ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಕೆಳಗಿಳಿಯುತ್ತಾರೆ, ಸಿಎಂ ಆಗಿ ಅವರೇ ಮುಂದುವರಿಯಬೇಕು ಎಂಬಿತ್ಯಾದಿ ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆಯ ಸುಳಿವು ನೀಡಿದ್ದಾರೆ!
ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಜುಲಾಯಿ 25ರಂದು ಹೈಕಮಾಂಡ್ ನನಗೆ ಸೂಚನೆ ನೀಡಲಿದೆ. ಮಾರನೇ ದಿನ ನಾನು ಮುಖ್ಯಮಂತ್ರಿಯಾಗಿ ಎರಡು ವರ್ಷದ ಕೆಲವು ಕಾರ್ಯಕ್ರಮಗಳು ನಡೆಯಲಿವೆ. ಬಿಜೆಪಿಯಲ್ಲಿ ಒಬ್ಬ ವ್ಯಕ್ತಿಗೆ 75 ವರ್ಷದ ನಂತರ ಯಾವುದೇ ಹುದ್ದೆಯನ್ನು ನೀಡುವುದಿಲ್ಲ. ಆದರೂ ನನ್ನ ಮೇಲಿನ ಗೌರವದಿಂದ ಇಲ್ಲಿಯವರೆಗೂ ನನಗೆ ಅವಕಾಶ ಮಾಡಿಕೊಟ್ಟಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾರವರಿಗೆ ಕೃತಜ್ಞತೆ ಸಲ್ಲಿಸುತ್ತೇನೆ. ಬುಧವಾರ ಹಲವಾರು ಮಠಾಧೀಶರು ಏಕಕಾಲದಲ್ಲಿ ನನಗೆ ಆಶೀರ್ವಾದ ಮಾಡಲು ಬಂದ ವಿಚಾರ ನನ್ನ ಜೀವನದ ಅಮೂಲ್ಯ ಕ್ಷಣ. ಅವರ ಆಶೀರ್ವಾದ ಮುಂದಿನ ದಿನಗಳಲ್ಲಿಯೂ ನನಗೆ ಬೇಕಾಗಿದೆ.
ರಾಜಕೀಯ ಬೆಳವಣಿಗೆಗಳನ್ನಾಧರಿಸಿ ನನ್ನ ಪರವಾಗಿ ಹೇಳಿಕೆ, ಪ್ರತಿಭಟನೆಗಳಿಗೆ ಯಾರೂ ಮುಂದಾಗಬಾರದೆಂದು ವಿನಂತಿಸುತ್ತೇನೆ. ನನ್ನ ಮೇಲಿನ ಅಭಿಮಾನ ಶಿಸ್ತಿನ ವ್ಯಾಪ್ತಿ ಮೀರಬಾರದು. ಪಕ್ಷ ನನಗೆ ಮಾತೃ ಸಮಾನ, ಅದರ ಗೌರವಕ್ಕೆ ಚ್ಯುತಿ ತರುವ ಘಟನೆಗಳು ನನಗೆ ಅತೀವ ನೋವು ತರುತ್ತದೆ. ನಿಜವಾದ ಹಿತೈಷಿಗಳು ಈ ನಿಟ್ಟಿನಲ್ಲಿ ನನ್ನ ಭಾವನೆಗೆ ಸ್ಪಂದಿಸುತ್ತಾರೆಂದು ನಂಬಿರುವೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಹೇಳಿದ್ದಾರೆ. ತನ್ಮೂಲಕ ಜುಲಾಯಿ 26ರಂದು ಮುಖ್ಯಮಂತ್ರಿ ಯಡಿಯೂರಪ್ಪ ರಾಜೀನಾಮೆ ನೀಡುವುದು ಬಹುತೇಕ ಖಚಿತವಾಗಿದೆ.