ಸುಳ್ಯ, ಅ.29: ಸುಳ್ಯದ ಸ್ನೇಹ ಶಾಲೆಯಲ್ಲಿ ಈ ವರ್ಷ ಪ್ರಾಯೋಗಿಕವಾಗಿ ಆಟದ ಬಯಲಿನಲ್ಲಿ ನೀರು ನಿಲ್ಲುವ ಅಂಗಣದಲ್ಲಿ ಭತ್ತದ ಗದ್ದೆಯನ್ನು ಮಾಡಲಾಯಿತು. ಭತ್ತ ಬೆಳೆಸುವ ಕ್ರಮ ಹಾಗೂ ಸವಾಲುಗಳನ್ನು ತಿಳಿಯುವುದರೊಂದಿಗೆ ವಿದ್ಯಾರ್ಥಿಗಳಿಗೆ ಅಕ್ಕಿ ಹುಟ್ಟುವುದು ಎಲ್ಲಿಂದ ಎಂಬ ಅರಿವನ್ನು ಮೂಡಿಸುವ ಉದ್ದೇಶದಿಂದ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ದಾಮ್ಲೆಯವರು ಈ ಯೋಜನೆಯನ್ನು ಕೈಗೊಂಡಿದ್ದರು. ಕಳೆದ ಜುಲೈ 10 ರಂದು ಶಿಕ್ಷಕರು ಮತ್ತು ವಿದ್ಯಾರ್ಥಿಗಳೇ ನೇಜಿ ನೆಡುವ ಮೂಲಕ ಆರಂಭವಾದ ಈ ಪ್ರಯೋಗವು ವಿದ್ಯಾರ್ಥಿಗಳಿಗೆ ಆಸಕ್ತಿದಾಯಕವಾಗಿತ್ತು. ದಿನಾಲೂ ಶಾಲೆಗೆ ಬಂದ ಮಕ್ಕಳು ತೆನೆಯ ಬೆಳವಣಿಗೆಯನ್ನು ಅವಲೋಕಿಸುತ್ತಿದ್ದರು. ಇದೀಗ 110 ದಿನಗಳು ಕಳೆದಾಗ ಭತ್ತವು ಕಟಾವಿಗೆ ಬಂದಿದ್ದು ಅಕ್ಟೋಬರ್ ೨೮ ರಂದು ಒಂದು ಗದ್ದೆಯ ಕೊಯ್ಲನ್ನು ಮಾಡಲಾಯಿತು.
ಸಾಂಪ್ರದಾಯಿಕವಾಗಿ ಅಧ್ಯಕ್ಷರಾದ ಚಂದ್ರಶೇಖರ ದಾಮ್ಲೆಯವರು ಮತ್ತು ಮುಖ್ಯೋಪಾಧ್ಯಾಯಿನಿ ಜಯಲಕ್ಷ್ಮಿ ದಾಮ್ಲೆಯವರು ಹಾಲನ್ನಿಟ್ಟು ತೆನೆಪೂಜೆ ಮಾಡಿದ ಬಳಿಕ ಶಾಲಾ ಮಕ್ಕಳು ಮತ್ತು ಶಿಕ್ಷಕರು ಕೊಯ್ಲಿನ ಕೆಲಸದಲ್ಲಿ ಭಾಗವಹಿಸಿದ್ದರು. ಕೊಯ್ದ ತೆನೆಯನ್ನು ಸೂಡಿ ಕಟ್ಟಿ ಪಡಿ ಮಂಚದ ಬಳಿ ತಂದು ಸೂಡಿಯನ್ನು ಹೊಡೆದು ಭತ್ತವನ್ನು ಬೇರ್ಪಡಿಸಲಾಯಿತು. ಆರಂಭದಿಂದಲೂ ಈ ಯೋಜನೆಯಲ್ಲಿ ಮಾರ್ಗದರ್ಶಕರಾಗಿ ಸಹಕರಿಸಿದ ಆಲೆಟ್ಟಿ ಗುಂದ್ಯದ ನಿತ್ಯಾನಂದ ಗೌಡರು ಮತ್ತು ಅವರ ಪತ್ನಿ ಪ್ರತಿಮಾ ಕೊಯ್ಲಿನ ಕೆಲಸದಲ್ಲಿ ಸೇರಿಕೊಂಡಿದ್ದರು.