ಬೆಂಗಳೂರು: ಬೈಕ್ ಮೂಲಕ ಕಡಲ ತೀರದ ಸ್ವಚ್ಛತೆ, ಸಂರಕ್ಷಣೆಗಾಗಿ ‘ಸೇವ್ ಮರೈನ್ ಲೈಫ್’ ಜಾಗೃತಿಗಾಗಿ ರಾಜ್ಯದ ಕರಾವಳಿ ತೀರದಲ್ಲಿ ಸ್ವಚ್ಛತೆಯ ಬಗ್ಗೆ ಅರಿವು ಹಾಗೂ ಕಡಲ ತೀರದ ವಾತಾವರಣದ ಸಂರಕ್ಷಣೆಯ ಬಗ್ಗೆ ವ್ಯಾಪಕ ಜಾಗೃತಿ ಮೂಡಿಸುವ ಧ್ಯೇಯವನ್ನಿಟ್ಟುಕೊಂಡು ಬೆಂಗಳೂರಿನ ಸ್ವಾತಿ. ಆರ್ ಮತ್ತು ಅನಿತಾ. ಎಂ ಬೆಂಗಳೂರಿನಿಂದ ಕಾರವಾರದವರೆಗೆ ಬೈಕ್ ಚಲಾಯಿಸಿಕೊಂಡು ರಾಜ್ಯದ ಎಲ್ಲಾ ಕಡಲ ತೀರಗಳನ್ನು ಸಂಪರ್ಕಿಸಿ ಜನರಲ್ಲಿ ಅರಿವು ಮೂಡಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಈ ಐತಿಹಾಸಿಕ ಯಾತ್ರೆಗೆ ಇಂದು ಬೆಂಗಳೂರಿನ ವಿಧಾನಸೌಧದ ಎದುರು ಚಾಲನೆ ನೀಡಲಾಯಿತು. ಲಯನ್ಸ್ ಕ್ಲಬ್ ಫಸ್ಟ್ ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಸುರೇಶ್ ರಾಮು ಚಾಲನೆ ನೀಡಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಸ್ವಾತಿ. ಆರ್ ಮತ್ತು ಅನಿತಾ. ಎಂ., ವೈಸ್ ಡಿಸ್ಟ್ರಿಕ್ಟ್ ಗವರ್ನರ್ ಎನ್. ಮೋಹನ್ ಕುಮಾರ್, ಡಾ. ಜಿ. ಮೋಹನ್, ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಪ್ರೈಡ್, ಮೋಟೋ ಟಾರ್ಕ್ ಸದಸ್ಯರು ಮುಂತಾದವರು ಉಪಸ್ಥಿತರಿದ್ದರು.
ಈ ಬೈಕ್ ಯಾತ್ರೆಯು ಅಕ್ಟೋಬರ್ 9 ರಿಂದ ಅಕ್ಟೋಬರ್ 17ರವರೆಗೆ 8 ದಿನಗಳ ಕಾಲ ರಾಜ್ಯದ ಎಲ್ಲಾ ಕರಾವಳಿ ತೀರಗಳನ್ನು ಹಾದು ಹೋಗಲಿದೆ. ದಾರಿಯುದ್ದಕ್ಕೂ ಆಯ್ದ ಶೈಕ್ಷಣಿಕ ಸಂಸ್ಥೆಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳಲ್ಲಿ ಪರಿಸರ ಜಾಗೃತಿಯ ಅರಿವು ಮೂಡಿಸುವ ಯೋಜನೆ ಇದೆ. ಆಯ್ದ ಕಡಲ ತೀರಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಕೂಡ ಹಮ್ಮಿಕೊಳ್ಳಲಾಗುವುದು ಎಂದು ಸ್ವಾತಿ ಆರ್ ಮತ್ತು ಅನಿತಾ ಎಂ ತಿಳಿಸಿದ್ದಾರೆ.
ಮಹಿಳಾ ಸಬಲೀಕರಣಕ್ಕಾಗಿ ರಾಜ್ಯದಾದ್ಯಂತ ಬೈಕ್ ಮೂಲಕ ಸಂಚರಿಸಿ ಜಾಗೃತಿಯನ್ನು ಇಬ್ಬರು ಮಹಿಳೆಯರು ಮೂಡಿಸಿದ್ದಾರೆ. ಕನ್ನಡದ ಮೊದಲ ಮಹಿಳಾ ಮೊಟೋ ವ್ಲಾಗರ್ ಖ್ಯಾತಿಯ ಬೆಂಗಳೂರಿನ ಸ್ವಾತಿ. ಆರ್ ಮತ್ತು ಬೆಂಗಳೂರಿನ ಅನಿತಾ. ಎಂ ಇಬ್ಬರೂ ಈಗಾಗಲೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ದಾಖಲೆ ನಿರ್ಮಿಸಿರುವುದು ವಿಶೇಷ.
ಈ ಅಭಿಯಾನಕ್ಕೆ ಲಯನ್ಸ್ ಕ್ಲಬ್ ಆಫ್ ಬೆಂಗಳೂರು ಪ್ರೈಡ್, ಆರ್ಗನೈಸೇಶನ್ ಫಾರ್ ರೂರಲ್ ಡೆವಲಪ್ಮೆಂಟ್ ಎಜ್ಯುಕೇಶನ್ ಆಂಡ್ ರಿಸರ್ಚ್ ಸಂಸ್ಥೆ ಮತ್ತು ಮೋಟೋ ಟಾರ್ಕ್ ಸಹಕಾರ ನೀಡಿವೆ.