ಉಡುಪಿ, ಆ.5: ಜಾಗತಿಕ ಮಟ್ಟದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 133 ಕ್ಷಯ ಪ್ರಕರಣಗಳು ಕಂಡುಬಂದಿದ್ದು, ಭಾರತದಲ್ಲಿ ಒಂದು ಲಕ್ಷ ಜನಸಂಖ್ಯೆಗೆ 199 ಕ್ಷಯರೋಗ ಪ್ರಕರಣಗಳು ದಾಖಲಾಗಿರುತ್ತದೆ. ಕ್ಷಯ ರೋಗ ನಿರ್ಮೂಲನೆ ಮಾಡುವ ಗುರಿ ಸಾಧಿಸಲು ಕೇಂದ್ರ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯವು ರಾಜ್ಯ ಸರ್ಕಾರ ಹಾಗೂ ಕೇಂದ್ರಾಡಳಿತ ಪ್ರದೇಶಗಳೊಂದಿಗೆ ಕ್ಷಯರೋಗಕ್ಕೆ ತುತ್ತಾಗಬಹುದಾದ ಸಾಧ್ಯತೆ ಇರುವ ವಯಸ್ಕರಿಗೆ ಬಿಸಿಜಿ ಲಸಿಕೆಯನ್ನು ನೀಡುವುದರೊಂದಿಗೆ ಕ್ಷಯರೋಗದ ಅಪಾಯವನ್ನು ಕಡಿಮೆಗೊಳಿಸಲು ಪ್ರಯತ್ನಿಸುತ್ತಿದೆ. ದೇಶಾದ್ಯಂತ ಬಿಸಿಜಿ ಲಸಿಕೆ ಅಧ್ಯಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದರೊಂದಿಗೆ ಇದು ಸುರಕ್ಷಿತ ಹಾಗೂ ಪರಿಣಾಮಕಾರಿಯಾದ ಲಸಿಕೆ ಎಂದು ದೃಢಪಟ್ಟಿದೆ. 2025 ಕ್ಕೆ ಕ್ಷಯರೋಗ ನಿರ್ಮೂಲನೆ ಮಾಡುವ ಗುರಿಯನ್ನು ಸಾಧಿಸುವ ನಿಟ್ಟಿನಲ್ಲಿ ರಾಜ್ಯದ 6 ಜಿಲ್ಲೆಗಳಲ್ಲಿ ಬಿಸಿಜಿ ಲಸಿಕಾ ಕಾರ್ಯಕ್ರಮವನ್ನು ಆಗಸ್ಟ್ 01 ರಿಂದ 14 ರ ವರೆಗೆ ಹಮ್ಮಿಕೊಳ್ಳಲಾಗುತ್ತಿದ್ದು, ಕಳೆದ 5 ವರ್ಷಗಳಲ್ಲಿ ಕ್ಷಯರೋಗದ ಸೋಂಕಿಗೆ ತುತ್ತಾದವರು, ಸಕ್ರೀಯ ಕ್ಷಯರೋಗ ಪ್ರಕರಣದ ಹತ್ತಿರದ ಸೋಂಕಿತರು, ದೇಹಗಾತ್ರದ ಸೂಚ್ಯಾಂಕ (ಬಿ.ಎಮ್.ಐ) 18 ಕೆ.ಜಿ/ ಚದುರ ಮೀಟರ್, ಸ್ವಯಂ ವರದಿ ಮಾಡಿಕೊಂಡ ಧೂಮಪಾನಿಗಳು, ಸಕ್ಕರೆ ಕಾಯಿಲೆಯಿಂದ ಬಳಲುತ್ತಿರುವ ರೋಗಿಗಳು ಹಾಗೂ 60 ವರ್ಷಕ್ಕಿಂತ ಹೆಚ್ಚು ವಯಸ್ಸಿನ ಎಲ್ಲಾ ವಯಸ್ಕರು ಬಿಸಿಜಿ ಲಸಿಕೆಗೆ ಅರ್ಹರಾಗಿರುತ್ತಾರೆ.
ಬಿಸಿಜಿ ಲಸಿಕೆ ಪಡೆಯಬಹುದಾದ ಅರ್ಹ ಫಲಾನುಭವಿಗಳ ಸಮೀಕ್ಷೆ ನಡೆಸಲು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಿಬ್ಬಂದಿಗಳು ಕ್ಷೇತ್ರ ಭೇಟಿ ನೀಡಲಿದ್ದು, ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾ ಕ್ಷಯರೋಗ ನಿರ್ಮೂಲನಾ ಅಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.