ಪರಿಸರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದರೆ ಆರೋಗ್ಯವಂತ ಸಮಾಜದ ಪರಿಕಲ್ಪನೆ ಸಾಕಾರಗೊಳ್ಳುವುದು. ಹೆಚ್ಚಿನ ಸಂಖ್ಯೆಯಲ್ಲಿ ಗಿಡಮರಗಳನ್ನು ಬೆಳೆಸಿ ಪೋಷಿಸಿ ಸಂರಕ್ಷಿಸುವಲ್ಲಿ ಜಿಲ್ಲೆಯ ಸಂಘ ಸಂಸ್ಥೆಗಳು ಕ್ರಿಯಾಶೀಲ ಪ್ರಯತ್ನಗಳನ್ನು ನಡೆಸಿದರೆ ಉಡುಪಿ ಹಸಿರು ಜಿಲ್ಲೆಯಾಗುವುದು ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.
ಅವರು ಜಿಲ್ಲಾಡಳಿತ, ಸುವರ್ಣ ಎಂಟರ್ಪ್ರೈಸಸ್ ಬ್ರಹ್ಮಾವರ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ ಮತ್ತು ಪ್ರಧಾನ ಮಂತ್ರಿ ಜನೌಷಧಿ ಕೇಂದ್ರ ಬ್ರಹ್ಮಾವರ ಇದರ ವತಿಯಿಂದ ಗುರುವಾರ ರಜತಾದ್ರಿ ಜಿಲ್ಲಾಧಿಕಾರಿ ಕಛೇರಿ ವಠಾರದಲ್ಲಿ ವೃಕ್ಷಾರೋಪಣ ಕಾರ್ಯಕ್ರಮಕ್ಕೆ ಸಸಿ ನೆಡುವ ಮೂಲಕ ಚಾಲನೆ ನೀಡಿ ಮಾತನಾಡಿದರು. ಮುಂದಿನ ದಿನಗಳಲ್ಲಿ ರಜತಾದ್ರಿ ಜಿಲ್ಲಾಧಿಕಾರಿ ಕಛೇರಿ ವಠಾರದಲ್ಲಿ ವಿವಿಧ ಬಗೆಯ ಹಣ್ಣು ಹಾಗೂ ಔಷಧೀಯ ಸಸ್ಯಗಳನ್ನು ನೆಡುವ ಮೂಲಕ ಬೊಟಾನಿಕಲ್ ಗಾರ್ಡನ್ ಮಾದರಿಯಲ್ಲಿ ಉದ್ಯಾನವನ ನಿರ್ಮಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ನಾಗಭೂಷಣ ಉಡುಪ ಹೆಚ್, ಡಾ. ಪ್ರೇಮಾನಂದ, ಡಾ. ರಾಮಚಂದ್ರ ಕಾಮತ್, ಮಧುಸೂದನ್ ಹೇರೂರು, ಸುವರ್ಣ ಎಂಟರ್ಪ್ರೈಸ್ ಮುಖ್ಯಸ್ಥರಾದ ಸುನೀತಾ ಮಧುಸೂದನ್, ಜಯಂಟ್ಸ್ ಅಧ್ಯಕ್ಷ ಸುಂದರ ಪೂಜಾರಿ, ಮಿಲ್ಟನ್ ಒಲಿವೇರಾ, ದರ್ಶಕ್, ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್, ಜಗದೀಶ್ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ನಿರೂಪಿಸಿದರು.