ಬೆಂಗಳೂರು: ಇತಿಹಾಸದ ಜ್ಞಾನವಿಲ್ಲದೆ, ಹತಾಶ ಮನೋಭಾವನೆಯಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ನಿಂದಿಸುವ ಮೂಲಕ ಕಾಂಗ್ರೆಸ್ ಪಕ್ಷ ಹಿಂದೂ ಧರ್ಮಕ್ಕೆ, ರಾಷ್ಟ್ರ ಪ್ರೇಮಿಗಳಿಗೆ, ರಾಷ್ಟ್ರೀಯತೆಗೆ ಘೋರ ಅಪಮಾನ ಎಸಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಹೇಳಿದ್ದಾರೆ.
ಗಾಂಧೀಜಿ, ಬಾಬಾ ಸಾಹೇಬ್ ಅಂಬೇಡ್ಕರ್, ಜೆಪಿ ರಂತಹ ಮಹಾನ್ ನಾಯಕರೇ ರಾಷ್ಟ್ರೀಯ ಸ್ವಯಂಸೇವಕ ಸಂಘದ ಸೇವೆ, ಸಮರ್ಪಣೆ, ಸಮಾನತೆ, ಭಾತೃತ್ವದ ಭಾವನೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿರುವುದು ಇತಿಹಾಸದಲ್ಲಿ ದಾಖಲಾಗಿದೆ.
1962ರ ಭಾರತ-ಚೀನಾ ಯುದ್ಧದ ಸಂದರ್ಭದಲ್ಲಿ ಆರ್.ಎಸ್.ಎಸ್ ಸ್ವಯಂಸೇವಕರು ಸಲ್ಲಿಸಿದ ಸೇವೆಯನ್ನು ಗುರುತಿಸಿ ಅಂದಿನ ಪ್ರಧಾನಿ ಜವಾಹರ್ ಲಾಲ್ ನೆಹರೂ ಅವರು 1963ರ ಗಣರಾಜ್ಯೋತ್ಸವ ದಿನಾಚರಣೆಯ ಪರೇಡ್ ಗೆ ಸ್ವಯಂಸೇವಕರನ್ನು ಆಹ್ವಾನಿಸಿದ್ದರು. ಮಾಜಿ ರಾಷ್ಟ್ರಪತಿ ಪ್ರಣಬ್ ಮುಖರ್ಜಿರವರು 2018ರಲ್ಲಿ ಆರ್.ಎಸ್.ಎಸ್ ನ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ರಾಜಕೀಯ ಲಾಭಕ್ಕಾಗಿ ದೇಶಭಕ್ತ ಸಂಘಟನೆಗಳನ್ನು ನಿಂದಿಸುವ ಕಾಂಗ್ರೆಸ್ ಪಕ್ಷದ ಈ ನಡೆಯನ್ನ ಯಾವ ದೇಶಪ್ರೇಮಿಯೂ ಕ್ಷಮಿಸುವುದಿಲ್ಲ ಎಂದು ಸಚಿವ ಸುಧಾಕರ್ ಹೇಳಿದರು.