ಬೆಂಗಳೂರು, ಜೂ.30: ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಪಟ್ಟಣದ ತುಂಬೆಲ್ಲಾ ಕಸದ ರಾಶಿ ತುಂಬಿಕೊಂಡಿದ್ದು, ಆಗೊಮ್ಮೆ ಈಗೊಮ್ಮೆ ಸಾರ್ವಜನಿಕರ ಒತ್ತಡಕ್ಕೆ ಮಣಿದು ಕಸವನ್ನು ವಿಲೇವಾರಿ ಮಾಡಲಾಗುತ್ತಿದೆ ಎಂಬುದಾಗಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿತ್ತು. ಇದನ್ನು ಗಮನಿಸಿದ ಮುಖ್ಯಮಂತ್ರಿ ಕಚೇರಿಯ ಸಾರ್ವಜನಿಕ ಕುಂದುಕೊರತೆ ವಿಭಾಗದ ವಿಶೇಷ ಕರ್ತವ್ಯಾಧಿಕಾರಿಗಳು ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಂಡಿರುತ್ತಾರೆ.
ಕೆ.ಸಿ ರಸ್ತೆ ಪ್ರದೇಶದಲ್ಲಿ ಪ್ರತಿ ದಿನವು ತ್ಯಾಜ್ಯ ವಿಲೇವಾರಿ ಮಾಡಲಾಗುತ್ತಿದೆ. ಈ ಸ್ಥಳದಲ್ಲಿ ತ್ಯಾಜ್ಯ ಎಸೆಯುವವರಿಗೆ ದಂಡ ವಿಧಿಸಲಾಗಿದೆ. ಪುರಸಭೆಯ ಯಾವುದೇ ಸ್ಥಳದಲ್ಲಿ ಹೆಚ್ಚಿನ ಸಮಯದವರೆಗೆ ತ್ಯಾಜ್ಯ ದಾಸ್ತಾನು ಇರುವುದಿಲ್ಲ. ಪುರಸಭೆ ವ್ಯಾಪ್ತಿಯ ಎಲ್ಲಾ 23 ವಾರ್ಡ್‌ಗಳಲ್ಲಿ ಪ್ರತಿದಿನ ಸರಿಯಾಗಿ ಮನೆ ಮನೆ ಕಸ ಸಂಗ್ರಹಣೆ ವಾಹನ ಹೋಗುತ್ತಿದ್ದರೂ ಸಹ ಕೆಲವು ನಾಗರಿಕರು ರಾತ್ರಿ ವೇಳೆಯಲ್ಲಿ ತ್ಯಾಜ್ಯವನ್ನು ರಸ್ತೆ ಮೇಲೆ ಎಸೆದು ಹೋಗುತ್ತಿದ್ದು, ಅಂತಹವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ.
ಅಂಕೋಲಾ ಪುರಸಭೆ ವ್ಯಾಪ್ತಿಯಲ್ಲಿ ಬರುವ ರಸ್ತೆಗಳು, ದೇಗುಲದ ಸುತ್ತ-ಮುತ್ತ, ಅಂಚೆ ಕಚೇರಿಯ ಎದುರು ಸೇರಿದಂತೆ ಹಲವು ಪ್ರಮುಖ ಬೀದಿಗಳಲ್ಲಿ ಬಿದ್ದ ಕಸಗಳನ್ನು ಕೂಡಲೇ ವಿಲೇವಾರಿ ಮಾಡಲಾಗಿರುತ್ತದೆ. ಜೊತೆಗೆ ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಕಸ ಎಸೆಯುವವರಿಗೆ ದಂಡ ಹಾಕಲಾಗುವುದು ಎಂಬ ಬಗ್ಗೆ ಸ್ವಚ್ಛ ಸರ್ವೇಕ್ಷಣಾ ನಾಮಫಲಕ ಅಳವಡಿಸಲಾಗಿದೆ. ಹಾಗೂ ಕಸವನ್ನು ಎಸೆಯುವವರಿಗೆ ದಂಡ ವಿಧಿಸಲಾಗುತ್ತಿದೆ. ಕರಪತ್ರ, ಮೈಕ್ ಅನೌನ್ಸ್‌ಮೆಂಟ್ ಮೂಲಕ ತ್ಯಾಜ್ಯ ಎಸೆಯದಂತೆ, ತ್ಯಾಜ್ಯವನ್ನು ವಿಂಗಡಿಸಿ ಪುರಸಭೆ ವಾಹನಕ್ಕೆ ನೀಡುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ.
ಸ್ಥಳೀಯವಾಗಿ ನೀವು ಎದುರಿಸುತ್ತಿರುವ ಸಮಸ್ಯೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರಲು ಮುಖ್ಯಮಂತ್ರಿಗಳ ವಿಶೇಷ ಕರ್ತವ್ಯ ಅಧಿಕಾರಿಗಳ @osd_cmkarnataka `ಎಕ್ಸ್ʼ ಖಾತೆಗೆ ಟ್ಯಾಗ್ ಮಾಡಿ.