ಉಡುಪಿ: ವರ್ಷದಲ್ಲಿ ಎರಡು ದಿನ ಮಧ್ಯಾಹ್ನ ಸೂರ್ಯ ನೇರ ನೆತ್ತಿಯ ಮೇಲೆ ಬಂದು ಕೆಲ ಕ್ಷಣ ನೆರಳು ಕಾಣುವುದಿಲ್ಲ. ಇದನ್ನು ‘ಝೀರೋ ಶಾಡೋ ಡೇ’ ಎನ್ನುವರು. ಇದಕ್ಕೆ ಸೂರ್ಯನ ಸುತ್ತ ತಿರುಗುವ ಭೂಮಿ ತನ್ನ ಅಕ್ಷಕ್ಕೆ 23.5 ಡಿಗ್ರಿ ವಾಲಿಕೊಂಡಿರುವುದೇ ಕಾರಣ. ಇದನ್ನು ಯಾವುದೇ ಮರ ಕಟ್ಟಡಗಳ ನೆರಳಿನಿಂದ ಈ ದಿನ ಮಧ್ಯಾಹ್ನ ಗಮನಿಸಬಹುದು.
ಈ ರೀತಿಯ ಶೂನ್ಯ ನೆರಳಿನ ದಿನ, ಭೂಮಿಯ ಎಲ್ಲಾ ಪ್ರದೇಶದಲ್ಲಿ ಸಂಭವಿಸುವುದಿಲ್ಲ. ಮಕರ ಸಂಕ್ರಾಂತಿ ವೃತ್ತದಿಂದ ಕರ್ಕಾಟಕ ಸಂಕ್ರಾಂತಿ ವೃತ್ತದ ವರೆಗಿನ ಭೂಭಾಗದಲ್ಲಿ ಮಾತ್ರ ವರ್ಷಕ್ಕೆ ಎರಡು ದಿನ ಶೂನ್ಯ ನೆರಳಿನ ದಿನ. ಈ ಎರಡು ವೃತ್ತಗಳ ಹೊರಗಿರುವ ಭೂ ಭಾಗದಲ್ಲಿ ಸೂರ್ಯ ಎಂದೂ ನೇರ ಬರುವುದೇ ಇಲ್ಲ.
ಅಂತೆಯೇ ಈ ತಿಂಗಳ ಬೆಳಗಿನ ಜಾವ ಸೂರ್ಯೋದಯದ ಮುನ್ನ ನಾಲ್ಕು ಗ್ರಹಗಳನ್ನು ಪೂರ್ವ ಆಕಾಶದಲ್ಲಿ ನೋಡಬಹುದು. ಪೂರ್ವದಿಗಂತದಿಂದ ಮೇಲೆ ಹೊಳೆವ ಗುರು, ಶುಕ್ರ, ಮಂಗಳ ಹಾಗೂ ಶನಿ ಗ್ರಹಗಳನ್ನು ಗಮನಿಸಬಹುದು ಎಂದು ಖಗೋಳತಜ್ಞ ಡಾ. ಎ. ಪಿ ಭಟ್ ಹೇಳಿದ್ದಾರೆ.