ಜೀವನಕ್ಕೆ ಸ್ಪಷ್ಟವಾದ ರೂಪುರೇಷೆಗಳನ್ನು ನೀಡುವ ಮೂಲಕ ಶಿಸ್ತುಬದ್ಧ ಜೀವನ ಶೈಲಿಯನ್ನು ಅಳವಡಿಸಿಕೊಳ್ಳಲು ಯೋಗ ಪ್ರಮುಖ ಪಾತ್ರ ವಹಿಸುತ್ತದೆ ಎಂದು ಭಾರತ ಸರಕಾರದ ನೆಹರೂ ಯುವ ಕೇಂದ್ರ ಉಡುಪಿ ಜಿಲ್ಲಾ ಸಮನ್ವಯಾಧಿಕಾರಿ ವಿಲ್ಫ್ರೆಡ್ ಡಿಸೋಜ ಹೇಳಿದರು. ಅವರು ಸೋಮವಾರ ವಿಶ್ವ ಯೋಗ ದಿನದ ಪ್ರಯುಕ್ತ ಭಾರತ ಸರ್ಕಾರ, ನೆಹರೂ ಯುವ ಕೇಂದ್ರ, ಸ್ವಚ್ಛ ಭಾರತ್ ಫ್ರೆಂಡ್ಸ್ ಮತ್ತು ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ನಂದಳಿಕೆ (ರಿ.) ಸಂಯುಕ್ತ ಆಶ್ರಯದಲ್ಲಿ ಯೋಗ ದಿನಾಚರಣೆ ಮತ್ತು ‘ಯೋಗ ಆರೋಗ್ಯ’ ವಿಶೇಷ ಉಪನ್ಯಾಸ ಕಾರ್ಯಕ್ರಮವನ್ನು ವರ್ಚುವಲ್ ಮಾಧ್ಯಮದ ಮೂಲಕ ಉದ್ಘಾಟಿಸಿ ಮಾತನಾಡಿದರು. ಯೋಗದ ಸುಗಂಧವು ಹಳ್ಳಿ ಹಳ್ಳಿಗೂ ಪಸರಿಸುವ ಮೂಲಕ ಬಲಿಷ್ಠ ಯುವ ಸಮಾಜ ನಿರ್ಮಾಣವಾಗಲಿ ಎಂದರು.
ಎಸ್.ಡಿ.ಎಮ್. ಆಯುರ್ವೇದ ಕಾಲೇಜು ಇದರ ಪ್ರಾಧ್ಯಾಪಕ ಡಾ. ವಿಜಯ್ ನೆಗಳೂರು ಸಂಪನ್ಮೂಲ ವ್ಯಕ್ತಿಯಾಗಿ ’ಯೋಗ ಆರೋಗ್ಯ’ದ ಕುರಿತು ವಿಶೇಷ ಉಪನ್ಯಾಸ ನೀಡಿದರು. ಶಾರೀರಿಕ, ಮಾನಸಿಕ, ಆಧ್ಯಾತ್ಮಿಕ ಸ್ವಾಸ್ಥ್ಯವನ್ನು ಕಾಪಾಡುವಲ್ಲಿ ಯೋಗದ ಕೊಡುಗೆ ಅನನ್ಯವಾಗಿದೆ. ವ್ಯಕ್ತಿಯ ಸರ್ವಾಂಗೀಣ ಅಭಿವೃದ್ಧಿಗೆ ಯೋಗ ಮುನ್ನುಡಿ ಬರೆಯುತ್ತದೆ. ತಂತ್ರಜ್ಞಾನ ಆಧಾರಿತ ಬದುಕಿನಲ್ಲಿ ಮನಸ್ಸಿನ ನಿಯಂತ್ರಣವನ್ನು ಮಾಡುವಲ್ಲಿ ಯೋಗವು ಪ್ರಬಲ ಅಸ್ತ್ರವಾಗಿದೆ. ಜಾಗತಿಕ ಮಟ್ಟದಲ್ಲಿ ಹಲವಾರು ಮಂದಿಗೆ ಅಂಟಿಕೊಳ್ಳುವ ಜೀವನಶೈಲಿಯಿಂದ ಉದ್ಭವಿಸುವ ಕಾಯಿಲೆಗಳನ್ನು ನಿಯಂತ್ರಿಸಿ ನಿವಾರಣೆ ಮಾಡಲು ಯೋಗವು ರಾಮಬಾಣವಾಗಿದೆ.
ಕೋವಿಡ್ ಸಂದಿಗ್ಧ ಪರಿಸ್ಥಿತಿಯಲ್ಲಿ ಆಮ್ಲಜನಕ ಮತ್ತು ಶ್ವಾಸಕೋಶಕ್ಕೆ ಸಂಬಂಧಿಸಿದ ಚರ್ಚೆಗಳೇ ನಡೆಯುತ್ತಿರುವ ಈ ಕಾಲಘಟ್ಟದಲ್ಲಿ ವಿವಿಧ ಆಸನಗಳು ಇವುಗಳಿಗೆ ಉತ್ತರವಾಗಿದೆ. ದಿನನಿತ್ಯ ಸೂರ್ಯನಮಸ್ಕಾರ, ಅನುಲೋಮ ವಿಲೋಮ ಪ್ರಾಣಾಯಾಮದ ಜೊತೆಗೆ ಪ್ರಮುಖ ಆಸನಗಳಾದ ಪದ್ಮಾಸನ, ಭುಜಂಗಾಸನ, ವೃಕ್ಷಾಸನ, ಅರ್ಧ ಉಷ್ಟ್ರಾಸನ, ಸೇತುಬಂದಾಸನ ಸೇರಿದಂತೆ ಇತರೆ ಆಸನಗಳು ಶರೀರವನ್ನು ನಿಯಂತ್ರಿಸಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಿ ತನ್ಮೂಲಕ ಒತ್ತಡ, ಖಿನ್ನತೆ, ಕೀಳರಿಮೆ ನಿವಾರಿಸಿ ಶರೀರದಲ್ಲಿ ನವಚೈತನ್ಯವನ್ನು ಉಂಟುಮಾಡುತ್ತದೆ. ಯೋಗಾಭ್ಯಾಸದಿಂದ ಶರೀರಕ್ಕೆ ಸರಿಯಾದ ಪೋಷಣೆ ಸಿಗುತ್ತದೆ ಮತ್ತು ಸದಾಕಾಲವೂ ಉತ್ಸಾಹ ಮತ್ತು ಕ್ರಿಯಾಶೀಲತೆಯಿಂದ ಇರುವ ಹಾಗೆ ಮಾಡುತ್ತದೆ ಎಂದು ಡಾ. ವಿಜಯ್ ನೆಗಳೂರು ಹೇಳಿದರು. ಉಪನ್ಯಾಸದ ನಂತರ ಸಂವಾದ ನಡೆಯಿತು.
ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್ ಅಬ್ಬನಡ್ಕ ನಂದಳಿಕೆ (ರಿ.) ಸಂಚಾಲಕ ಸಂದೀಪ್ ವಿ. ಪೂಜಾರಿ ಪ್ರಸ್ತಾವಿಕವಾಗಿ ಮಾತನಾಡಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಜಿಲ್ಲಾ ಸಂಯೋಜಕ ರಾಘವೇಂದ್ರ ಪ್ರಭು ಕರ್ವಾಲು ಸ್ವಾಗತಿಸಿ, ತಾಲೂಕು ಸಂಯೋಜಕ ವಿವೇಕ್ ವಂದಿಸಿದರು. ಸ್ವಚ್ಛ ಭಾರತ್ ಫ್ರೆಂಡ್ಸ್ ಸ್ಥಾಪಕ ಸಂಚಾಲಕ ಗಣೇಶ್ ಪ್ರಸಾದ್ ಜಿ. ನಾಯಕ್ ಕಾರ್ಯಕ್ರಮ ನಿರೂಪಿಸಿದರು.