ಬೆಂಗಳೂರು: ಕೇಂದ್ರ ಸರ್ಕಾರಕ್ಕೆ ಕಳೆದ 8 ವರ್ಷಗಳಲ್ಲಿ ಕರ್ನಾಟಕ ಒಂದರಿಂದಲೇ 19 ಲಕ್ಷ ಕೋಟಿ, ಕಳೆದ ಒಂದೇ ವರ್ಷ 3 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹವಾಗಿದೆ. ಕರ್ನಾಟಕ ಇಡೀ ದೇಶದಲ್ಲೇ ಎರಡನೇ ಸ್ಥಾನದಲ್ಲಿದೆ. ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. 19 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ 1 ಲಕ್ಷದ 29 ಸಾವಿರ ಕೋಟಿ ಕೊಟ್ಟಿದ್ದೇವೆ ಎಂದು ದೊಡ್ಡ ಸಾಧನೆಯಂತೆ ಪ್ರಚಾರ ಮಾಡಿದ್ರು. 42% ನಮ್ಮ ತೆರಿಗೆ ಪಾಲಿನ ಪ್ರಕಾರ ನಮಗೆ ಬಂದಿದ್ದರೆ ಕನಿಷ್ಟ 8 ಲಕ್ಷ ಕೋಟಿ ಬರಬೇಕಿತ್ತು. ಅಚ್ಚೇದಿನ್ ಹೆಸರಲ್ಲಿ ಜನರಿಗೆ ದ್ರೋಹ ಮಾಡಿದ್ದಾರೆ ಎಂದು ಕಾಂಗ್ರೆಸ್ ನಾಯಕ ಸಿದ್ಧರಾಮಯ್ಯ ಹೇಳಿದರು.
ಬಿಜೆಪಿ ಅಧಿಕಾರಕ್ಕೆ ಬಂದಮೇಲೆ ಅಗತ್ಯವಸ್ತುಗಳ ಬೆಲೆ ಎದ್ವಾತದ್ವಾ ಏರಿಕೆಯಾಗಿದೆ. ಅಚ್ಚೇದಿನ್ ಎಂದು ಹೇಳಿಕೊಂಡು ಅಧಿಕಾರಕ್ಕೆ ಬಂದವರು ಹೇಗೆ ಜನರ ರಕ್ತವನ್ನು ತೆರಿಗೆ ರೂಪದಲ್ಲಿ ಕುಡಿದಿದ್ದಾರೆ ಎಂದು ಹೇಳಲು ಇದಕ್ಕಿಂತ ಬೇರೆ ಸಾಕ್ಷಿ ಬೇಕಾ? ಎಂದು ಸಿದ್ಧರಾಮಯ್ಯ ಪ್ರಶ್ನಿಸಿದ್ದಾರೆ.
ಈಗ ಜಿಎಸ್‌ಟಿ ಹೆಚ್ಚು ಮಾಡಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಜಿಎಸ್‌ಟಿ ಕೌನ್ಸಿಲ್ ನ ಒಬ್ಬ ಸದಸ್ಯರು. ಮೊಸರು, ಮಜ್ಜಿಗೆ, ಪನ್ನೀರ್, ಲಸ್ಸಿ ಮೇಲೆ ಜಿಎಸ್‌ಟಿ ತೆರಿಗೆ 0% ಇತ್ತು, ಅದನ್ನು 5% ಗೆ ಹೆಚ್ಚಿಸಿದ್ದಾರೆ. ಅಕ್ಕಿ, ಗೋದಿ, ಬಾರ್ಲಿ, ಓಟ್ಸ್ ಗೆ 0% ತೆರಿಗೆ ಇತ್ತು, ಅದೀಗ 5% ಗೆ ಹೆಚ್ಚಾಗಿದೆ.
ಆಸ್ಪತ್ರೆ ಕೊಠಡಿಗಳ 5,000 ರೂ. ವರೆಗೆ 5% ಜಿಎಸ್‌ಟಿ ಹಾಕಿದ್ದಾರೆ, 1,000 ರೂಪಾಯಿಯ ಹೋಟೆಲ್ ಕೊಠಡಿಗಳಿಗೆ 12% ಜಿಎಸ್‌ಟಿ ಹಾಕಿದ್ದಾರೆ, ಸೋಲಾರ್ ವಾಟರ್ ಹೀಟರ್ ಗಳ ಮೇಲೆ 5% ಇದ್ದದ್ದನ್ನು 12% ಮಾಡಿದ್ದಾರೆ. ಎಲ್.ಇ.ಡಿ ಬಲ್ಬ್ ಗಳಿಗೆ 12% ಇಂದ 18%, ಬ್ಯಾಂಕ್ ಚೆಕ್ ಪುಸ್ತಕಗಳಿಗೆ 0% ಇಂದ 18% ಗೆ ತೆರಿಗೆ ಏರಿಕೆ ಮಾಡಿದ್ದಾರೆ. ರೈತರ ಹಣ್ಣು, ತರಕಾರಿಗಳನ್ನು ಬೇರ್ಪಡಿಸುವ ಉಪಕರಣಗಳ ಮೇಲೆ ತೆರಿಗೆ 5% ಇಂದ 18% ಮಾಡಿದ್ದಾರೆ. ಬಾವಿಗಳಿಂದ ನೀರೆತ್ತಲು ಬಳಸುವ ಸಬ್ ಮೆರಿನ್ ಪಂಪ್ ಹಾಗೂ ಮೋಟಾರ್ ಗಳಿಗೆ 12% ಇಂದ 18% ಗೆ ತೆರಿಗೆ ಏರಿಕೆ ಮಾಡಿದ್ದಾರೆ.
ಬರೆಯುವ ಹಾಗೂ ಮುದ್ರಿಸುವ ಇಂಕ್ ಗಳ ಮೇಲೆ 12% ಇಂದ 18% ತೆರಿಗೆ ಹೆಚ್ಚಳ ಮಾಡಿದ್ದಾರೆ. ಇಟ್ಟಿಗೆ ತಯಾರಿಸುವ ಜಾಗ್ ವರ್ಕ್ ಗಳ ಮೇಲಿನ ಜಿಎಸ್‌ಟಿ ಯನ್ನು 5% ಇಂದ 12% ಗೆ ಹೆಚ್ಚಿಸಿದ್ದಾರೆ. ಶೈಕ್ಷಣಿಕ ಬಳಕೆಯ ಭೂಪಟ, ಗ್ಲೋಬ್ ಗಳ ಮೇಲೆ 0% ಇಂದ 12% ಗೆ ತೆರಿಗೆ ಹಾಕಿದ್ದಾರೆ. ಇದು ಇಂದಿನಿಂದ ಜಾರಿಯಾಗುತ್ತಿದೆ. ಅಚ್ಚೇದಿನ್ ಭಾಗವೇ ಇದು?
ಈ ಮೇಲಿನ ಎಲ್ಲಾ ಪದಾರ್ಥಗಳು ಬಡ ಮತ್ತು ಮಧ್ಯಮ ವರ್ಗದ ಜನರು ಬಳಸುವ ವಸ್ತುಗಳಾಗಿವೆ. ಮೊದಲೇ ಬೆಲೆಯೇರಿಕೆ ಇದೆ, ಇಂಥಾ ಸಂದರ್ಭದಲ್ಲಿ ಜಿಎಸ್‌ಟಿ ಹೆಚ್ಚಳ ಮಾಡಿದರೆ ಜನರು ಪಾರಾಗೋದು ಹೇಗೆ? ಕಾರ್ಪೋರೇಟ್ ತೆರಿಗೆಯನ್ನು 30% ಇಂದ 22% ಗೆ ಇಳಿಕೆ ಮಾಡಿದ್ದಾರೆ. ಬಡವರ ಮೇಲೆ ತೆರಿಗೆ ಹೆಚ್ಚು ಮಾಡಿದ್ದಾರೆ.
ನಿರುದ್ಯೋಗಿಗಳಿಗೆ, ರೈತರಿಗೆ, ಕೂಲಿಕಾರರಿಗೆ, ಬೀದಿ ವ್ಯಾಪಾರಿಗಳಿಗೆ ಇಂದರಿಂದ ತೊಂದರೆಯಾಗುತ್ತದೆ.
ಜಿಎಸ್‌ಟಿ ಹೆಚ್ಚಳದಿಂದ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಉಳಿಯುತ್ತವಾ? ಇದರಿಂದ ಪಾರಾಗಲು ಅವು ಬೆಲೆ ಹೆಚ್ಚಳ ಮಾಡುತ್ತವೆ. ಇದರಿಂದ ಬಳಕೆದಾರರ ಮೇಲೆ ಹೆಚ್ಚು ಭಾರ ಬೀಳುತ್ತದೆ. ಬೆಲೆ ಹೆಚ್ಚಿದ ಕಾರಣಕ್ಕೆ ಖರೀದಿ ಕಡಿಮೆಯಾದರೆ ಈ ಸಣ್ಣ ಮತ್ತು ಗುಡಿ ಕೈಗಾರಿಕೆಗಳು ಮುಚ್ಚಿಹೋಗುತ್ತವೆ.
ಜಿಎಸ್‌ಟಿ ಜಾರಿಯಾದ ಮೇಲೆ 60% ಸಣ್ಣ ಮತ್ತು ಮಧ್ಯಮ ಗಾತ್ರದ ಕೈಗಾರಿಕೆಗಳು ಬಂದ್ ಆಗಿವೆ. ನೋಟು ರದ್ದತಿ, ಜಿಎಸ್‌ಟಿ ಜಾರಿಗೆ ಮೊದಲು ಈ ಕೈಗಾರಿಕೆಗಳಲ್ಲಿ ಸುಮಾರು 10 ಕೋಟಿ ಉದ್ಯೋಗ ಇದ್ದವು, ಈಗದು ಕೇವಲ ಎರಡೂವರೆ ಕೋಟಿಗೆ ಇಳಿದಿದೆ. ದೇಶದ ನಿರುದ್ಯೋಗ ಬೆಳವಣಿಗೆ ದರ 8% ಇದೆ. 2019 ರಲ್ಲಿ ರೈಲ್ವೇ ಇಲಾಖೆಯ ಸಿ ಮತ್ತು ಡಿ ದರ್ಜೆಯ 35,000 ಹುದ್ದೆಗಳಿಗೆ ಅರ್ಜಿ ಕರೆದಿದ್ದರು, ಇದಕ್ಕೆ ಎಸ್‌ಎಸ್‌ಎಲ್‌ಸಿ, ಪಿಯುಸಿ, ಡಿಗ್ರಿ, ಮಾಸ್ಟರ್ ಡಿಗ್ರಿ, ಪಿಹೆಚ್‌ಡಿ ಪದವೀಧರರು ಸೇರಿದಂತೆ ಒಟ್ಟು 1 ಕೋಟಿ 26 ಲಕ್ಷ ಜನ ಅರ್ಜಿ ಸಲ್ಲಿಸಿದ್ದರು. 1 ಹುದ್ದೆಗೆ ಸುಮಾರು 130 ಜನರಂತೆ ಅರ್ಜಿ ಹಾಕಿದ್ದರು. ಇದು ಇಂದಿನ ನಿರುದ್ಯೋಗ ಸಮಸ್ಯೆಯ ನೈಜ ಮುಖವನ್ನು ಅನಾವರಣಗೊಳಿಸಿದೆ.
ಜನರ ಜೇಬಿನಲ್ಲಿ ದುಡ್ಡಿದ್ದರೆ ಮಾತ್ರ ಜಿಡಿಪಿ ಬೆಳೆಯುತ್ತದೆ.
ಇಂದು 5 ಟ್ರಿಲಿಯನ್ ಡಾಲರ್ ಎಕಾನಮಿ ಮಾಡುತ್ತೇವೆ ಎಂದಿದ್ದರು. ಆಯ್ತಾ ಈಗ? ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕದಲ್ಲಿ ಚುನಾವಣೆ ಭಾಷಣ ಮಾಡುವಾಗ ನಮ್ಮದು 10% ಸರ್ಕಾರ ಎಂದು ಆಧಾರ ರಹಿತ ಆರೋಪ ಮಾಡಿದ್ದರು, ಇಂದು 40% ಕಮಿಷನ್ ಸರ್ಕಾರ ಇದೆ.
ವಿರೋಧ ಪಕ್ಷವಾಗಿ ನಾವು ಯಾವಾಗೆಲ್ಲ ಸರ್ಕಾರದ ವಿರುದ್ಧ ಆರೋಪಗಳು ಬರುತ್ತದೆ, ಜನ ವಿರೋಧಿ ಕಾನೂನುಗಳು ಜಾರಿಯಾಗುತ್ತದೆ ಆಗ ಹೋರಾಟ ಮಾಡಿದ್ದೇವೆ. ಈಶ್ವರಪ್ಪ ಅವರು ಸುಮ್ಮನೆ ರಾಜೀನಾಮೆ ನೀಡಿದ್ರಾ? ನಮ್ಮ ಹೋರಾಟದ ಫಲದಿಂದ ಅವರು ರಾಜೀನಾಮೆ ನೀಡಿದ್ದು. ನಮ್ಮ ಕೆಲಸವನ್ನು ನಾವು ಮಾಡುತ್ತಲೇ ಇದ್ದೇವೆ.
ಈಗ ಜಿಎಸ್‌ಟಿ ಹಾಕಿರೋದನ್ನು ಹೇಗೆ ಮತ್ತೆ ಕ್ಲೈಮ್ ಮಾಡೋಕೆ ಬರುತ್ತೆ? ಕ್ಲೈಮ್ ಮಾಡೋಕೆ ಬರೋದಾದ್ರೆ ಜಿಎಸ್‌ಟಿ ಯಾಕೆ ಹಾಕಿದ್ದು? ಜಿಎಸ್‌ಟಿ ಕೌನ್ಸಿಲ್ ನಲ್ಲಿ ಬಿಜೆಪಿಯವರ ಮಾತುಗಳೇ ನಡೆಯುವುದು. ಬಿಜೆಪಿಯೇತರ ರಾಜ್ಯಗಳು ಜಿಎಸ್‌ಟಿ ಪರಿಹಾರವನ್ನು ಮುಂದುವರೆಸಬೇಕು ಎಂದು ಜೂನ್ 29 ರಂದು ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಒತ್ತಾಯ ಮಾಡಿದ್ದವು, ಅದನ್ನು ಮಾಡಿದ್ರಾ? ಅವರ ಮಾತಿಗೆ ಬೆಲೆ ಕೊಟ್ಟಿದ್ದಾರ? ಜಿಎಸ್‌ಟಿ ಜಾರಿ ಮೊದಲು ರಾಜ್ಯದ ತೆರಿಗೆ ಬೆಳವಣಿಗೆ ದರ 14% ಇತ್ತು, ಈಗ 6% ಗೆ ಇಳಿದಿದೆ. 8% ನಷ್ಟವಾಗುತ್ತಿದೆ, ಇದನ್ನು ಯಾರು ಕೊಡೋರು? ಸೆಸ್ ಹಾಕಿದ್ರು, ಇದರಲ್ಲಿ ನಮಗೆ ಪಾಲಿಲ್ಲ ಎಂದು ಸಿದ್ಧರಾಮಯ್ಯ ಆಕ್ರೋಷ ವ್ಯಕ್ತಪಡಿಸಿದ್ದಾರೆ.