ಬೆಂಗಳೂರು, ಡಿ.22: ಗೋಲ್ಡನ್ ಚಾರಿಯಟ್ ರೈಲು ಯಾತ್ರೆ ಪುನಾರಾರಂಭಗೊಂಡಿದ್ದು, ಫೆಬ್ರವರಿ 29 ರಿಂದ 12 ರವರೆಗೆ ಗ್ಲಿಂಪ್ಸಸ್ ಆಫ್ ಕರ್ನಾಟಕ ಪ್ರವಾಸವು ಬೆಂಗಳೂರಿನಿಂದ ನಂಜನಗೂಡು, ಮೈಸೂರು, ಹೊಸಪೇಟೆ ಮಾರ್ಗವಾಗಿ ಸಂಚಾರ ಮಾಡಲಿದೆ. ಕರ್ನಾಟಕದ ಸಾಂಸ್ಕೃತಿಕ ಶ್ರೀಮಂತಿಕೆಯನ್ನು ಇದು ಪ್ರತಿನಿಧಿಸಲಿದೆ. ಗೋಲ್ಡನ್ ಚಾರಿಯಟ್ ರೈಲು ಜಾಗತಿಕವಾಗಿ ಅತ್ಯುತ್ತಮ ಐಷಾರಾಮಿ ರೈಲು ಪ್ರಯಾಣಗಳಲ್ಲಿ ಒಂದಾಗಿದ್ದು ಅಂತಾರಾಷ್ಟ್ರೀಯ ಮೆಚ್ಚುಗೆಯನ್ನು ಗಳಿಸಿದೆ.
ಗೋಲ್ಡನ್ ಚಾರಿಯೇಟ್ ಐಷಾರಾಮಿ ರೈಲು ಪ್ರವಾಸ ದಕ್ಷಿಣ ಭಾರತದ ಶ್ರೀಮಂತ ಸಂಸ್ಕೃತಿ, ಪರಂಪರೆ ಹಾಗೂ ಐತಿಹಾಸಿಕ ಸ್ಥಳಗಳ ಅನಾವರಣಕ್ಕೆ ಮುಕುಟಪ್ರಾಯವೆನಿಸಿದೆ. ಈ ಗೋಲ್ಡನ್ ಚಾರಿಯೇಟ್ ಪ್ರವಾಸೋದ್ಯಮ ವಿಶ್ವದ ಪ್ರಸಿದ್ಧ ಪರಂಪರೆಯ ತಾಣಗಳ ಜೊತೆಗೆ ಪಶ್ಚಿಮ ಘಟ್ಟಗಳು, ಪ್ರಾಚೀನ ಕಡಲತೀರಗಳು, ಸಾಂಸ್ಕೃತಿಕ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯುತ್ತದೆ. ರೈಲಿಗೆ 44 ಸುಸುಜ್ಜಿತ ಕ್ಯಾಬಿನ್‍ಗಳು, ಎನ್ ಸೂಟ್ ಸ್ನಾನಗೃಹ, ವೈಫೈ ಸೌಲಭ್ಯಗಳನ್ನು ಒಳಗೊಂಡಿದೆ. ರುಚಿ ಮತ್ತು ನಳಪಾಕ ಹೆಸರಿನ ಎರಡು ಹೋಟೆಲ್‍ಗಳು, ಲಾಂಜ್ ಬಾರ್, ಫಿಟ್‍ನೆಸ್ ಸೆಂಟರ್ ಇತರೆ ಸೌಕರ್ಯಗಳನ್ನು ಕಲ್ಪಿಸಲಾಗಿದೆ ಎಂದು ಪ್ರವಾಸೋದ್ಯಮ ಸಚಿವರಾದ ಎಚ್. ಕೆ. ಪಾಟೀಲ್ ತಿಳಿಸಿದ್ದಾರೆ.