ಬೆಂಗಳೂರು, ಜು. 4: ಮಂಗಳವಾರ ಬೆಳಿಗ್ಗೆ ವಿಧಾನಸಭೆ ಅಧಿವೇಶನ ಆರಂಭವಾದ ತಕ್ಷಣ ಬಿಜೆಪಿ ನಾಯಕರು ನಿಲುವಳಿ ಸೂಚನೆ ಮೇಲೆ ಚರ್ಚೆಗೆ ಅವಕಾಶ ನೀಡುವಂತೆ ಪ್ರಸ್ತಾಪಿಸಿದರು. ಆದರೆ ಬಿಜೆಪಿ ನಾಯಕರ ಪ್ರಸ್ತಾಪಕ್ಕೆ ಸ್ಪೀಕರ್ ಯು.ಟಿ. ಖಾದರ್ ಅವಕಾಶ ನೀಡಿಲ್ಲ. ಸದನಲ್ಲಿ ಆಡಳಿತ-ವಿಪಕ್ಷ ಶಾಸಕರ ನಡುವೆ ಮಾತಿನ ಜಟಾಪಟಿ ನಡೆದು ಬಿಜೆಪಿ ಶಾಸಕರು, ಕಾಂಗ್ರೆಸ್ ಜನತೆಗೆ ಮೋಸ ಮಾಡುತ್ತಿದೆ ಎಂದು ಧಿಕ್ಕಾರ ಕೂಗಿ ಸದನದ ಬಾವಿಗಿಳಿದು ಧರಣಿ ನಡೆಸಿದರು.
ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆ ವಿಳಂಬವಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದಲ್ಲಿ ಫ್ರೀಡಂ ಪಾರ್ಕ್ನಲ್ಲಿ ಮಂಗಳವಾರ ಬಿಜೆಪಿ ಪ್ರತಿಭಟನೆ ಆರಂಭಿಸಿದೆ. ಬಿಜೆಪಿ ಮುಖಂಡರಾದ ಕೆ.ಎಸ್. ಈಶ್ವರಪ್ಪ, ಗೋವಿಂದ ಕಾರಜೋಳ, ಮುರುಗೇಶ್ ನಿರಾಣಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸೇರಿದಂತೆ ಬಿ.ಸಿ.ಪಾಟೀಲ್, ನಾರಾಯಣಗೌಡ ಮುಂತಾದವರು ಪ್ರತಿಭಟನೆಗೆ ಸಾಥ್ ನೀಡಿದ್ದಾರೆ.
ಚುನಾವಣೆ ಘೋಷಣೆಯಾದ ಮೇಲೆ ಕಾಂಗ್ರೆಸ್ ಘೋಷಿಸಿದ ಗ್ಯಾರಂಟಿಗಳನ್ನು ರಾಜ್ಯಾದ್ಯಂತ ಯಾವುದೇ ಬದಲಾವಣೆ, ಮಾರ್ಪಾಡುಗಳಿಲ್ಲದೆ ಅನುಷ್ಠಾನಕ್ಕೆ ತರಬೇಕು. 10 ಕೆಜಿ ಅಕ್ಕಿ ನೀಡುವುದಾಗಿ ಕಾಂಗ್ರೆಸ್ ಸರ್ಕಾರ ಘೋಷಿಸಿತ್ತು. ಈಗ ಐದು ಕೆಜಿಗೆ ಹಣ ನೀಡಲು ನಿರ್ಧರಿಸಿದೆ. ಜೊತೆಗೆ ಪ್ರತಿ ಮನೆಗೆ 200 ಯುನಿಟ್ ಉಚಿತ ವಿದ್ಯುತ್ ಘೋಷಿಸಿತ್ತು. ಆದರೆ ಈಗ ಸರಾಸರಿ ಯುನಿಟ್ ನಿಬಂಧನೆ ವಿಧಿಸಿದೆ.