ಕೋಟ: ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜು ಕೋಟ-ಪಡುಕರೆಯಲ್ಲಿ ಪಾಲಕರ ಸಭೆ ನಡೆಯಿತು.
ಸಭೆಯಲ್ಲಿ ವಿದ್ಯಾರ್ಥಿಗಳ ಸಮಸ್ಯೆಗಳು, ಶೈಕ್ಷಣಿಕ ಪ್ರಗತಿ, ವಿಶ್ವವಿದ್ಯಾನಿಲಯ ಮತ್ತು ಕಾಲೇಜು ಶಿಕ್ಷಣ ಇಲಾಖೆಯ ನಿಯಮಾವಳಿಗಳು ಹಾಗೂ ಈ ಶೈಕ್ಷಣಿಕ ಸಾಲಿನಲ್ಲಿ
ಕೈಗೊಳ್ಳಬೇಕಾದ ವಿವಿಧ ಚಟುವಟಿಕೆಗಳನ್ನು ಆಯೋಜಿಸುವ ಕುರಿತು ಸಮಗ್ರವಾಗಿ ಚರ್ಚಿಸಲಾಯಿತು.
ಸಭೆಯ ಅಧ್ಯಕ್ಷತೆ ವಹಿಸಿದ ಪ್ರಾಂಶುಪಾಲರಾದ ಪ್ರೊ. ನಿತ್ಯಾನಂದ ವಿ ಗಾಂವಕರ ಮಾತನಾಡಿ, ವಿದ್ಯಾರ್ಥಿಗಳು ಪಠ್ಯ ಮತ್ತು ಸಹಪಠ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವಂತೆ ಶಿಕ್ಷಕರ ಜೊತೆಯಲ್ಲಿ ಪಾಲಕರು ಕೈಜೊಡಿಸುವಂತೆ ಸಲಹೆಯಿತ್ತರು.
ಕಾರ್ಯಕ್ರಮದಲ್ಲಿ ಶಿಕ್ಷಕ-ರಕ್ಷಕ ಸಂಘದ ಅಧ್ಯಕ್ಷರಾದ ಜನಾರ್ದನ ಆಚಾರ್ಯ, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ವೈದ್ಯ ಎಂ ಹಾಗೂ ಕಾಲೇಜಿನ ಐ.ಕ್ಯೂ.ಎ.ಸಿ ಸಂಚಾಲಕರಾದ ರವಿಪ್ರಸಾದ್ ಕೆ.ಜಿ ಉಪಸ್ಥಿತರಿದ್ದರು.
ರಕ್ಷಕ-ಶಿಕ್ಷಕ ಸಂಘದ ಸಂಚಾಲಕರಾದ ಮಂಜುನಾಥ ಆಚಾರಿ ಕಾರ್ಯಕ್ರಮವನ್ನು ನಿರೂಪಿಸಿದರು.