ಕೋವಿಡ್ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿಕೊಂಡು ರಾಜ್ಯಾದ್ಯಂತ ಎಸ್.ಎಸ್.ಎಲ್.ಸಿ ಪರೀಕ್ಷೆಗಳು ಆರಂಭಗೊಂಡಿದ್ದು ಪರೀಕ್ಷಾ ಕೊಠಡಿಗಳಲ್ಲಿ ಸರಕಾರದ ಮಾರ್ಗಸೂಚಿಗಳ ಪ್ರಕಾರ ಎಲ್ಲಾ ರೀತಿಯ ವ್ಯವಸ್ಥೆಗಳನ್ನು ನಡೆಸಲಾಗಿದೆ. ವಿದ್ಯಾರ್ಥಿಗಳಿಗೆ ಪರೀಕ್ಷಾ ಕೇಂದ್ರಗಳಲ್ಲಿ ಮಾಸ್ಕ್ ವಿತರಿಸಲಾಗಿದ್ದು ಕೊಠಡಿಗಳನ್ನು ಸಂಪೂರ್ಣವಾಗಿ ಸ್ಯಾನಿಟೈಸ್ ಮಾಡಲಾಗಿದೆ. ವಿದ್ಯಾರ್ಥಿಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಪ್ರಕ್ರಿಯೆಗಳನ್ನು ಸರಳೀಕೃತ ಮಾಡಲಾಗಿದ್ದು ತಾಂತ್ರಿಕ ಸಲಹೆ ಹಾಗೂ ವೈದ್ಯಕೀಯ ನೆರವಿಗಾಗಿ ಪ್ರತ್ಯೇಕ ತಂಡಗಳ ವ್ಯವಸ್ಥೆ ಮಾಡಲಾಗಿದೆ.
ಬಹುತೇಕ ಪರೀಕ್ಷಾ ಕೇಂದ್ರಗಳಲ್ಲಿ ಭಾರತ್ ಸೌಕ್ಟ್ಸ್ ಮತ್ತು ಗೈಡ್ಸ್ ಸ್ವಯಂಸೇವಕರು ಪರೀಕ್ಷಾರ್ಥಿಗಳಿಗೆ ಮಾಸ್ಕ್ ವಿತರಿಸಿದರು. ಪರೀಕ್ಷಾ ಕೇಂದ್ರಗಳ ಸುತ್ತಮುತ್ತ ಬಂದೋಬಸ್ತ್ ಏರ್ಪಡಿಸಲಾಗಿದೆ. ಸರಕಾರಿ ಪದವಿಪೂರ್ವ ಕಾಲೇಜು ಕೆಮ್ಮಣ್ಣಿನಲ್ಲಿ ಆಶಾ ಕಾರ್ಯಕರ್ತೆಯರು, ರೋವರ್ ಸೇಂಜರ್ ವಿದ್ಯಾರ್ಥಿಗಳು, ಶಾಲೆಯ ಸಿಬ್ಬಂದಿ ಮತ್ತು ಸ್ವಯಂಸೇವಕರು ಪರೀಕ್ಷಾರ್ಥಿಗಳಿಗೆ ಥರ್ಮಲ್ ಸ್ಕ್ಯಾನಿಂಗ್ ಮಾಡಿ ಮಾಸ್ಕ್ ವಿತರಿಸಿದರು. ಸಾಮಾಜಿಕ ಅಂತರ ಕಾಪಾಡಲು ಅಲ್ಲಲ್ಲಿ ಮಾರ್ಕಿಂಗ್ ಹಾಕಲಾಗಿದೆ.
ಶಿಕ್ಷಣ ಸಚಿವ ಸುರೇಶ್ ಕುಮಾರ್ ಸಂದೇಶ:
ರಾಜ್ಯದಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ಹಾಜರಾಗುತ್ತಿರುವ ಎಲ್ಲಾ ಮಕ್ಕಳಿಗೆ ಶುಭ ಹಾರೈಕೆಗಳು. ಮಕ್ಕಳೆಲ್ಲರೂ ಶಾಂತಚಿತ್ತರಾಗಿ, ನಿರಾತಂಕವಾಗಿ, ಏಕಾಗ್ರತೆಯಿಂದ ಮತ್ತು ಆತ್ಮವಿಶ್ವಾಸದಿಂದ ಪರೀಕ್ಷೆ ಎದುರಿಸಿ. ಪರೀಕ್ಷೆಗಳನ್ನು ಸುರಕ್ಷಿತವಾಗಿ ಮತ್ತು ಸುಗಮವಾಗಿ ನಡೆಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಸಮನ್ವಯದಿಂದ ಏಕ ತಂಡವಾಗಿ ಉತ್ತಮ ವ್ಯವಸ್ಥೆಗಳನ್ನು ಮಾಡಿವೆ ಎಂದು ಪಾಲಕರಿಗೆ ಭರವಸೆ ನೀಡುತ್ತೇನೆ.
ನಿಮ್ಮ ಮಕ್ಕಳು ನಮ್ಮೆಲ್ಲರ ಮಕ್ಕಳು. ನಮ್ಮ ಎಲ್ಲಾ ಪರೀಕ್ಷಾ ಕೇಂದ್ರಗಳು ಮಕ್ಕಳ ಸುರಕ್ಷಾ ಕೇಂದ್ರಗಳು ಎಂದು ಶಿಕ್ಷಣ ಸಚಿವ ಎಸ್ ಸುರೇಶ್ ಕುಮಾರ್ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದ್ದಾರೆ.