ಉಡುಪಿ: ವಾರಾಂತ್ಯ ಕರ್ಫ್ಯೂ ಆದೇಶ ಬಡವರ ಬದುಕುವ ಹಕ್ಕನ್ನು ಕಸಿದುಕೊಳ್ಳುತ್ತಿದೆ. ಸರಕಾರ ಕೂಡಲೇ ಈ ಬಗ್ಗೆ ಪುನರ್ವಿಮರ್ಶೆ ಮಾಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.
ದೇಶದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿ ಇಲ್ಲ. ತನ್ನದೇ ಸರಕಾರದ ಬಂಡ ಧೈರ್ಯದೊಂದಿಗೆ ನಡೆಯುವ ಜನಾಶೀರ್ವಾದ ಮೆರವಣಿಗೆ, ನೂತನ ಮಂತ್ರಿಗಳ ಸ್ವಾಗತ ಸಂಭ್ರಮಾಚರಣೆಗೆ ಸಹಸ್ರ ಸಂಖ್ಯೆಯ ಜನ ಸೇರುವಾಗ ಇಲ್ಲದ ಕೋವಿಡ್ ನಿಬಂಧನೆಗಳನ್ನು, ವಾರಾಂತ್ಯ ಕರ್ಫ್ಯೂ ಹೆಸರಲ್ಲಿ ದೈನಂದಿನ ದುಡಿಮೆಯಲ್ಲಿಯೇ ಬದುಕು ಸಾಗಿಸುತ್ತಿರುವ ರಿಕ್ಷಾ, ಟ್ಯಾಕ್ಸಿ, ಬಸ್ ಚಾಲಕ ಮಾಲಕರು, ಹೊಟೇಲ್, ಗೂಡಂಗಡಿದಾರರು, ಸೆಲೂನ್, ಬ್ಯೂಟಿ ಪಾರ್ಲರುಗಳು ಹಾಗೂ ಬಟ್ಟೆ ಅಂಗಡಿಗಳೆ ಮೊದಲಾದ ಸಮಾಜದ ದೈನಂದಿನ ಅವಶ್ಯಕತೆಗಳಿಗೆ ಸ್ಪಂದಿಸುವ ಕಸುಬುದಾರರ ಮೇಲೆ ಅವೈಜ್ಞಾನಿಕ ರೀತಿಯಲ್ಲಿ ಹೇರಿ, ದಿನದ ಸಂಪಾದನೆಗೆ ಕೊಕ್ಕೆ ಹಾಕಿ, ಅವರ ಬದುಕು ಕಸಿದುಕೊಳ್ಳುತ್ತಿರುವುದು ಖಂಡನೀಯ.
ಇದು ಜನಸಾಮಾನ್ಯರಿಗೆ ಇರುವ ಸಂವಿಧಾನದತ್ತ ಹಕ್ಕಿನ ಸಾಮಾಜಿಕ ನ್ಯಾಯದ ಉಲ್ಲಂಘನೆಯಾಗಿದೆ. ಜನ ಇದನ್ನು ಹೆಚ್ಚು ಸಮಯ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕಾಂಗ್ರೆಸ್ ಹೇಳಿದೆ. ಸರಕಾರ ಕೊರೋನಾದೊಂದಿಗೆ ಬದುಕಲು ಕಲಿಯಿರಿ ಎಂದು ಹೇಳುತ್ತಲೇ ಇಂತಹ ಆದೇಶಗಳನ್ನು ಪೂರ್ವಪರ ಆಲೋಚನೆ ಇಲ್ಲದೆ ಜಾರಿಗೊಳಿಸುತ್ತಿರುವುದು ಖಂಡನೀಯ. ಈ ಬಗ್ಗೆ ಸರಕಾರಕ್ಕೆ ಮಾಹಿತಿಯ ಕೊರತೆ ಇದೆ.
ಉಡುಪಿ ಜಿಲ್ಲೆಯಲ್ಲಿ ಕೊರೋನಾ 150ರ ಆಸುಪಾಸಿನಲ್ಲಿದ್ದು ಈ ಜಿಲ್ಲೆಗೆ ವೀಕೆಂಡ್ ಕರ್ಫಿಯ ಅಗತ್ಯವಿಲ್ಲ ಎಂಬುದು ಸಾರ್ವಜನಿಕರ ಅಭಿಪ್ರಾಯವಾಗಿದೆ. ಜಿಲ್ಲಾಧಿಕಾರಿಯವರು ಈ ಬಗ್ಗೆ ಸಾರ್ವಜನಿಕ ಅಭಿಪ್ರಾಯ ಕ್ರೋಢೀಕರಿಸಿ, ತಜ್ಞರ ಅಭಿಪ್ರಾಯ ಪಡೆದು ಮುಂದಿನ ಕ್ರಮ ಕೈಗೊಳ್ಳುವುದು ಒಳಿತು ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಹೇಳಿದ್ದಾರೆ.