ಜರ್ಮನಿ, ಜಪಾನ್ ಸೇರಿದಂತೆ ಅನೇಕ ದೇಶಗಳಲ್ಲಿ ಸಹಕಾರ ಕ್ಷೇತ್ರಕ್ಕೆ ಪ್ರಥಮ ಪ್ರಾಶಸ್ತ್ಯವಿದ್ದು, ಕೃಷಿ ಪ್ರಧಾನ ದೇಶವಾದ ಭಾರತದಲ್ಲಿ ಇದುವರೆಗೂ ಕೇಂದ್ರದಲ್ಲಿ ಪ್ರತ್ಯೇಕ ಸಹಕಾರ ಸಚಿವಾಲಯ ಸ್ಥಾಪನೆಯಾಗಿರಲಿಲ್ಲ. ಆ ಕುರಿತು ದೇಶದ ಅನೇಕ ಸಹಕಾರ ಸಂಘಟನೆಗಳು ಕೇಂದ್ರ ಸರ್ಕಾರವನ್ನು ಒತ್ತಾಯಿಸುತ್ತಾ ಬಂದಿದ್ದವು.
ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಕೂಡ ಸಾಕಷ್ಟು ಬಾರಿ ಬಜೆಟ್ ಪೂರ್ವದಲ್ಲಿ ಪ್ರಧಾನ ಮಂತ್ರಿ, ಹಣಕಾಸು ಸಚಿವರು, ಕೃಷಿ ಸಚಿವರು ಹಾಗೂ ಜಿಲ್ಲೆಯ ಸಂಸದರಿಗೆ ಮನವಿ ಸಲ್ಲಿಸುತ್ತಾ ಬಂದಿತ್ತು. ಇದೀಗ ಪ್ರತ್ಯೇಕ ಸಹಕಾರ ಸಚಿವಾಲಯದ ಬೇಡಿಕೆ ಮನ್ನಿಸಿ ಐತಿಹಾಸಿಕ ನಿರ್ಣಯ ಕೈಗೊಂಡಿರುವುದು ಸಹಕಾರಿಗಳಿಗೆ ಸಂತಸ ತಂದಿದೆ ಎಂದು ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲ ನಿರ್ದೇಶಕ ಬಿ. ಜಯಕರ ಶೆಟ್ಟಿ ಇಂದ್ರಾಳಿ ಹರ್ಷ ವ್ಯಕ್ತಪಡಿಸಿದ್ದಾರೆ. ಈ ಐತಿಹಾಸಿಕ ನಿರ್ಣಯಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಹಾಗೂ ನೂತನ ಕೇಂದ್ರ ಸಹಕಾರ ಸಚಿವ ಅಮಿತ್ ಶಾ ಅವರನ್ನು ಅಭಿನಂದಿಸುವುದಾಗಿ ಜಯಕರ ಶೆಟ್ಟಿ ತಿಳಿಸಿದ್ದಾರೆ.
ದೇಶದ ಆರ್ಥಿಕತೆಗೆ ಸಹಕಾರ ಕ್ಷೇತ್ರದ ಕೊಡುಗೆ ಅಪಾರ. ಕೊರೊನಾ ಸಂಕಷ್ಟ ಸಮಯದಲ್ಲೂ ಸಹಕಾರ ಕ್ಷೇತ್ರದ ಮೂಲಕ ರೈತರು, ಬಡವರು, ದೇಶದ ಆರೋಗ್ಯ ಕ್ಷೇತ್ರಕ್ಕೆ ಜನೋಪಯೋಗಿ ಕಾರ್ಯಕ್ರಮಗಳು ಜಾರಿಯಾಗಿವೆ. ಕೇಂದ್ರದಲ್ಲಿ ಆದಾಯ ತೆರಿಗೆ ವಿನಾಯಿತಿ ಸೇರಿದಂತೆ ಸಹಕಾರ ಕ್ಷೇತ್ರಕ್ಕೆ ದೊರಕಬೇಕಾದ ಸೌಲಭ್ಯ ದೊರೆತು, ಸಹಕಾರ ಕ್ಷೇತ್ರ ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸಲಿ ಎಂಬುದು ಜಿಲ್ಲೆಯ ಸಮಸ್ತ ಸಹಕಾರಿಗಳ ಆಶಯವಾಗಿದೆ ಎಂದು ಜಯಕರ ಶೆಟ್ಟಿ ಇಂದ್ರಾಳಿ ಆಶಯ ವ್ಯಕ್ತಪಡಿಸಿದ್ದಾರೆ.