ಬೆಂಗಳೂರು: ದೇವರಾಜ ಅರಸು ಅವರು ಭೂ ಸುಧಾರಣೆ, ಜೀತ ವಿಮುಕ್ತಿ, ಋಣಮುಕ್ತ ಯೋಜನೆ ಸೇರಿದಂತೆ ಹಲವು ಕ್ರಾಂತಿಕಾರಕ ಕಾರ್ಯಕ್ರಮಗಳನ್ನು ಜಾರಿಗೊಳಿಸಿ ಜನಪರ ಯೋಜನೆಗಳನ್ನು ಯಥಾವತ್ತಾಗಿ ಜಾರಿಗೆ ತಂದು ಜನರಿಗೆ ತಲುಪಿಸಿದವರು ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಹೇಳಿದರು.
ಕನಸಿನಲ್ಲಿಯೂ ವಿಧಾನಸೌಧ ನೋಡದವರನ್ನು, ವಿಧಾನಸೌಧದ ಮೆಟ್ಟಿಲು ಹತ್ತುತ್ತೇವೆ ಎಂದು ನಿರೀಕ್ಷೆ ಮಾಡದವರನ್ನು ಕರೆ ತಂದು ಶಾಸಕ, ಮಂತ್ರಿಗಳನ್ನಾಗಿ ಮಾಡಿದರು. ಹಿಂದುಳಿದವರಿಗೆ ನಿಜವಾದ ಮೀಸಲು ಸೌಲಭ್ಯ ಕೊಟ್ಟವರು ದೇವರಾಜ ಅರಸು. ನಾನು ವರುಣಾ ನಾಲೆಗೆ ಆಗ್ರಹಿಸಿ ಚಳವಳಿ ಮಾಡುತ್ತಿದ್ದೆ. ಆಗ ಗುಂಡೂರಾಯರು ಮುಖ್ಯಮಂತ್ರಿಯಾಗಿದ್ದರು. ಉಪವಾಸ ಸತ್ಯಾಗ್ರಹ ಮಾಡುತ್ತಿದ್ದ ಸ್ಥಳಕ್ಕೆ ಅರಸು ಅವರು ಬಂದಿದ್ದರು. ಆಗ ಮೊದಲ ಬಾರಿಗೆ ನಾನು ಅವರನ್ನು ನೋಡಿದ್ದು.
ರಾಜ್ಯ ರಾಜಕಾರಣದಲ್ಲಿ ದೇವರಾಜ ಅರಸು ಅವರು ಒಬ್ಬ ಧೀಮಂತ ನಾಯಕ. ಅವರು ಮಾಡಿರುವ ಕೆಲಸಗಳೇ ನಮಗೆ ಸ್ಫೂರ್ತಿ. ರಾಜೀವ್ ಗಾಂಧಿ ಹಾಗೂ ಅರಸು ಅವರು ಮಾಡಿರುವ ಜನಪರ ಕಾರ್ಯಗಳನ್ನು ನೆನಪು ಮಾಡಿಕೊಳ್ಳುವುದೇ ಅವರಿಗೆ ಸಲ್ಲಿಸುವ ನಿಜವಾದ ಗೌರವ ಎಂದರು.