ಉಡುಪಿ: ಕೇಂದ್ರ ಶಿಕ್ಷಣ ಸಚಿವಾಲಯದ ಶಾಸನಬದ್ಧ ಅಂಗವಾದ ನವದೆಹಲಿಯ ಅಖಿಲ ಭಾರತ ತಾಂತ್ರಿಕ ಶಿಕ್ಷಣ ಪರಿಷತ್ತು, ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ನಿರ್ವಹಣಾ ವಿಭಾಗದಡಿ ಸ್ನಾತಕೋತ್ತರ ವ್ಯವಹಾರ ನಿರ್ವಹಣಾ ಕೋರ್ಸ್ ನಡೆಸಲು (ಮಾಸ್ಟರ್ ಆಫ್ ಬಿಸಿನೆಸ್ ಅಡ್ಮಿನಿಸ್ಟ್ರೇಷನ್) ಅನುಮತಿ ನೀಡಿದೆ.
ಮುಕ್ತ ಹಾಗೂ ದೂರ ಶಿಕ್ಷಣ ಮಾದರಿಯಡಿ ಎಂಬಿಎ ಕೋರ್ಸ್ ನಡೆಸಲು ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಮಾನ್ಯತೆ ಪಡೆದಿರುವ ದೇಶದ ಏಕೈಕ ವಿಶ್ವವಿದ್ಯಾನಿಲಯ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದು, ಪ್ರಸಕ್ತ ಸಾಲಿನಲ್ಲಿ ಮುಕ್ತ ಹಾಗೂ ದೂರ ಶಿಕ್ಷಣ ಕಲಿಕಾ ವಿಧಾನದಡಿ ಎಂಬಿಎ ಕೋರ್ಸ್ಗೆ (ಜನರಲ್ ಅಡ್ಮಿನಿಸ್ಟ್ರೇಷನ್) 10,000 ಸೀಟುಗಳಿಗೆ ಪ್ರವೇಶಾತಿ ಕಲ್ಪಿಸಲು ಎ.ಐ.ಸಿ.ಟಿ.ಇ ಅನುಮತಿಸಿದೆ.
ರಾಜ್ಯ ಮುಕ್ತ ವಿಶ್ವವಿದ್ಯಾನಿಲಯಕ್ಕೆ ತಾಂತ್ರಿಕ ಕೋರ್ಸ್ ಆರಂಭಿಸಲು ಎ.ಐ.ಸಿ.ಟಿ.ಇ ಅನುಮತಿ ನೀಡಿರುವುದಕ್ಕೆ ಕುಲಪತಿ ಪ್ರೊ. ಎಸ್. ವಿದ್ಯಾಶಂಕರ್ ಸಂತಸ ವ್ಯಕ್ತಪಡಿಸಿದ್ದು, ದೇಶಾದ್ಯಂತ ಒಟ್ಟು 18 ಮುಕ್ತ ವಿಶ್ವವಿದ್ಯಾನಿಲಯಗಳು ಕಾರ್ಯನಿರ್ವಹಿಸುತ್ತಿದ್ದು, ಈ ಪೈಕಿ ಎಐಸಿಟಿಇಯಿಂದ ಮಾನ್ಯತೆ ಪಡೆದ ದೇಶದ ಮೊದಲ ವಿಶ್ವವಿದ್ಯಾನಿಲಯ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಎಂದು ಕುಲಸಚಿವ ಪ್ರೊ. ಆರ್. ರಾಜಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.