ಕಲಬುರಗಿ: ರಾಜ್ಯದಲ್ಲಿ ಈವರೆಗೆ 1 ಲಕ್ಷ 26 ಸಾವಿರ ರೈತರಿಗೆ 500 ಕೋಟಿ ರೂಪಾಯಿ ಸಾಲ ನೀಡಿದ್ದು, ಮಾರ್ಚ್ ವೇಳೆಗೆ ಇನ್ನೂ ಒಂದು ಲಕ್ಷ ರೈತರಿಗೆ 500 ಕೋಟಿ ರೂಪಾಯಿ ಸಾಲ ನೀಡಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಕಲಬುರಗಿಯಲ್ಲಿ ಕಲಬುರಗಿ-ಯಾದಗಿರಿ ಡಿಸಿಸಿ ಬ್ಯಾಂಕ್ ಮುಖ್ಯ ಕಚೇರಿ ಹಾಗೂ ಶಾಖೆಗಳ ನೂತನ ಕಟ್ಟಡ ಶಿಲಾನ್ಯಾಸ ನೆರೆವೇರಿಸಿ ಮಾತನಾಡಿದರು. ರೈತರ ಆದಾಯ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ.
ಸಹಕಾರ ಕೇಂದ್ರಗಳಲ್ಲಿರುವ ಸದಸ್ಯರು ಸಹಕಾರಿಗಳಾಗುವ ಮೂಲಕ ದಕ್ಷತೆ ಮತ್ತು ಪಾರದರ್ಶಕತೆಯಿಂದ ರೈತರ ಶ್ರೇಯೋಭಿವೃದ್ಧಿಗೆ ಶ್ರಮಿಸಬೇಕು ಎಂದರು.
ಇದೇ ಸಂದರ್ಭದಲ್ಲಿ ಎ.ಟಿ.ಎಂ ಮೊಬೈಲ್ ವ್ಯಾನ್ ಉದ್ಘಾಟನೆ ನೆರವೇರಿಸಿ, 300 ಸಹಕಾರ ಸಂಘಗಳಿಗೆ ಎ.ಟಿ.ಎಂ ಯಂತ್ರಗಳನ್ನು ವಿತರಿಸಿದರು.
ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಮುರುಗೇಶ್ ನಿರಾಣಿ, ಸಂಸದ ಉಮೇಶ್ ಜಾಧವ್, ಅಪ್ಪುಗೌಡ ಪಾಟೀಲ್, ಶಶಿಲ್ ನಮೋಷಿ, ಸೇರಿದಂತೆ ಶಾಸಕರು, ಕಲ್ಯಾಣ ಕರ್ನಾಟಕ ಮಾನವ ಸಂಪನ್ಮೂಲ ಕೃಷಿ, ಸಾಂಸ್ಕೃತಿಕ ಸಂಘದ ಅಧ್ಯಕ್ಷ ಬಸವರಾಜ ಪಾಟೀಲ ಸೇಡಂ, ಜಿಲ್ಲಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ರಾಜಕುಮಾರ್ ತೇಲ್ಕೂರ್ ಮತ್ತಿತರರು ಉಪಸ್ಥಿತರಿದ್ದರು.