ಬೆಂಗಳೂರು, ಆ.27: ಡೆಂಘಿ, ಮಲೇರಿಯಾದಂತಹ ಸಾಂಕ್ರಾಮಿಕ ರೋಗ ಹರಡುವ ಈಡಿಸ್ ಸೊಳ್ಳೆಗಳಿಗೆ ಖೆಡ್ಡ ತೋಡಲು ಆರೋಗ್ಯ ಇಲಾಖೆ ಹಾಗೂ ಬಿಬಿಎಂಪಿ ವಿಭಿನ್ನ ಪ್ರಯತ್ನಕ್ಕೆ ಕೈ ಹಾಕಿದೆ. ಸೊಳ್ಳೆಗಳನ್ನು ಆಕರ್ಷಿಸಿ ನಾಶಪಡಿಸುವ ಓವಿ ಟ್ರ್ಯಾಪ್ ಸಾಧನಗಳನ್ನು ಬೆಂಗಳೂರಿನ ಗೋಪಾಲಪುರದಲ್ಲಿ ಅಳವಡಿಸಲಾಗಿದ್ದು, ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಅವರು ಇಂದು ಚಾಲನೆ ನೀಡಿದ್ದಾರೆ. ಪ್ರಾಯೋಗಿಕವಾಗಿ ಗೋಪಾಲಪುರದಲ್ಲಿ 120 ಓವಿ ಟ್ರ್ಯಾಪ್ ಸಾಧನಗಳನ್ನು ಮನೆ ಮನೆಗಳಿಗೆ ಅಳವಡಿಸಲಾಗಿದೆ. ಓವಿ ಟ್ರ್ಯಾಪ್ ಬಯೋ ಸಾಧನವಾಗಿದ್ದು, ಈಡಿಸ್ ಸೊಳ್ಳೆಗಳನ್ನು ಆಕರ್ಷಿಸಿ ನಾಶಪಡಿಸುತ್ತದೆ.
ಈ ಬಗ್ಗೆ ಮಾಹಿತಿ ನೀಡಿರುವ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್, ಈಡಿಸ್ ಸೊಳ್ಳೆಗಳನ್ನು ನಾಶಪಡಿಸುವ ಬಯೋ ಸಾಧನಗಳನ್ನು ಪ್ರಾಯೋಗಿಕವಾಗಿ ಬಳಕೆ ಮಾಡುತ್ತಿದ್ದೇವೆ. ಓವಿ ಟ್ರ್ಯಾಪ್ ಸಾಧನಗಳಿಂದ ಈಡಿಸ್ ಸೊಳ್ಳೆಗಳ ನಿಯಂತ್ರಣ ಸಾಧ್ಯವಾದರೆ ಡೆಂಘಿ, ಮಲೇರಿಯಾ, ಝೀಕಾದಂತಹ ಸಾಂಕ್ರಾಮಿಕ ರೋಗಗಳನ್ನು ನಿಯಂತ್ರಣಕ್ಕೆ ತರಬಹುದು. ಉತ್ತಮ ಫಲಿತಾಂಶ ದೊರೆತರೆ ರಾಜ್ಯದಾದ್ಯಂತ ಓವಿ ಟ್ರ್ಯಾಪ್ ಸಾಧನಗಳನ್ನು ಅಳವಡಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.