ನವದೆಹಲಿ, ಜ.25: ರಾಜ್ಯ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಬಿಜೆಪಿಯಿಂದ ಕಾಂಗ್ರೆಸ್‌ಗೆ ನಿಷ್ಠೆ ಬದಲಿಸಿದ್ದ ಪ್ರಮುಖ ಲಿಂಗಾಯತ ನಾಯಕ, ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಗುರುವಾರ ನವದೆಹಲಿಯ ಪಕ್ಷದ ಪ್ರಧಾನ ಕಛೇರಿಯಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಭೂಪೇಂದ್ರ ಯಾದವ್, ಕೇಂದ್ರದ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಸಮ್ಮುಖದಲ್ಲಿ ಮರಳಿ ಬಿಜೆಪಿ ಸೇರ್ಪಡೆಗೊಂಡರು. ಇದಕ್ಕೂ ಮೊದಲು ಶೆಟ್ಟರ್ ಗೃಹ ಸಚಿವ ಅಮಿತ್ ಶಾ ಭೇಟಿಯಾಗಿ ಪಕ್ಷದ ಸೇರ್ಪಡೆಯ ಬಗ್ಗೆ ಚರ್ಚಿಸಿದ್ದರು.
ಮೋದಿ ಮತ್ತೊಮ್ಮೆ ಪ್ರಧಾನಿ: ಪ್ರಧಾನಿ ನರೇಂದ್ರ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಬೇಕು ಎಂಬ ಉದ್ದೇಶವನ್ನು ಇಟ್ಟುಕೊಂಡು ಬಿಜೆಪಿಗೆ ಮರಳಿದ್ದೇನೆ. ಕಳೆದ 7 ತಿಂಗಳಿನಿಂದ ನಾನು ಮರಳಿ ಬರಬೇಕೆಂದು ಕಾರ್ಯಕರ್ತರ ಒತ್ತಡವೂ ಇತ್ತು. ಯಡಿಯೂರಪ್ಪ ಮತ್ತು ವಿಜಯೇಂದ್ರ ಅವರಿಗೂ ನಾನು ಮರಳಿ ಬರಬೇಕು ಎಂಬ ಅಪೇಕ್ಷೆ ಇತ್ತು. ಇದನ್ನೆಲ್ಲ ಮನಗಂಡು ದೃಢ ನಿರ್ಧಾರ ಕೈಗೊಂಡಿದ್ದೇನೆ ಎಂದು ಬಿಜೆಪಿಗೆ ಸೇರ್ಪಡೆಯಾದ ನಂತರ ಜಗದೀಶ್ ಶೆಟ್ಟರ್ ಮಾಧ್ಯಮ ಪ್ರತಿನಿಧಿಗಳನ್ನು ಉದ್ದೇಶಿಸಿ ಮಾತನಾಡಿದರು.