ಕಾರವಾರ: ಹೆಣ್ಣು ಗಂಡು ಸಮಾನತೆ, ಮಹಿಳಾ ಕಾನೂನುಗಳು, ಮಹಿಳಾ ಪ್ರಕರಣಗಳ ನಿರ್ವಹಣೆ ವಿಷಯಗಳಲ್ಲಿ ತರಬೇತುದಾರರನ್ನು ಬೆಳೆಸುವುದು ಮತ್ತು ಈ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಇವುಗಳ ಅರಿವು ಮೂಡಿಸುವ ಉದ್ದೇಶದೊಂದಿಗೆ ಪ್ಯಾರಾಲೀಗಲ್ ತರಬೇತಿಯನ್ನು ಡೀಡ್ಸ್ ಹಮ್ಮಿಕೊಂಡಿದ್ದು, ಡೀಡ್ಸ್ ಮಂಗಳೂರು, ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರವಾರ ಧರ್ಮಪ್ರಾಂತ್ಯ ಅಭಿವೃದ್ಧಿ ಮಂಡಳಿ(ಕೆಡಿಡಿಸಿ), ಚೈಲ್ಡ್ ಫಂಡ್ ಕಾರವಾರ, ಕಾರವಾರ ಗ್ರಾಮೀಣ ಮಹಿಳೆಯರ ಮತ್ತು ಮಕ್ಕಳ ಅಭಿವೃದ್ಧಿ ಸಂಸ್ಥೆ, ಬದುಕು ಶಿಕ್ಷಣ ಮತ್ತು ಗ್ರಾಮೀಣ ಅಭಿವೃದ್ಧಿ ಸಂಸ್ಥೆ ಕಾರವಾರ ಸಹಭಾಗಿತ್ವದಲ್ಲಿ ಮಹಿಳಾ ಕಾನೂನುಗಳು ಬಗೆಗಿನ ಎರಡು ದಿನಗಳ ತರಬೇತಿಯು ಕಾರವಾರದ ಕೆಡಿಡಿಸಿ ಸಂಸ್ಥೆಯಲ್ಲಿ ನಡೆಯಿತು.
ಉತ್ತರ ಕನ್ನಡ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಪ್ಯಾನೆಲ್ ವಕೀಲರಾದ ರಾಜೇಶ್ವರಿ ವಿ ನಾಯಕ್, ಮಕ್ಕಳ ಮೇಲಿನ ಲೈಂಗಿಕ ಅಪರಾಧಗಳ ರಕ್ಷಣಾ ಕಾಯ್ದೆ(ಪೋಕ್ಸೊ) ಬಗ್ಗೆ ಮಾಹಿತಿ ನೀಡುತ್ತಾ ಮಕ್ಕಳ ಮೇಲೆ ಲೈಂಗಿಕ
ಅಪರಾಧಗಳು ಹೆಚ್ಚುತ್ತಿದ್ದು ಮಕ್ಕಳು ಮನೆಯವರಿಂದ, ನೆರೆಕರೆಯವರಿಂದ, ಪರಿಚಿತರಿಂದ ಲೈಂಗಿಕ ದೌರ್ಜನ್ಯಕ್ಕೊಳಗಾಗುತ್ತಿದ್ದಾರೆ. ಅಪರಾಧಿಗಳಿಗೆ ಸರಿಯಾದ ಶಿಕ್ಷೆಯಾಗಬೇಕೆನ್ನುವ ಹಿನ್ನೆಲೆಯಲ್ಲಿ ಅಪರಾಧಗಳನ್ನು ವಿಂಗಡನೆ ಮಾಡಿದ್ದು 3 ವರುಷದಿಂದ ಜೀವಾವಧಿ-ಮರಣದಂಡನೆ ತನಕ ಶಿಕ್ಷೆ ನೀಡಲಾಗುತ್ತದೆ.
ಮಗು ತನ್ನ ಸಮಸ್ಯೆಯನ್ನು ಭಯವಿಲ್ಲದೆ ಹೇಳುವಂತಾಗಲು ಮತ್ತು ಶೀಘ್ರ ನ್ಯಾಯ ನೀಡಲು ವಿಶೇಷ ನ್ಯಾಯಾಲಯಗಳನ್ನು ಸ್ಥಾಪಿಸಲಾಗಿದೆ. ಮಕ್ಕಳಿಗೆ ಸುರಕ್ಷಿತ ಮತ್ತು ಅಸುರಕ್ಷಿತ ಸ್ಪರ್ಶದ ಮಾಹಿತಿಯನ್ನು ನೀಡಬೇಕಾಗಿದೆ. ಜತೆಗೆ ಮನೆಯವರು ಪ್ರತಿದಿನ ಮಕ್ಕಳ ಕಲಿಕೆ, ಎದುರಿಸಿದ ಸಮಸ್ಯೆಗಳನ್ನು ಕೇಳುವುದರಿಂದ, ಸಾರ್ವಜನಿಕರು ಯಾವುದೇ ಲೈಂಗಿಕ ಹಿಂಸೆಯನ್ನು ಗಮನಿಸಿದಲ್ಲಿ ತಕ್ಷಣ ದೂರು ನೀಡುವ ಮೂಲಕ ಮಕ್ಕಳು ಹಿಂಸೆಗೊಳಗಾಗುವುದನ್ನು ತಪ್ಪಿಸಬಹುದಾಗಿದೆ ಎಂದರು.
ಡೀಡ್ಸ್‌ನ ಕಾನೂನು ಸಂಯೋಜಕರಾದ ದೀಪಾ, ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ರಕ್ಷಣಾ ಕಾಯ್ದೆ ಬಗ್ಗೆ ಮಾಹಿತಿ ನೀಡುತ್ತಾ ಒಂದು ಮನೆಯಲ್ಲಿ ವಾಸಿಸುವ ಮಹಿಳೆಯರು ಅವರಿಗೆ ಮನೆಯವರಿಂದ ದೌರ್ಜನ್ಯಗಳಾದಾಗ ಮಹಿಳಾ
ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿರುವ ರಕ್ಷಣಾಧಿಕಾರಿಗೆ, ಮಹಿಳಾ ಸಹಾಯವಾಣಿ 181ಕ್ಕೆ ದೂರು ಸಲ್ಲಿಸಬೇಕು.
ನೊಂದ ಮಹಿಳೆಗೆ ರಕ್ಷಣೆಯ ಆದೇಶ, ವಾಸ್ತವ್ಯದ ಆದೇಶ, ಆರ್ಥಿಕ ಪರಿಹಾರವನ್ನು ನ್ಯಾಯಾಲಯ ನೀಡುತ್ತದೆ. 60 ದಿನದೊಳಗೆ ನೊಂದ ಮಹಿಳೆಯ ದೂರನ್ನು ಪರಿಹರಿಸಬೇಕೆಂದಿದೆ. ಮಹಿಳೆಯರು ಹೆಚ್ಚು ಶಿಕ್ಷಣ ಪಡೆಯುವುದು, ಒಂದು ಉದ್ಯೋಗ ಹೊಂದುವುದು, ಮನೆ-ನೆರೆಕರೆಯವರೊಂದಿಗೆ ಉತ್ತಮ ಸಂಬಂಧವನ್ನು ಹೊಂದುವುದು, ಉಳಿತಾಯ ಮಾಡುವುದು, ಯಾವುದಾದರೂ ಸಂಘಸಂಸ್ಥೆಯಲ್ಲಿ ಸದಸ್ಯರಾಗುವುದು, ಹಿಂಸೆ ಆದಾಗ ಇತರರಲ್ಲಿ ಹೇಳಿಕೊಳ್ಳುವುದು, ಪ್ರತಿಭಟಿಸುವುದು, ದೂರು ನೀಡುವುದು, ಸಾಕ್ಷ್ಯ ಅಗತ್ಯ ದಾಖಲೆಗಳನ್ನು ಇಟ್ಟುಕೊಳ್ಳುವುದರ ಮೂಲಕ ಹಿಂಸೆಯನ್ನು ತಡೆಯಬಹುದಾಗಿದೆ ಎಂದರು.
ತರಬೇತಿ ಸಂದರ್ಭದಲ್ಲಿ ಶಿಬಿರಾರ್ಥಿಗಳು ಜಿಲ್ಲಾ ನ್ಯಾಯಾಲಯಕ್ಕೆ ಭೇಟಿ ನೀಡಿ ಪ್ರಕರಣಗಳ ವಿಚಾರಣೆ ನಡೆಯವುದನ್ನು ವೀಕ್ಷಿಸಿದರು. ಡೀಡ್ಸ್‌ನ ಕಾರ್ಯಕ್ರಮ ಸಂಯೋಜಕರಾದ ತುಕಾರಾಮ ಎಕ್ಕಾರು ಅವರು ಶಿಬಿರಾರ್ಥಿಗಳು ಮುಂದೆ ಅವರ
ಪ್ರದೇಶದಲ್ಲಿ ನಡೆಸಬೇಕಾದ ಮಹಿಳಾ ಕಾನೂನುಗಳ ಬಗೆಗಿನ ತಳಮಟ್ಟದ ಮಾಹಿತಿ ಕಾರ್ಯಕ್ರಮದ ಮಾಹಿತಿ ನೀಡುತ್ತಾ, ಶಿಬಿರಾರ್ಥಿಗಳಿಂದ ಅಣಕು ಪ್ರದರ್ಶನ ಮಾಡಿಸಿದರು.
ಇದೇ ಸಂದರ್ಭದಲ್ಲಿ ಶಿಬಿರಾರ್ಥಿಗಳು ತಾವು ಮೊದಲ ಹಂತದ ಲಿಂಗತ್ವ ತರಬೇತಿಯ ನಂತರ ಹಮ್ಮಿಕೊಂಡ ಮಾಹಿತಿ ಕಾರ್ಯಕ್ರಮದ ಅನುಭವಗಳು, ತಾವು, ಜನರು ಮಾಡಿಕೊಂಡ ಬದಲಾವಣೆಗಳನ್ನು ಹಂಚಿಕೊಂಡರು.
ತರಬೇತಿಯಲ್ಲಿ ಡೀಡ್ಸ್‌ನ ವಕಾಲತ್ತು ಸಂಯೋಜಕಿ ಖುಶಿ ದೇಸಾಯಿ, ಸಹಾಯಕ ಹಣಕಾಸು ವ್ಯವಸ್ಥಾಪಕಿ ನಿಖಿತಾ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ್ದರು.