ಬೆಂಗಳೂರು, ಜು. 15: ಮನೆ ಯಜಮಾನಿಗೆ 2000 ರೂ ನೀಡುವ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾದ ಗೃಹ ಲಕ್ಷ್ಮೀ ಯೋಜನೆಗೆ ಅರ್ಜಿ ಸಲ್ಲಿಕೆಗೆ ದಿನಾಂಕ ನಿಗದಿಯಾಗಿದ್ದು, ಶನಿವಾರ ಬೆಂಗಳೂರಿನಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು.
ಗೃಹ ಲಕ್ಷ್ಮೀ ಯೋಜನೆಗೆ ಜುಲೈ 19ರಿಂದ ಅರ್ಜಿ ಸಲ್ಲಿಕೆ ಆರಂಭವಾಗಲಿದೆ. ರಾಷ್ಟ್ರೀಯ ನಾಯಕರನ್ನು ಕರೆಸಿ ಯೋಜನೆಗೆ ಚಾಲನೆ ನೀಡುವ ಬಗ್ಗೆ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಆಧಾರ್ ಕಡ್ಡಾಯ: ಕರ್ನಾಟಕ ಒನ್, ಗ್ರಾಮ್ ಒನ್, ಬಾಪೂಜಿ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಕೆ ಮಾಡಬಹುದು. ಅರ್ಜಿ ಸಲ್ಲಿಕೆಗೆ ಆಧಾರ್ ಕಾರ್ಡ್ ಕಡ್ಡಾಯವಾಗಿದೆ. ಗೃಹಲಕ್ಷ್ಮೀ ಯೋಜನೆಯಿಂದ 1.28 ಕೋಟಿ ಕುಟುಂಬಗಳಿಗೆ ಲಾಭವಾಗಲಿದೆ.
ಯಾರಿಗೆ ಅನ್ವಯಿಸುವುದಿಲ್ಲ?: ಜಿ. ಎಸ್. ಟಿ. ಮತ್ತು ಆದಾಯ ತೆರಿಗೆ ಪಾವತಿಸುವವರಿಗೆ ಈ ಯೋಜನೆ ಅನ್ವಯವಾಗುವುದಿಲ್ಲ. ಅರ್ಜಿ ಅಥವಾ ಯೋಜನೆ ಕುರಿತು ಗೊಂದಲವಿದ್ದರೆ 8147500500 ಮೊಬೈಲ್ ಸಂಖ್ಯೆಯನ್ನು ಸಂಪರ್ಕಿಸಬಹುದು.
ಅರ್ಜಿ ಫಾರ್ಮ್ ತುಂಬಲು ನೆರವಾಗಲು ಪ್ರಜಾ ಪ್ರತಿನಿಧಿಗಳನ್ನು ನೇಮಕ ಮಾಡಲಾಗುವುದು. ಅವರಿಗೆ ಯಾವುದೇ ರೀತಿಯ ಹಣ ನೀಡಬಾರದು. ಸರಕಾರವೇ ಅವರಿಗೆ ಹಣ ನೀಡಲಿದೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಹೇಳಿದರು.