್ಣ ಸ್ಥಾಪನೆ. ಸಕ್ಕರೆ ಕಾರ್ಖಾನೆಗಳ ಬಳಿ ಎಪಿಎಂಸಿಗಳ ಮೂಲಕ ವೇ ಬ್ರಿಡ್ಜ್ ಸ್ಥಾಪನೆ. ರಾಯಚೂರು ಹಾಗೂ ರಾಣೆಬೆನ್ನೂರಿನಲ್ಲಿ ಒಣಮೆಣಸಿನಕಾಯಿ ಮಾರುಕಟ್ಟೆ ಪ್ರಾರಂಭ. ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅಗತ್ಯ ಮೂಲಭೂತ ಸೌಲಭ್ಯಗಳ ಕಾಮಗಾರಿಗಳಿಗಾಗಿ 250 ಕೋಟಿ ರೂ. ಅನುದಾನ. ಐಐಟಿ ಮಾದರಿಯಲ್ಲಿ 500 ಕೋಟಿ ರೂ ವೆಚ್ಚದಲ್ಲಿ ವಿಶ್ವೇಶ್ವರಯ್ಯ ಇಂಜಿನಿಯರಿಂಗ್ ಕಾಲೇಜು ವಿಶ್ವವಿದ್ಯಾಲಯ ಅಭಿವೃದ್ಧಿ. ಮುಂದಿನ ಎರಡು ವರ್ಷಗಳಲ್ಲಿ 350 ಕೋಟಿ ರೂ. ವೆಚ್ಚದಲ್ಲಿ 25 ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸಮುದಾಯ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೆ. ಏಳು ಜಿಲ್ಲೆಗಳಲ್ಲಿ 187 ಕೋಟಿ ರೂ. ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಬ್ಲಾಕ್ ಕಟ್ಟಡ ನಿರ್ಮಾಣ. ಮಂಗಳೂರು ಬಂದರಿನಿಂದ ಬೆಂಗಳೂರು ವರೆಗೆ ಹಾಗೂ ಬೀದರ್ ನಿಂದ ಬೆಂಗಳೂರು ನಡುವೆ ಆರ್ಥಿಕ ಅಭಿವೃದ್ಧಿ ಕಾರಿಡಾರ್ ನಿರ್ಮಾಣಕ್ಕೆ ಕ್ರಮ.
ಹಿರಿಯ ಪತ್ರಕರ್ತ ವಡ್ಡರ್ಸೆ ರಘುರಾಮ ಶೆಟ್ಟಿ ಪ್ರಶಸ್ತಿ ಸ್ಥಾಪಿಸಿ ಸಾಮಾಜಿಕ ನ್ಯಾಯ ಕ್ಷೇತ್ರಕ್ಕೆ ಕೊಡುಗೆ ನೀಡಿರುವ ಪತ್ರಕರ್ತರಿಗೆ ಪ್ರತಿವರ್ಷ ಪ್ರಶಸ್ತಿ. ಸುಳ್ಳುಸುದ್ಧಿ ತಡೆಗೆ ಐ.ಟಿ.ಬಿ.ಟಿ ಇಲಾಖೆಯ ಸಹಯೋಗದಲ್ಲಿ ಸತ್ಯ ತಪಾಸಣಾ ತಂಡ ಹಾಗೂ ವಿಶೇಷ ಕೋಶ ರಚನೆ. ಸೈಬರ್ ಕ್ರೈಮ್ ವಿಭಾಗವನ್ನು ಬಲಪಡಿಸಲು ಒಟ್ಟು 43 ಸಿ.ಇ.ಎನ್ ಪೊಲೀಸ್ ಠಾಣೆಗಳ ಉನ್ನತೀಕರಣ. ಶಿವಮೊಗ್ಗ ಜಿಲ್ಲೆಯಲ್ಲಿ 100 ಕೋಟಿ ವೆಚ್ಚದ ಹೈ-ಸೆಕ್ಯೂರಿಟಿ ಕಾರಾಗೃಹ ನಿರ್ಮಾಣ.