ಬೆಂಗಳೂರು, ಆ.29: ಸಾಮಾಜಿಕ ಜಾಲತಾಣಗಳ ಇನ್‌ಫ್ಲುಯೆನ್ಸರ್‌ಗಳಿಗೂ ಸರ್ಕಾರಿ ಜಾಹೀರಾತು ನೀಡಲು ಅವಕಾಶ ಮಾಡಿಕೊಡುವ ನೂತನ ಜಾಹೀರಾತು ನೀತಿಯನ್ನು ರಾಜ್ಯ ಸರ್ಕಾರ ಜಾರಿಗೆ ತಂದಿದೆ. ʼಕರ್ನಾಟಕ ಡಿಜಿಟಲ್ ಜಾಹೀರಾತು ಮಾರ್ಗಸೂಚಿ–2024’ ಅನ್ನು ಜಾರಿ ಮಾಡಲಾಗಿದ್ದು, ಎಲ್ಲಾ ಸ್ವರೂಪದ ಡಿಜಿಟಲ್ ಮಾಧ್ಯಮಗಳಲ್ಲಿ ಸರ್ಕಾರಿ ಜಾಹೀರಾತು ನೀಡಲು ಇದು ಅನುವು ಮಾಡಿಕೊಡಲಿದೆ. ಬ್ರ್ಯಾಂಡ್ ರಾಯಭಾರಿಗಳು, ಪ್ರಾಯೋಜಿತ ಪೋಸ್ಟ್‌ಗಳು, ಅತಿಥಿ ಬ್ಲಾಗ್‌ಗಳು, ಕಂಟೆಂಟ್ ಸಹಯೋಗ, ವಿಷಯಾಧಾರಿತ ಅಭಿಯಾನ, ಕಾರ್ಯಕ್ರಮ ಪ್ರಚಾರ, ವಿಮರ್ಶೆ ಮತ್ತು ಹ್ಯಾಶ್‌ಟ್ಯಾಗ್ ಅಭಿಯಾನಗಳ ಸ್ವರೂಪದಲ್ಲಿ ಇನ್‌ಫ್ಲುಯೆನ್ಸರ್‌ಗಳಿಗೆ ಜಾಹೀರಾತು ನೀಡಲಾಗುತ್ತದೆ.
ಯಾವುದಾದರೂ ಒಂದು ಸಾಮಾಜಿಕ ಜಾಲತಾಣಗಳಲ್ಲಿ ನಿಗದಿತ ಸಂಖ್ಯೆಯ ಫಾಲೋವರ್‌ಗಳನ್ನು ಹೊಂದಿರುವ ಇನ್‌ಫ್ಲುಯೆನ್ಸರ್‌ಗಳಿಗೆ ಸರ್ಕಾರಿ ಜಾಹೀರಾತು ದೊರೆಯಲಿದೆ. ಇನ್‌ಫ್ಲುಯೆನ್ಸರ್‌ಗಳಲ್ಲಿ ಮೂರು ವರ್ಗೀಕರಣ ಮಾಡಲಾಗಿದೆ. ಫಾಲೋವರ್‌ಗಳ ಸಂಖ್ಯೆ 1 ಲಕ್ಷದಿಂದ 5 ಲಕ್ಷದವರೆಗೆ ಇದ್ದರೆ ‘ನ್ಯಾನೊ’, 5 ಲಕ್ಷದಿಂದ 10 ಲಕ್ಷದವರೆಗೆ ‘ಮೈಕ್ರೊ’ ಮತ್ತು 10 ಲಕ್ಷಕ್ಕಿಂತ ಹೆಚ್ಚು ಇದ್ದರೆ ‘ಮ್ಯಾಕ್ರೊ’ ಇನ್‌ಫ್ಲುಯೆನ್ಸರ್‌ಗಳು ಎಂದು ವರ್ಗೀಕರಿಸಲಾಗಿದೆ.
ವಾರ್ತಾ ಇಲಾಖೆಯು ನೋಂದಾಯಿತ ಏಜೆನ್ಸಿಗಳ ಮೂಲಕ ಜಾಹೀರಾತು ನೀಡಲಿದೆ. ಕೇಂದ್ರ ಸರ್ಕಾರದ ಡಿಜಿಟಲ್ ಜಾಹೀರಾತು ನೀತಿಯ ಅಡಿಯಲ್ಲಿ ನಿಗದಿಪಡಿಸಲಾದ ಅಥವಾ ಇಲಾಖೆಯೇ ಸ್ವತಂತ್ರವಾಗಿ ನಿಗದಿಪಡಿಸಿದ ದರದಲ್ಲಿ ಜಾಹೀರಾತು ನೀಡಲಾಗುತ್ತದೆ.