ಬೆಂಗಳೂರು: ರಾಜ್ಯದಲ್ಲಿ ಈಗಾಗಲೇ ಇರುವ ನೈಟ್ ಕರ್ಫ್ಯೂ ಸೆಪ್ಟೆಂಬರ್ 25ರಿಂದ ರಾತ್ರಿ 10 ಗಂಟೆಯಿಂದ ಬೆಳಿಗ್ಗೆ 5 ಗಂಟೆಯವರೆಗೆ ಮುಂದುವರಿಯಲಿದೆ. ಇಂದು ಪ್ರಕಟವಾಗಿರುವ ರಾಜ್ಯ ಸರ್ಕಾರದ ಮಾರ್ಗಸೂಚಿಯಲ್ಲಿ ಕೊರೊನಾಗೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಈಗಾಗಲೇ ಇದ್ದ ನಿಯಮಗಳನ್ನು ಪರಿಷ್ಕ್ರರಿಸಲಾಗಿದೆ.
* ಶೇ. 1ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಶೇ 100 ಆಸನದ ಸಾಮರ್ಥ್ಯದಲ್ಲಿ ಕೊರೊನಾ ನಿಯಮಗಳನ್ನು ಪಾಲಿಸಿ ಸಿನೆಮಾ ಥಿಯೇಟರ್, ಮಲ್ಟಿಪ್ಲೆಕ್ಸ್, ರಂಗಮಂದಿರ, ಆಡಿಟೋರಿಯಮ್ ಗಳು ಅಕ್ಟೋಬರ್ 1ರಿಂದ ಕಾರ್ಯನಿರ್ವಹಿಸಲು ಅನುಮತಿ ನೀಡಲಾಗಿದೆ. ಶೇ 1ಕ್ಕಿಂತ ಅಧಿಕ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಶೇ 50 ಆಸನದ ಸಾಮರ್ಥ್ಯದ ನಿಯಮ ಮುಂದುವರಿಯಲಿದೆ. ಕನಿಷ್ಠ ಒಂದು ಡೋಸ್ ಲಸಿಕೆ ಪಡೆದವರಿಗೆ ಮಾತ್ರ ಪ್ರವೇಶ.
* ಅಕ್ಟೋಬರ್ 3ರಿಂದ ಕೊರೊನಾ ಮುಂಜಾಗ್ರತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಅನುಸರಿಸಿ ಪಬ್ ಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.
* ಶೇ. 1ಕ್ಕಿಂತ ಕಡಿಮೆ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ 6ರಿಂದ 12ನೇ ತರಗತಿಗಳಿಗೆ ವಾರಕ್ಕೆ 5 ದಿನಗಳ ತರಗತಿಗಳಿಗೆ ಅನುಮತಿ ನೀಡಲಾಗಿದೆ. ಶನಿವಾರ ಮತ್ತು ಭಾನುವಾರ ಶಾಲೆಗಳಲ್ಲಿ ಸ್ಯಾನಿಟೈಸೇಶನ್ ಮಾಡಬೇಕು. ಶೇ. 1ಕ್ಕಿಂತ ಅಧಿಕ ಪಾಸಿಟಿವಿಟಿ ಇರುವ ಜಿಲ್ಲೆಗಳಲ್ಲಿ ಈಗಾಗಲೇ ಜಾರಿಯಲ್ಲಿರುವ ನಿಯಮ ಮುಂದುವರಿಯಲಿದೆ.
* ಕೇರಳ, ಮಹಾರಾಷ್ಟ್ರ ಗಡಿ ಭಾಗಗಳ ಜಿಲ್ಲೆಗಳಲ್ಲಿ ಚೆಕ್ ಪೋಸ್ಟ್ ಗಳಲ್ಲಿ ಕಟ್ಟುನಿಟ್ಟಾದ ತಪಾಸಣೆ ಮುಂದುವರಿಯಲಿದೆ.