ಉಡುಪಿ: ರೈಲು ಅಪಘಾತದಿಂದ ಎರಡು ಕಾಲುಗಳನ್ನು ಕಳೆದುಕೊಂಡು ಸಂಚರಿಸಲಾಗದೆ, ಅಸಹಾಯಕ ಪರಿಸ್ಥಿತಿಯಲ್ಲಿದ್ದ ಬಾಬೀ ರಾಮ್ ಬಾಬು ಅವರಿಗೆ ಉಡುಪಿಯ ಗಿರಿಜಾ ಹೆಲ್ತ್ ಕೇರ್ ಎಂಡ್ ಸರ್ಜಿಕಲ್ಸ್ ಸಂಸ್ಥೆಯ ವತಿಯಿಂದ ಗಾಲಿ ಕುರ್ಚಿಯನ್ನು ಉಚಿತವಾಗಿ ಒದಗಿಸಲಾಯಿತು. ಸಂಸ್ಥೆಯ ಮಾಲಿಕ ರವೀಂದ್ರ ಶೆಟ್ಟಿ, ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ರಮೇಶ್ ಕಿದಿಯೂರ್, ತಾರಾನಾಥ್ ಮೇಸ್ತ ಶಿರೂರು ಉಪಸ್ಥಿತರಿದ್ದರು.
ಫಲಾನುಭವಿ ಬಾಬೀ ಅವರು ಉದ್ಯಾವರ ಕಟ್ಟೆಗುಡ್ಡೆಯ ವಸತಿ ಸಂಕೀರ್ಣದಲ್ಲಿ ಸೆಕ್ಯೂರ್ಟಿ ಗಾರ್ಡಾಗಿ ಉದ್ಯೋಗ ನಿರ್ವಹಿಸುತ್ತಿದ್ದರು. ಅಸಹಾಯಕತೆಯನ್ನು ಉಡುಪಿ ಜಿಲ್ಲಾ ನಾಗರಿಕ ಸಮಿತಿಯಲ್ಲಿ ಹೇಳಿಕೊಂಡು, ಗಾಲಿಕುರ್ಚಿ ಮತ್ತು ಕೃತಕ ಕಾಲು ಜೋಡಿಸುವಂತೆ ನೆರವು ಯಾಚಿಸಿದ್ದರು. ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು ಅವರು ಗಿರಿಜಾ ಹೆಲ್ತ್ ಕೇರ್ ಸಂಸ್ಥೆಯಲ್ಲಿ ಮೌಖಿಕವಾಗಿ ಮನವಿ ಒಪ್ಪಿಸಿದ್ದರು. ತಕ್ಷಣ ಸಂಸ್ಥೆಯವರು ಸ್ಪಂದಿಸಿದ್ದಾರೆ.