ಬೆಂಗಳೂರು, ಫೆ.1: ದೇಶದ ಮಹಿಳೆಯರು, ರೈತರು ಹಾಗೂ ಯುವಜನತೆಯ ಭವಿಷ್ಯದ ಮೇಲೆ ನೇರವಾಗಿ ಸಕಾರಾತ್ಮಕ ಪರಿಣಾಮ ಬೀರುವ ಯಾವುದೇ ಗುಣಾತ್ಮಕ ಸಂಗತಿಗಳನ್ನು ಈ ಬಜೆಟ್ ಹೊಂದಿಲ್ಲ ಎಂದು ಮುಖ್ಯಮಂತ್ರಿ ಸಿದ್ಧರಾಮಯ್ಯ ಹೇಳಿದ್ದಾರೆ. ಇಡೀ ದೇಶದಲ್ಲಿಯೇ ಮಧ್ಯಮ, ಸಣ್ಣ, ಅತೀ ಸಣ್ಣ ಕೈಗಾರಿಕೆಗಳು ಕೇಂದ್ರ ಸರ್ಕಾರದಿಂದ ಯಾವುದೇ ಗುಣಾತ್ಮಕ ನೆರವಿಲ್ಲದೆ ಸಾಲುಸಾಲಾಗಿ ಮುಚ್ಚಿಕೊಂಡಿವೆ. ಕೋವಿಡ್‌ನಲ್ಲಿ ನಿಂತ ಇವುಗಳ ಪ್ರಗತಿಯ ಚಕ್ರ ಇಂದಿಗೂ ಪೂರ್ಣವಾಗಿ ಆರಂಭವಾಗಿಲ್ಲ. ಸರ್ಕಾರದ ಯಾವುದೇ ನಡೆ ಈ ಉದ್ಯಮಗಳಲ್ಲಿ ಪ್ರತ್ಯಕ್ಷ, ಪರೋಕ್ಷ ಚೈತನ್ಯ ತುಂಬಿಲ್ಲ. ಇವುಗಳ ಬಲವರ್ಧನೆಯ ಬಗ್ಗೆ ಕೇಂದ್ರ ಸರ್ಕಾರವು ಯಾವುದೇ ನಿರ್ದಿಷ್ಟ ನೀತಿ, ಯೋಜನೆಗಳನ್ನು ಈ ಬಜೆಟ್‌ನಲ್ಲಿಯೂ ಹೊಂದಿಲ್ಲದಿರುವುದು ಆಘಾತಕಾರಿ. ಇದರಿಂದ ಮುಂದಿನ ದಿನಗಳಲ್ಲಿ ಈ ಉದ್ಯಮಗಳು ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದ್ದು ನಿರುದ್ಯೋಗದ ಸಂಖ್ಯೆ ಮತ್ತೂ ಹೆಚ್ಚಲಿದೆ. ರೈತರಿಗೆ ತಮ್ಮ ಬೆಳೆಗೆಳಿಗೆ ದೊರೆಯಬೇಕಾದ ಕನಿಷ್ಠ ಬೆಂಬಲ ಬೆಲೆಯನ್ನು ಸಾಧ್ಯವಾಗಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯಾವುದೇ ಪ್ರಯತ್ನ ಮಾಡಿಲ್ಲ.
ಈ ನಿಟ್ಟಿನಲ್ಲಿ ಸೂಕ್ತ ತಿದ್ದುಪಡಿ ತರಬೇಕು ಎನ್ನುವ ಕೋರಿಕೆಗೆ ಕಾನೂನಿನ ಬಲ ದೊರೆತಿಲ್ಲ. ಬಜೆಟ್‌ನಲ್ಲಿ ರೈತರ ಬೇಡಿಕೆಗಳಿಗೆ ಸೂಕ್ತ ಸ್ಪಂದನೆ ಇಲ್ಲ. ಹೀಗಿರುವಾಗ ರೈತರ ಆದಾಯ ಹೆಚ್ಚುವುದಾದರೂ ಹೇಗೆ? ಯುವಜನತೆಗೆ ಕೌಶಲ್ಯ ತರಬೇತಿ ನೀಡುತ್ತಿರುವ ಬಗ್ಗೆ ನರೇಂದ್ರ ಮೋದಿ ಸರ್ಕಾರ ಹೇಳುತ್ತಿದೆಯಾದರೂ ಉದ್ಯೋಗ ಸೃಷ್ಟಿಯಲ್ಲಿ ಗಣನೀಯ ವೈಫಲ್ಯ ಕಂಡಿದೆ. ಇಂದು ಕೌಶಲ್ಯ ಹೊಂದಿರುವ ಯುವ ಪೀಳಿಗೆ ಸಹ ತಮ್ಮ ಕೌಶಲ್ಯ, ವಿದ್ಯೆಗೆ ಪೂರಕವಲ್ಲದ ಗಿಗ್ ಜಾಬ್‌ಗಳಲ್ಲಿ ತೊಡಗಿಕೊಂಡಿದ್ದಾರೆ. ಇದು ಉತ್ಪಾದನಾ ವಲಯದಲ್ಲಿ ಸೂಕ್ತ ಮಟ್ಟದಲ್ಲಿ ಉದ್ಯೋಗ ಸೃಷ್ಟಿಯಾಗುತ್ತಿಲ್ಲ ಎನ್ನುವುದಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಸಿಎಂ ಹೇಳಿದ್ದಾರೆ.