ಬೆಂಗಳೂರು: ಸೋಮವಾರ ರಾತ್ರಿ ಏಕಾಏಕಿ ಸುರಿದ ಭಾರಿ ಮಳೆಗೆ ಬೆಂಗಳೂರಿನ ಹಲವೆಡೆ ಕೃತಕ ನೆರೆಯ ಪರಿಸ್ಥಿತಿ ನಿರ್ಮಾಣವಾಯಿತು. ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಹೊರಭಾಗ ಜಲಾವೃತಗೊಂಡಿತು. ವಿಮಾನ ನಿಲ್ದಾಣಕ್ಕೆ ಸಂಪರ್ಕಿಸುವ ರಸ್ತೆಯೂ ಜಲಾವೃತಗೊಂಡ ಕಾರಣ ಪ್ರಯಾಣಿಕರು ವಿಮಾನ ನಿಲ್ದಾಣ ತಲುಪಲು ಹರಸಾಹಸಪಟ್ಟರು. ವಿಮಾನ ನಿಲ್ದಾಣದಲ್ಲಿದ್ದ ಪ್ರಯಾಣಿಕರನ್ನು ಟ್ರಾಕ್ಟರ್ ಮೂಲಕ ಹೊರಗೆ ಕರೆತರಲಾಯಿತು.
ಓರ್ವ ಬಲಿ:
ಭಾರಿ ಮಳೆಗೆ ಜಲಾವೃತಗೊಂಡಿದ್ದ ಮನೆಯಲ್ಲಿ ಶಾರ್ಟ್ ಸರ್ಕಿಟ್ ನಿಂದ ಓರ್ವ ವ್ಯಕ್ತಿ ಮೃತಪಟ್ಟ ಘಟನೆ ಬೆಂಗಳೂರಿನ ಕೊಣಪ್ಪನ ಅಗ್ರಹಾರದಲ್ಲಿ ನಡೆದಿದೆ. ಈ ಮನೆಯಲ್ಲಿ ಇಬ್ಬರು ವಾಸವಾಗಿದ್ದರು, ಎರಡನೆಯ ವ್ಯಕ್ತಿ ವಿದ್ಯುತ್ ಆಘಾತದಿಂದ ಪಾರಾಗಿದ್ದಾರೆ ಎಂದು ಬೆಂಗಳೂರು ನಗರ ಪಶ್ಚಿಮ ವಿಭಾಗ ಪೊಲೀಸ್ ಉಪ ಆಯುಕ್ತ ಡಾ. ಸಂಜೀವ್ ಎಂ. ಪಾಟೀಲ್ ಹೇಳಿದ್ದಾರೆ.
ಮಂಗಳವಾರ ಬೆಂಗಳೂರಿನಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.