ಬೆಂಗಳೂರು, ಆ.27: ದಕ್ಷಿಣ ಭಾರತದ ಮೊದಲ ಹವಾನಿಯಂತ್ರಿತ ಪಾಲಿಕೆ ಬಜಾರ್ ಬೆಂಗಳೂರಿನಲ್ಲಿ ನಿರ್ಮಾಣಗೊಂಡಿದೆ. ವಿಜಯನಗರ ಬಸ್ ಹಾಗೂ ಮೆಟ್ರೋ ನಿಲ್ದಾಣಗಳ ಬಳಿ ಸ್ಥಾಪಿಸಲಾಗಿದ್ದು, ಬೀದಿ ಬದಿ ವ್ಯಾಪಾರಿಗಳಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗಲಿದೆ. ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ನಿರ್ಮಿಸಿರುವ ಹವಾನಿಯಂತ್ರಿತ ಮಾರುಕಟ್ಟೆ ‘ಕೃಷ್ಣದೇವರಾಯ ಪಾಲಿಕೆ ಬಜಾರ್’ ಅನ್ನು ಲೋಕಾರ್ಪಣೆಗೊಳಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿದರು.
ಪಾಲಿಕೆ ಬಜಾರ್ ಅನ್ನು ರೂ. 13 ಕೋಟಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಒಟ್ಟು 79 ಮಳಿಗೆಗಳಿದ್ದು ಒಂದೇ ಕಡೆ ಎಲ್ಲ ತರಹದ ವ್ಯಾಪಾರಕ್ಕೆ ವ್ಯವಸ್ಥೆ ಮಾಡಲಾಗಿದೆ. ಹೊರಾಂಗಣದಲ್ಲಿ 5, ಒಳಾಂಗಣದಲ್ಲಿ 26 ಎ.ಸಿ.ಯುನಿಟ್‌ಗಳು, 1 ಲಿಫ್ಟ್, 2 ಎಸ್ಕಲೇಟರ್, 8 ಪ್ರವೇಶ ದ್ವಾರ, 145 ವಿದ್ಯುತ್ ದೀಪಗಳು ಹಾಗೂ ಪ್ರತಿ ಮಳಿಗೆಗೆ ಅಗ್ನಿಶಾಮಕ ಉಪಕರಣ ಅಳವಡಿಸಲಾಗಿದೆ. ಬೀದಿ ಬದಿ ವ್ಯಾಪಾರಿಗಳಿಗೆ ಅನುಕೂಲ ಮಾಡಿಕೊಡಲು ನಗರದಲ್ಲಿ ಸಾಧ್ಯ ಇರುವ ಎಲ್ಲ ಕಡೆಗಳಲ್ಲಿ ಪಾಲಿಕೆ ಬಜಾರ್‌ಗಳನ್ನು ನಿರ್ಮಿಸಿ ಎಂದು ಬಿಬಿಎಂಪಿ ಅಧಿಕಾರಿಗಳಿಗೆ ಸಿಎಂ ಸೂಚನೆ ನೀಡಿದ್ದಾರೆ.
ವಿಜಯನಗರ ಬಸ್ ಮತ್ತು ಮೆಟ್ರೋ ರೈಲು ನಿಲ್ದಾಣವಿರುವ ಸ್ಥಳದಲ್ಲಿ ಹವಾನಿಯಂತ್ರಿತ ಪಾಲಿಕೆ ಬಜಾರ್ ನಿರ್ಮಾಣಗೊಂಡಿರುವುದರಿಂದ ಜನರಿಗೆ ಅನುಕೂಲವಾಗಿದೆ. ಒಂದೇ ಕಡೆ ಎಲ್ಲ ತರಹದ ವ್ಯಾಪಾರಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ. ಪಾಲಿಕೆ ಬಜಾರ್‌ಗೆ ಗೌರವಯುತವಾಗಿ ಶ್ರೀ ಕೃಷ್ಣ ದೇವರಾಯರ ಹೆಸರನ್ನು ಇಟ್ಟು, ನಾಡಿಗೆ ಅವರ ಕೊಡುಗೆಯನ್ನು ಸ್ಮರಿಸುವ ಪ್ರಯತ್ನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.