ಕೋಟ: ಸ್ವಚ್ಛ ಪರಿಸರದ ಬಗ್ಗೆ ಯುವ ಸಮುದಾಯ ಮುಂಚೂಣಿಗೆ ನಿಲ್ಲಬೇಕು, ಆ ಮೂಲಕ ಸ್ವಚ್ಛ ಭಾರತ ಪರಿಕಲ್ಪನೆಗೆ ಬಣ್ಣ ಬಳಿಯುವ ಕೆಲಸ ಯುವ ಸಮೂಹ ಮಾಡಬೇಕು ಎಂದು ಯುವ ಸ್ವಚ್ಛಾಗ್ರಹಿ ಮತ್ತು ಪತ್ರಕರ್ತ ರವೀಂದ್ರ ಕೋಟ ಹೇಳಿದರು.
ಕೋಟ ಪಡುಕರೆಯ ಲಕ್ಷ್ಮೀ ಸೋಮ ಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಣಿಪಾಲ್ ರೇಡಿಯೋ ಸಂಯೋಜನೆಯಲ್ಲಿ ಕರ್ನಾಟಕ ಸರಕಾದರ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ಬೆಂಗಳೂರು, ಪ್ರಾಯೋಜನೆಯಲ್ಲಿ ಶುದ್ಧ ಜಲ, ಸ್ವಚ್ಛ ನೆಲ, ಆರೋಗ್ಯವಾಗಿರಲಿ ಜೀವಸಂಕುಲ ಬಾನುಲಿ ಸರಣಿ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಯುವದಿನ ಪ್ರಯುಕ್ತ ಸ್ವಚ್ಛತಾ ಕಾರ್ಯಕ್ರಮಗಳಲ್ಲಿ ಯುವಕರ ಪಾತ್ರ ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿ ಮಾತನಾಡಿದರು.
ಪ್ರಸ್ತುತ ದಿನಗಳಲ್ಲಿ ಪರಿಸರವನ್ನು ಹಾಳು ಮಾಡುವ ಸ್ಥಿತಿಯ ಬಗ್ಗೆ ವಿವರಿಸಿ ಆಯಾ ಭಾಗಗಳ ರಾಷ್ಟ್ರೀಯ ಹೆದ್ದಾರಿ, ಒಳ ರಸ್ತೆಗಳಲ್ಲಿ ಅನಾಗರಿಕರು ಎಸೆಯುತ್ತಿರುವ ತ್ಯಾಜ್ಯದ ಕೊಂಪೆಗಳ ಬಗ್ಗೆ ವಿವರಿಸಿ ಈ ಬಗ್ಗೆ ಯುವ ಸಮುದಾಯ ಮನೆಮನೆಗಳಲ್ಲಿ ಜಾಗೃತಿ ಮೂಡಿಸುವ ಅಗತ್ಯತೆಯನ್ನು ಮನಗಾಣಿಸಿದರು.
ಪ್ಲಾಸ್ಟಿಕ್ ತ್ಯಾಜ್ಯದಿಂದ ಪರಿಸರಕ್ಕಾಗುವ ಕಷ್ಟ ನಷ್ಟಗಳ ಬಗ್ಗೆ ಉಲ್ಲೇಖಿಸಿ, ಇತ್ತೀಚಿನ ಕೆಲ ವರ್ಷಗಳಿಂದ ಪ್ರಾಕೃತಿಕ ಸಮಸ್ಯೆಗಳಿಗೆ ಮನುಕುಲವೇ ಹೊಣೆಗಾರರಾಗುತ್ತಿದ್ದೇವೆ.
ಆಧುನಿಕ ಕಾಲಘಟ್ಟದಲ್ಲಿ ಮನುಷ್ಯ ಸೃಷ್ಠಿಸುವ ಸುಲಭ ವಿಧಾನಗಳಿಂದ ಅವನತಿಯ ಅಂಚಿಗೆ ತಲುಪುತ್ತಿರುವ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ನಮ್ಮ ಪರಿಸರವನ್ನು ಹಸಿರಾಗಿಸುವ ಜೊತೆಗೆ ಸುಂದರ ಪರಿಸರ ನಮ್ಮದಾಗಿಸಲು ಯಾವ ಕ್ರಮಗಳನ್ನು ಕೈಗೊಳ್ಳಬಹುದು ಎಂಬುವುದರ ಬಗ್ಗೆ ವಿಸ್ತ್ರತ ಮಾಹಿತಿ ನೀಡಿದರು.
ವಿದ್ಯಾರ್ಥಿಗಳು ರವೀಂದ್ರ ಕೋಟ ಅವರೊಂದಿಗೆ ಸಂವಾದ ನಡೆಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಲಕ್ಷ್ಮೀ ಸೋಮಬಂಗೇರ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ನಿತ್ಯಾನಂದ ಗಾಂವ್ಕರ್ ವಹಿಸಿದರು.
ಕಾಲೇಜಿನ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ನಾಗರಾಜ ಎಂ ವೈದ್ಯ, ಎನ್‌ಎಸ್‌ಎಸ್ ಘಟಕ ಒಂದರ ಅಧಿಕಾರಿ ಡಾ. ಮುರುಳಿ ಎನ್, ಘಟಕ ಎರಡರ ಅನಂತ್ ಕುಮಾರ್ ಸಿ ಎಸ್., ಇತಿಹಾಸ ವಿಭಾಗದ ಉಪನ್ಯಾಸಕ ರಾಜಣ್ಣ, ರಾಜ್ಯಶಾಸ್ತ್ರ ಮುಖ್ಯಸ್ಥ ಪ್ರಶಾಂತ್ ನೀಲಾವರ, ವಿದ್ಯಾರ್ಥಿಗಳಾದ ಆದರ್ಶ, ಸುಮಂತ್, ಸಂಗೀತ, ಶ್ರದ್ಧಾ, ರಕ್ಷಾ ಮತ್ತಿತರರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಮಣಿಪಾಲ್ ರೇಡಿಯೋ ಸಂಯೋಜಕಿ ರಶ್ಮಿ ನಿರೂಪಿಸಿದರು.