ಬೆಂಗಳೂರು, ಫೆ. 17: (ಉಡುಪಿ ಬುಲೆಟಿನ್ ವರದಿ) ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ಶುಕ್ರವಾರ ರಾಜ್ಯ ಬಜೆಟ್ ಮಂಡಿಸಿದರು.
ಬಜೆಟ್ ಪ್ರಮುಖ ಹೈಲೆಟ್ಸ್: ಹಳೆ ಮಂಗಳೂರು ಬಂದರಿನಲ್ಲಿ ಹೆಚ್ಚುವರಿ ಶಿಪ್ ಯಾರ್ಡ್ ಕಾರ್ಯಾಚರಣೆ ಪ್ರಾರಂಭಕ್ಕೆ ಕ್ರಮ. ಪ್ರವಾಸೋದ್ಯಮಕ್ಕೆ ಉತ್ತೇಜನ ನೀಡಲು ಉಡುಪಿ ಜಿಲ್ಲೆಯ ಬೈಂದೂರಿನಲ್ಲಿ ಮರೀನಾ ಅಭಿವೃದ್ಧಿಗೆ ಕ್ರಮ. ಗುರುಪುರ ಮತ್ತು ನೇತ್ರಾವತಿ ನದಿಗಳ ಪಾತ್ರದಲ್ಲಿ ಬಾರ್ಜ್ ಸೇವೆ. ಕರಾವಳಿ ಪ್ರದೇಶದಲ್ಲಿ ಮಂಗಳೂರು-ಕಾರವಾರ-ಗೋವಾ-ಮುಂಬಯಿ ವಾಟರ್ ವೇಸ್ ಅಭಿವೃದ್ಧಿಗೆ ಕ್ರಮ. ಮೆಗಾ ಮತ್ತು ಮಿನಿ ಜವಳಿ ಪಾರ್ಕ್ ಸ್ಥಾಪನೆಗೆ ಕ್ರಮ, ಇದರಿಂದ 25 ಸಾವಿರ ಉದ್ಯೋಗ ಸೃಜನೆಯ ನಿರೀಕ್ಷೆ. ಪದವಿ ಶಿಕ್ಷಣ ಮುಗಿಸಿ ಮೂರು ವರ್ಷಗಳ ನಂತರವೂ ಉದ್ಯೋಗ ದೊರೆಯದ ಯುವಜನರಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಭಾಗವಹಿಸಲು 2000 ರೂ. ಆರ್ಥಿಕ ನೆರವು. ಆಟೋ, ಲಾರಿ, ಟ್ಯಾಕ್ಸಿ ಚಾಲಕರು, ಇ-ಕಾಮರ್ಸ್ ಡೆಲಿವರಿ ಸೇವೆ ನೀಡುತ್ತಿರುವವರಿಗೆ ಮುಖ್ಯಮಂತ್ರಿ ವಿಮಾ ಯೋಜನೆಯಡಿ 4 ಲಕ್ಷ ರೂ. ವಿಮಾ ಸೌಲಭ್ಯ, ಈ ಯೋಜನೆಗೆ ಒಟ್ಟು 57 ಕೋಟಿ ಅನುದಾನ.
ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಸಹಾಯಕರು, ಬಿಸಿಯೂಟ ತಯಾರಕರು ಹಾಗೂ ಸಹಾಯಕರು ಗ್ರಾಮ ಸಹಾಯಕರು ಹಾಗೂ ಗ್ರಂಥಪಾಲಕರ ಮಾಸಿಕ ಗೌರವಧನ ರೂ. 1 ಸಾವಿರ ಹೆಚ್ಚಳ. ಪ್ರಸಕ್ತ ಸಾಲಿನಲ್ಲಿ 5 ಲಕ್ಷ ಮನೆಗಳ ನಿರ್ಮಾಣದ ಗುರಿ. ಅಸಂಘಟಿಕ ಕಾರ್ಮಿಕರ ಕ್ಷೇಮಾಭಿವೃದ್ಧಿಗೆ ಕಲ್ಯಾಣ ನಿಧಿ ಸ್ಥಾಪನೆ. ವಿದೇಶಗಳಲ್ಲಿ ವ್ಯಾಸಂಗ ಪಡೆಯುವ ಅಲ್ಪಸಂಖ್ಯಾತ ವಿದ್ಯಾರ್ಥಿಗಳಿಗೆ 20 ಲಕ್ಷ ರೂ. ವರೆಗೆ ಬಡ್ಡಿರಹಿತ ಸಾಲ. ಅಲ್ಪಸಂಖ್ಯಾತ ಪದವೀಧರ 300 ಮಹಿಳೆಯರಿಗೆ 3 ಕೋಟಿ ರೂ. ವೆಚ್ಚದಲ್ಲಿ ಐಐಎಂಬಿಯಲ್ಲಿ ಉದ್ಯಮಶೀಲತಾ ತರಬೇತಿ. ವಕ್ಫ್ ಆಸ್ತಿ ಸಂರಕ್ಷಣೆ ಹಾಗೂ ಖಬರಸ್ತಾನ್ ಅಭಿವೃದ್ಧಿಗೆ ಒಟ್ಟು 20 ಕೋಟಿ ರೂ. ಅನುದಾನ. ಅಲ್ಪಸಂಖ್ಯಾತ ಅಭಿವೃದ್ಧಿ ನಿಗಮಕ್ಕೆ 110 ಕೋಟಿ ರೂ. ಅನುದಾನ.
ಪಶ್ಚಿಮ ಘಟ್ಟಗಳ ವ್ಯಾಪ್ತಿಯ ಜಿಲ್ಲೆಗಳಲ್ಲಿ 500 ಕಾಲು ಸಂಕಗಳ ನಿರ್ಮಾಣಕ್ಕೆ 250 ಕೋಟಿ ರೂ. ವೆಚ್ಚ. ಕೊಡಗು ಜಿಲ್ಲೆಯ ಮುಖ್ಯ ರಸ್ತೆಗಳ ಅಭಿವೃದ್ಧಿಗೆ 100 ಕೋಟಿ ರೂ. ವಿಶೇಷ ಪ್ಯಾಕೇಜ್.ದಾವಣಗೆರೆ ಹಾಗೂ ಕೊಪ್ಪಳ ವಿಮಾನ ನಿಲ್ದಾಣ ಕಾಮಗಾರಿ ಪ್ರಾರಂಭಿಸಲು ಕ್ರಮ. ಸಾಗರಮಾಲಾ ಯೋಜನೆಯಡಿ 597 ಕೋಟಿ ರೂ. ವೆಚ್ಚದಲ್ಲಿ 12 ಹೊಸ ಕಿರುಬಂದರುಗಳ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ. ಉತ್ತರ ಕನ್ನಡ ಜಿಲ್ಲೆಯ ಕೇಣಿ ಹಾಗೂ ಪಾವಿನಕುರ್ವೆಯಲ್ಲಿ ಡೀಪ್ ವಾಟರ್ ಆಲ್ ವೆದರ್ ಗ್ರೀನ್ ಫೀಲ್ಡ್ ಬಂದರು ಅಭಿವೃದ್ಧಿಗೆ ಕ್ರಮ.
ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಶಿಡ್ಲಘಟ್ಟದಲ್ಲಿ ರೂ. 75 ಕೋಟಿ ವೆಚ್ಚದಲ್ಲಿ ಹೈಟೆಕ್ ರೇಷ್ಮೆ ಗೂಡು ಮಾರುಕಟ್ಟೆ ಸ್ಥಾಪನೆ. ಕರ್ನಾಟಕ ದ್ರಾಕ್ಷಿ ಮತ್ತು ದ್ರಾಕ್ಷಾರಸ ಮಂಡಳಿಯ ಮೂಲಕ ರೂ. 100 ಕೋಟಿ ವೆಚ್ಚದ ವಿಶೇಷ ಯೋಜನೆ ಜಾರಿ. ಮೀನುಗಾರರಿಗೆ ನೀಡುವ ಡೀಸೆಲ್ ಸಬ್ಸಿಡಿ 2 ಲಕ್ಷ ಕಿಲೋ ಲೀಟರ್ ಗೆ ಏರಿಕೆ ಹಾಗೂ ಮತ್ಸ್ಯ ಸಂಪದ ಯೋಜನೆಯಡಿ ಕಾರವಳಿ ಜಿಲ್ಲೆಗಳಲ್ಲಿ ಕೃತಕ ಬಂಡೆ ಸಾಲುಗಳ ಸ್ಥಾಪನೆ. 10 ಸಾವಿರ ಮೀನುಗಾರರಿಗೆ ವಸತಿ ಸೌಲಭ್ಯ ಹಾಗೂ ಮೀನುಗಾರರ ದೋಣಿಗಳ ಸುರಕ್ಷತೆಗೆ ಜಿ.ಪಿ.ಎಸ್ ಟ್ರ್ಯಾಕಿಂಗ್ ವ್ಯವಸ್ಥೆಗೆ ರೂ. 17 ಕೋಟಿ ಅನುದಾನ.
ಪ.ಜಾತಿ ಮತ್ತು ಪ. ಪಂಗಡದವರ ಜಮೀನು ಸಂರಕ್ಷಣೆಗೆ ಪಿಟಿಸಿ.ಎಲ್ ಕಾಯ್ದೆ ತಿದ್ದುಪಡಿಗೆ ಕ್ರಮ. ಪ.ಜಾತಿ ಮತ್ತು ಪ.ಪಂಗಡಗಳ ವಿವಿಧ ನಿಗಮಗಳಿಗೆ ಒಟ್ಟು 795 ಕೋಟಿ ರೂ. ಅನುದಾನ. 100 ಕ್ರೈಸ್ ವಸತಿ ಶಾಲೆಗಳಲ್ಲಿ ಪದವಿಪೂರ್ವ ಶಿಕ್ಷಣ ಆರಂಭ; 10 ವಸತಿ ಶಾಲೆಗಳಲ್ಲಿ ಕ್ರೀಡಾ ಸೌಲಭ್ಯಕ್ಕೆ ರೂ. 10 ಕೋಟಿ ಅನುದಾನ. ಬಾಬು ಜಗಜೀವನರಾಂ ಸ್ವಯಂ ಉದ್ಯೋಗ ಯೋಜನೆಯಡಿ ಎಲೆಕ್ಟ್ರಿಕ್ ತ್ರಿಚಕ್ರ ಅಥವಾ 4 ಚಕ್ರದ ಸರಕು ವಾಹನ ಖರೀದಿಗೆ ಶೇ. 50 ರಷ್ಟು ಸಹಾಯಧನ ನೀಡಲು ರೂ. 400 ಕೋಟಿ ಅನುದಾನ ಮೀಸಲು. ಭೂರಹಿತ ಮಹಿಳಾ ಕೃಷಿ ಕಾರ್ಮಿಕರಿಗೆ ಮಾಸಿಕ 500 ರೂ. ಸಹಾಯಧನ.
ಸಂಘಟಿಕ ವಲಯದಲ್ಲಿ ದುಡಿಯುವ ಅಂದಾಜು 30 ಲಕ್ಷ ಮಹಿಳೆಯರಿಗೆ ಉಚಿತ ಬಸ್ ಪಾಸ್ ಒದಗಿಸಲು ರೂ. 1000 ಕೋಟಿ ಅನುದಾನ. ವಿದ್ಯಾವಾಹಿನಿ ಯೋಜನೆಯಡಿಯಲ್ಲಿ ಶಾಲಾ ಕಾಲೇಜುಗಳ 8 ಲಕ್ಷ ವಿದ್ಯಾರ್ಥಿನಿಯರಿಗೆ ಉಚಿತ ಬಸ್ ಪಾಸ್ ವಿತರಿಸಲು ರೂ. 350 ಕೋಟಿ. ಸಹಕಾರ ವಲಯದಲ್ಲಿ 45,000 ಮಹಿಳಾ ಸ್ವಸಹಾಯ ಗುಂಪುಗಳಿಗೆ ಶೂನ್ಯ ಬಡ್ಡಿ ದರದಲ್ಲಿ 1,800 ಕೋಟಿ ರೂ. ಸಾಲವಿತರಣೆ ಗುರಿ. ನಗರ ಪ್ರದೇಶದ ಕಟ್ಟಡ ನಿರ್ಮಾಣ ಮಹಿಳಾ ಕಾರ್ಮಿಕರಿಗೆ ನೆರವಾಗಲು ನಗರ ಪ್ರದೇಶದಲ್ಲಿ 4,000 ಶಿಶುವಿಹಾರ ಹಾಗೂ ನರೇಗಾ ಯೋಜನೆ ಮಹಿಳಾ ಕಾರ್ಮಿಕರ ಭಾಗವಹಿಸುವಿಕೆ ಹೆಚ್ಚಿಸಲು 500 ಶಿಶುವಿಹಾರ ಪ್ರಾರಂಭ. ಸ್ವಚೇತನ ಯೋಜನೆಯಡಿ 5000 ವಿಶೇಷ ಚೇತನರಿಗೆ ಯಂತ್ರಚಾಲಿತ ದ್ವಿಚಕ್ರ ವಾಹನ ವಿತರಣೆಗೆ 50 ಕೋಟಿ ರೂ. ಅನುದಾನ. ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ ನಿವೃತ್ತಿ ಉಪಧನ ನೀಡಲು 40 ಕೋಟಿ ರೂ. ಅನುದಾನ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯನ್ನು ಮಕ್ಕಳ ಪೌಷ್ಟಿಕತೆ ಇಲಾಖೆ ಮತ್ತು ಮಹಿಳಾ ಸಬಲೀಕರಣ ಇಲಾಖೆಯಾಗಿ ವಿಭಜನೆ.
ಆರೋಗ್ಯ ಪುಷ್ಟಿ ಯೋಜನೆಯಡಿ ಅರ್ಹ ವಿವಾಹಿತ ಮಹಿಳೆಯರಿಗೆ ಅಪೌಷ್ಟಿಕತೆ ಮತ್ತು ರಕ್ತಹೀನತೆ ನಿವಾರಣೆಗೆ ಅಂಗನವಾಡಿಗಳಲ್ಲಿ ಬಿಸಿಯೂಟ ಮತ್ತು ಪ್ರೊಫೈಲಾಕ್ಟಿಕ್ ಐ.ಎಫ್.ಎ ಮಾತ್ರೆ ನೀಡಲು ಕ್ರಮ. ಉಚಿತ ಡಯಾಲಿಸಿಸ್ ಸೇವೆ 1 ಲಕ್ಷ ಸೈಕಲ್ ಗಳಿಗೆ ವಿಸ್ತರಣೆ. ಏಳು ತಾಲೂಕು ಕೇಂದ್ರಗಳ ಸಮುದಾಯ ಆರೋಗ್ಯ ಕೇಂದ್ರಗಳನ್ನು 100 ಹಾಸಿಗೆ ಸಾಮರ್ಥ್ಯದ ತಾಲೂಕು ಆಸ್ಪತ್ರೆಯಾಗಿ ಉನ್ನತೀಕರಣ. ಪಿ.ಎಂ.ಎ.ಬಿ.ಎಚ್.ಐ.ಎಂ ಅಡಿಯಲ್ಲಿ 50 ಹಾಸಿಗೆಗಳ 8 ಕ್ರಿಟಿಕಲ್ ಕೇರ್ ಬ್ಲಾಕ್ ಹಾಗೂ 100 ಹಾಸಿಗೆಗಳ 2 ಕ್ರಿಟಿಕಲ್ ಕೇರ್ ಬ್ಲಾಕ್ ಸ್ಥಾಪನೆ. ಹಾವೇರಿ ಜಿಲ್ಲೆಯ ಸವಣೂರಿನಲ್ಲಿ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಸ್ಥಾಪನೆ.
ರಾಯಚೂರಿನಲ್ಲಿ ಏಮ್ಸ್ ಮಾದರಿ ಆಸ್ಪತ್ರೆ ಹಾಗೂ ಉತ್ತರ ಕನ್ನಡ ಜಿಲ್ಲೆಯ ಕುಮಟಾದಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಸ್ಥಾಪನೆ. ನಿಮ್ಹ್ಯಾನ್ಸ್ ಸಂಸ್ಥೆಯ ಆವರಣದಲ್ಲಿ 146 ರೂ. ಕೋಟಿ ವೆಚ್ಚದಲ್ಲಿ ಅಂಗಾಂಗ ಜೋಡಣೆಗಾಗಿ ಮೀಸಲಿರಿಸಿ, ದೇಶದ ಪ್ರಪ್ರಥಮ ಸಾರ್ವಜನಿಕ ಆಸ್ಪತ್ರೆ ಸ್ಥಾಪಿಸಲು ಕ್ರಮ. ಬೆಂಗಳೂರು, ಮೈಸೂರು, ಹುಬ್ಬಳ್ಳಿ ಮತ್ತು ಕಲಬುರಗಿಯ 4 ವೈದ್ಯಕೀಯ ವಿಜ್ಞಾನ ಸಂಸ್ಥೆಗಳಲ್ಲಿ 6 ಕೋಟಿ ರೂ. ವೆಚ್ಚದಲ್ಲಿ ಐವಿಎಫ್ ಕ್ಲಿನಿಕ್ ಪ್ರಾರಂಭ.
ಸರ್ಕಾರಿ ಪದವಿಪೂರ್ವ ಮತ್ತು ಸರ್ಕಾರಿ ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಪೂರ್ಣ ಶುಲ್ಕ ವಿನಾಯಿತಿ. ವಿವೇಕ ಯೋಜನೆಯಡಿ ಅನುಮೋದನೆಯಾದ 7,601 ಶಾಲಾ ಕೊಠಡಿಗಳು ಸೇರಿದಂತೆ ಒಟ್ಟು 9,556 ಶಾಲಾ ಕೊಠಡಿಗಳ ನಿರ್ಮಾಣ. ಸಿಂಪಿಗರ ಮಕ್ಕಳಿಗೆ ವಿದ್ಯಾನಿಧಿ ಸೌಲಭ್ಯ ವಿಸ್ತರಣೆ. ಪಿ.ಎಂ.ಶ್ರೀ ಯೋಜನೆಯಡಿ ಉತ್ತಮ ಮೂಲಭೂತ ಸೌಕರ್ಯ ಹಾಗೂ ಕಲಿಕಾ ಸಂಪನ್ಮೂಲ ಒದಗಿಸಲು 100 ಕೋಟಿ ರೂ. ಅನುದಾನ. ಶಾಲೆಗಳಲ್ಲಿ 5,581 ಶೌಚಾಲಯ ನಿರ್ಮಾಣಕ್ಕೆ 80 ಕೋಟಿ ರೂ. ಹಂಚಿಕೆ.
‘ವೃದ್ಧಿ’ ಯೋಜನೆಯಡಿ ಅತಿ ಹೆಚ್ಚು ದಾಖಲಾತಿ ಹೊಂದಿರುವ ಸ.ಪ್ರ.ದ.ಕಾಲೇಜು ಹಾಗೂ ಸರ್ಕಾರಿ ಪಾಲಿಟೆಕ್ನಿಕ್ ಗಳಿಗೆ ಅಗತ್ಯ ಸೌಲಭ್ಯಕ್ಕಾಗಿ ತಲಾ 2 ಕೋಟಿ ರೂ. ಅನುದಾನ. 100 ಆಯ್ದ ಪದವಿ ಕಾಲೇಜುಗಳಲ್ಲಿ ಪ್ರೊ. ಸಿ.ಎನ್.ಆರ್. ರಾವ್ ವಿಜ್ಞಾನ ವಿಭಾಗ ಆರಂಭ. ಏಳು ಎಂಜಿನಿಯರಿಂಗ್ ಕಾಲೇಜುಗಳನ್ನು ಕೆ.ಐ.ಟಿ ಗಳಾಗಿ ಪರಿವರ್ತಿಸಲು 50 ಕೋಟಿ ರೂ. ಅನುದಾನ. ಚಿಕ್ಕಮಗಳೂರಿನಲ್ಲಿ ಹೊಸ ವಿಶ್ವವಿದ್ಯಾಲಯ ಸ್ಥಾಪನೆ. ಚಿಕ್ಕನಾಯಕನಹಳ್ಳಿಯಲ್ಲಿ ಹೊಸ ಪಾಲಿಟೆಕ್ನಿಕ್ ಆರಂಭ. ಎಲ್ಲಾ ವಿವಿಗಳ ಪಠ್ಯಕ್ರಮ ಹಾಗೂ ರೆಫರೆನ್ಸ್ ಪುಸ್ತಕಗಳ ಕನ್ನಡ ಭಾಷಾಂತರಕ್ಕೆ ಕ್ರಮ.
ರಾಜ್ಯದ ನೀರಾವರಿ ಕ್ಷೇತ್ರಕ್ಕೆ ಒಟ್ಟಾರೆ 25 ಸಾವಿರ ಕೋಟಿ ಅನುದಾನವನ್ನು ಮೀಸಲಿರಿಸಲಾಗಿದೆ. ಕೃಷ್ಣಾ ಮೇಲ್ದಂಡೆ ಹಂತ 3ರ ಯೋಜನೆಗೆ 5000 ಕೋಟಿ ಅನುದಾನ. ಕಳಸಾ ಮತ್ತು ಬಂಡೂರಿ ನಾಲಾ ತಿರುವು ಯೋಜನೆಗೆ 1000 ಕೋಟಿ ಅನುದಾನ. ಭದ್ರಾ ಮೇಲ್ದಂಡೆ ಯೋಜನೆಗೆ ಕೇಂದ್ರದಿಂದ 5300 ಕೋಟಿ ಅನುದಾನ. ಪಶ್ಚಿಮ ವಾಹಿನಿ 2ನೇ ಹಂತದ ಯೋಜನೆಯ ಕಾಮಗಾರಿಗಳ ಅನುಷ್ಠಾನಕ್ಕೆ 378 ಕೋಟಿ ಅನುದಾನ. ರಾಜ್ಯದ ರೈತರಿಗೆ ಶೂನ್ಯ ಬಡ್ಡಿದರದಲ್ಲಿ ನೀಡಲಾಗುತ್ತಿದ್ದ ಅಲ್ಪಾವಧಿ ಸಾಲದ ಮಿತಿಯನ್ನು 3 ಲಕ್ಷದಿಂದ 5 ಲಕ್ಷದವರೆಗೆ ಹೆಚ್ಚಳ. ಭೂಸಿರಿ ಯೋಜನೆಯಡಿ ಕಿಸಾನ್ ಕ್ರೆಡಿಟ್ ಕಾರ್ಡ್ ಹೊಂದಿರುವ ರೈತರಿಗೆ 10 ಸಾವಿರ ರೂ. ಹೆಚ್ಚು ಸಹಾಯಧನ.
ಸಿರಿಧಾನ್ಯ ಬೆಳೆಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ರೈತ ಸಿರಿ ಯೋಜನೆಯಡಿ 10 ಸಾವಿರ ರೂ. ಪ್ರೋತ್ಸಾಹ ದಿನ. ಅಡಿಕೆ ಬೆಳೆ ರೋಗ ನಿರ್ವಹಣೆ ಮತ್ತು ಉತ್ಪಾದಕತೆ ಹೆಚ್ಚಿಸುವ ಕುರಿತು ಹೆಚ್ಚಿನ ಸಂಶೋಧನೆಗಾಗಿ ತೀರ್ಥಹಳ್ಳಿಯ ಕೃಷಿ ಮತ್ತು ತೋಟಗಾರಿಕೆ ಸಂಶೋಧನಾ ಕೇಂದ್ರಕ್ಕೆ 10 ಕೋಟಿ ರೂ. ನೆರವು. ತಿಪಟೂರಿನಲ್ಲಿ ತೋಟಗಾರಿಕಾ ಮಹಾವಿದ್ಯಾಲಯ ಸ್ಥಾಪನೆ. 56 ಲಕ್ಷ ಸಣ್ಣ ಮತ್ತು ಅತಿ ಸಣ್ಣ ರೈತರ ಕುಟುಂಬಗಳಿಗೆ 180 ಕೋಟಿ ರೂ. ವೆಚ್ಚದಲ್ಲಿ ಜೀವನ್ ಜ್ಯೋತಿ ವಿಮಾ ಯೋಜನೆ ಜಾರಿ. ಮುಖ್ಯಮಂತ್ರಿ ರೈತ ಉನ್ನತಿ ಯೋಜನೆಯಡಿ ರೈತ ಉತ್ಪಾದಕ ಸಂಸ್ಥೆಗಳು ಹಾಗೂ ಸಿರಿಧಾನ್ಯ ಸಂಸ್ಕರಿಸುವ ಸಂಸ್ಥೆಗಳನ್ನು ಪ್ರೋತ್ಸಾಹಿಸಲು 10 ಲಕ್ಷ ರೂ. ವರೆಗೆ ಬಂಡವಾಳಕ್ಕೆ ಬಡ್ಡಿ ಸಹಾಯಧನ ಸೌಲಭ್ಯ. ರೈತರ ಜಮೀನುಗಳಲ್ಲಿ ಕೃಷಿಹೊಂಡ ನಿರ್ಮಿಸಲು ಜಲನಿಧಿ ಯೋಜನೆ ಜಾರಿ. ಸಹಸ್ರ ಸರೋವರ ಹಾಗೂ ಸಹ್ಯಾದ್ರಿ ಸಿರಿ ಯೋಜನೆಗಳಿಗೆ ರೂ. 75 ಕೋಟಿ ಅನುದಾನ.