ಬೆಂಗಳೂರು: ಆಘಾತಕಾರಿ ಸುದ್ಧಿಯೊಂದು ಸಿಡಿಲಿನಂತೆ ಬಡಿದಿದೆ. ರಾಜಕುಮಾರ್ ಕುಟುಂಬದ ಯುವರತ್ನ, ಖ್ಯಾತ ನಟ ಪುನೀತ್ ರಾಜಕುಮಾರ್ (46) ಬಹಳ ಬೇಗನೇ ಅಭಿಮಾನಿಗಳನ್ನು ಬಿಟ್ಟು ಹೋಗಿದ್ದಾರೆ. ಅವರಿಗೆ ಇಂದು ಬೆಳಿಗ್ಗೆ ತೀವ್ರ ಹೃದಯಾಘಾತವಾಗಿತ್ತು. ತಕ್ಷಣ ಅವರನ್ನು ವಿಕ್ರಮ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.
ಮೂಲಗಳ ಪ್ರಕಾರ ಇಂದು ಜಿಮ್ ನಲ್ಲಿ ವ್ಯಾಯಾಮ ನಡೆಸುತ್ತಿರುವ ಸಂದರ್ಭದಲ್ಲಿಯೇ ಎದೆನೋವು ಕಾಣಿಸಿಕೊಂಡು ಪುನೀತ್ ರಾಜಕುಮಾರ್ ಕುಸಿದು ಬಿದ್ದರು. ತಕ್ಷಣ ಅವರಿಗೆ ಆಸ್ಪತ್ರೆಗೆ ದಾಖಲಿಸಲಾಯಿತು. ಆಸ್ಪತ್ರೆಗೆ ದಾಖಲಿಸುವಾಗಲೇ ಅವರ ಸ್ಥಿತಿ ಚಿಂತಾಜನಕವಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗಲಿಲ್ಲ. ಭಾನುವಾರ ಪುನೀತ್ ರಾಜಕುಮಾರ್ ಅಂತ್ಯಕ್ರಿಯೆ ನಡೆಯಲಿದೆ.
ಬಾಲನಟನಾಗಿ ಸಿನೆಮಾ ರಂಗಕ್ಕೆ ಪ್ರವೇಶಿಸಿದ ಪುನೀತ್ ರಾಜಕುಮಾರ್, ವಸಂತ ಗೀತ, ಭಾಗ್ಯವಂತ, ಚಲಿಸುವ ಮೋಡಗಳು, ಎರಡು ನಕ್ಷತ್ರಗಳು, ಭಕ್ತ ಪ್ರಹ್ಲಾದ, ಯಾರಿವನು, ಬೆಟ್ಟದ ಹೂವು ಚಿತ್ರಗಳ ಮೂಲಕ ಮನೆಮಾತಾಗಿದ್ದರು. ಬೆಟ್ಟದ ಹೂವು ಚಿತ್ರದಲ್ಲಿ ಅದ್ಭುತವಾಗಿ ನಟಿಸಿದ ಪುನೀತ್ ಅವರು ಅತ್ಯುತ್ತಮ ಬಾಲನಟ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದರು.
ಅಪ್ಪು, ಅಭಿ, ವೀರ ಕನ್ನಡಿಗ, ಮೌರ್ಯ, ಆಕಾಶ್, ಅಜಯ್, ಅರಸು, ಮಿಲನ, ವಂಶಿ, ರಾಮ್, ಜಾಕಿ, ಹುಡುಗರು, ರಾಜಕುಮಾರ, ಅಂಜನಿ ಪುತ್ರ ಸೇರಿದಂತೆ ಅನೇಕ ಸೂಪರ್ ಹಿಟ್ ಚಿತ್ರದಲ್ಲಿ ನಾಯಕ ನಟರಾಗಿ ಅಭಿಮಾನಿಗಳ ಮನಗೆದ್ದ ಪುನೀತ್ ರಾಜಕುಮಾರ್ ರನ್ನು ಅಭಿಮಾನಿಗಳು ಪವರ್ ಸ್ಟಾರ್ ಎಂದು ಕರೆಯುತ್ತಿದ್ದರು.
ಕನ್ನಡದ ಕೋಟ್ಯಾಧಿಪತಿಯ ಮೂಲಕ ರಿಯಾಲಿಟಿ ಶೋನಲ್ಲಿಯೂ ಪುನೀತ್ ಜನಮನ ಗೆದ್ದಿದ್ದರು.
ಗಣ್ಯರ ಸಂತಾಪ: ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ, ಖ್ಯಾತ ಕ್ರಿಕೆಟಿಗ ಅನಿಲ್ ಕುಂಬ್ಳೆ, ವಿರೇಂದ್ರ ಸೆಹವಾಗ್, ಸಿನೆಮಾ ರಂಗದ ದಿಗ್ಗಜರು, ಗಣ್ಯರು ತೀವ್ರ ಸಂತಾಪ ಸೂಚಿಸಿದ್ದಾರೆ.