ಮಣಿಪಾಲ: ಎಕ್ಸ್-ರೇಡಿಯೇಶನ್ ಅಥವಾ ಎಕ್ಸ್-ಕಿರಣಗಳ ಆವಿಷ್ಕಾರದ ನೆನಪಿಗಾಗಿ ಪ್ರತಿ ವರ್ಷ ನವೆಂಬರ್ 8 ರಂದು ವಿಶ್ವ ವಿಕಿರಣಶಾಸ್ತ್ರ ದಿನವನ್ನು ಆಚರಿಸಲಾಗುತ್ತದೆ. 1895 ರಲ್ಲಿ ಈ ದಿನ, ಜರ್ಮನ್ ವಿಜ್ಞಾನಿ ವಿಲ್ಹೆಲ್ಮ್ ಕಾನ್ರಾಡ್ ರಾಂಟ್ಜೆನ್ ಎಕ್ಸ್-ರೇಡಿಯೇಶನ್, ಎಕ್ಸ್-ಕಿರಣಗಳ ಆವಿಷ್ಕಾರವನ್ನು ಪೂರ್ಣಗೊಳಿಸಿದರು. 1901 ರಲ್ಲಿ, ಅವರು ಈ ಸಾಧನೆಗಾಗಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದ ಮೊದಲ ವ್ಯಕ್ತಿಯಾದರು.
ಇದರ ಅಂಗವಾಗಿ ಮಣಿಪಾಲದ ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯ ರೇಡಿಯೋ ಡೈಗನೊಸಿಸ್ ವಿಭಾಗವು ಕಾರ್ಯಕ್ರಮವನ್ನು ಆಯೋಜಿಸಿತ್ತು. ಮಾಹೆ ಮಣಿಪಾಲದ ಸಹ ಕುಲಾಧಿಪತಿಗಳಾದ ಡಾ. ಎಚ್ ಎಸ್ ಬಲ್ಲಾಳ್- ಅವರು ಕಾರ್ಯಕ್ರಮ ಉದ್ಘಾಟಿಸಿ ಮತ್ತು ಮಾಹಿತಿ ಕಿರುಪುಸ್ತಕವನ್ನು ಬಿಡುಗಡೆ ಮಾಡಿದರು.
ಬಳಿಕ ಮಾತನಾಡಿದ ಅವರು, ವಿಕಿರಣಶಾಸ್ತ್ರ ದಿನದ ಈ ವರ್ಷದ ಧ್ಯೇಯ ವಾಕ್ಯ ‘ಇಂಟರ್ವೆನ್ಷನಲ್ ರೇಡಿಯಾಲಜಿ – ರೋಗಿಗೆ ಸಕ್ರಿಯ ಆರೈಕೆ’. ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಇಂಟರ್ವೆನ್ಷನಲ್ ರೇಡಿಯಾಲಜಿ ವಹಿಸುವ ಪ್ರಮುಖ ಪಾತ್ರವನ್ನು ಇದು ಎತ್ತಿ ಹಿಡಿಯುತ್ತದೆ, ಏಕೆಂದರೆ ಇತ್ತೀಚಿನ ದಿನಗಳಲ್ಲಿ ರೇಡಿಯಾಲಜಿ ವಿಭಾಗವು ರೋಗ ಪತ್ತೆ ಹಚ್ಚುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ ಎಂದರು.
ಕಾರ್ಯಕ್ರಮದ ಗೌರವ ಅತಿಥಿಯಾಗಿ ಮಾತನಾಡಿದ ಕೆಎಂಸಿ ಡೀನ್ ಡಾ.ಶರತ್ ಕೆ ರಾವ್ ಅವರು, ಎಕ್ಸ್ ರೇ ಆವಿಷ್ಕಾರ ಹಲವು ವಿಶೇಷ ವಿಭಾಗಗಳು ಮತ್ತು ಉಪವಿಭಾಗಗಳಿಗೆ ಜನ್ಮ ನೀಡಿದ್ದು, ಎಕ್ಸ್ ರೇ ಇಂದು ಹಲವು ವಿಭಾಗಗಳಿಗೆ ಬ್ರೆಡ್ ಮತ್ತು ಬಟರ್ ಇದ್ದಂತೆ ಆಗಿದೆ ಎಂದರು.
ಕಾರ್ಯಕ್ರಮದ ಗೌರವ ಅತಿಥಿಗಳಾಗಿ ಮುಖ್ಯನಿರ್ವಹಣಾಧಿಕಾರಿಗಳಾದ ಸಿ ಜಿ ಮುತ್ತಣ್ಣ, ವೈದ್ಯಕೀಯ ಅಧೀಕ್ಷಕರಾದ ಡಾ. ಅವಿನಾಶ್ ಶೆಟ್ಟಿ ಉಪಸ್ಥಿತರಿದ್ದರು.
ರೇಡಿಯೋ ಡಯಾಗ್ನೋಸಿಸ್ ವಿಭಾಗದ ಮುಖ್ಯಸ್ಥರಾದ ಡಾ ಪ್ರಕಾಶಿನಿ ಕೆ ಅವರು ಕಾರ್ಯಕ್ರಮದ ಕುರಿತು ಅವಲೋಕನವನ್ನು ನೀಡಿದರು. ರೇಡಿಯೋ ಡಯಾಗ್ನೋಸಿಸ್ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜಗೋಪಾಲ್ ಕೆ ವಿ ಸಭೆಯನ್ನು ಸ್ವಾಗತಿಸಿ, ಡಾ ಚೇತನ್ ಕುಮಾರ್ ಎಂ ವಂದಿಸಿದರು.