ಉಡುಪಿ: ಜಿಲ್ಲಾ ಪಂಚಾಯತ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ ಜಿಲ್ಲೆ ಇವರ ಸಹಯೋಗದಲ್ಲಿ 12 ರಿಂದ 14 ವರ್ಷದವರೆಗಿನ ಮಕ್ಕಳಿಗೆ (2008, 2009 ಮತ್ತು 2010 ರಲ್ಲಿ ಮಾರ್ಚ್ 15 ರ ಒಳಗೆ ಜನಿಸಿದ ಮಕ್ಕಳು) ಕೋವಿಡ್-19 ಲಸಿಕಾ ಅಭಿಯಾನ ಕಾರ್ಯಕ್ರಮಕ್ಕೆ ಚಾಲನೆಯು ಮಾರ್ಚ್ 16 ರಂದು ಬೆಳಗ್ಗೆ 11 ಗಂಟೆಗೆ ನಗರದ ಅಜ್ಜರಕಾಡು ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿ ಮಾರ್ಚ್ 16 ರಿಂದ 12 ರಿಂದ 14 ವರ್ಷದವರೆಗಿನ ಒಟ್ಟು 37468 ಮಕ್ಕಳಿಗೆ ಕೊರ್ಬೆವ್ಯಾಕ್ಸ್ ಲಸಿಕೆ ನೀಡಲಾಗುತ್ತಿದ್ದು, ಪ್ರಾರಂಭಿಕವಾಗಿ ನಗರದ ಜಿಲ್ಲಾ ಆಯುಷ್ ಆಸ್ಪತ್ರೆಯಲ್ಲಿ ಲಸಿಕಾ ಶಿಬಿರಕ್ಕೆ ಚಾಲನೆ ನೀಡಲಾಗುವುದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ತಿಳಿಸಿದ್ದಾರೆ.
2008, 2009 ಮತ್ತು 2010 ರ ಮಾರ್ಚ್ 15 ರ ಒಳಗೆ ಜನಿಸಿದ ಮಕ್ಕಳು ಲಸಿಕೆ ಪಡೆಯಲು ಅರ್ಹರಿದ್ದು, ಶಾಲೆಯಿಂದ ಹೊರಗುಳಿದ ಅಥವಾ ಶಾಲೆ ಬಿಟ್ಟ 12 ವರ್ಷದಿಂದ 14 ವರ್ಷದವರೆಗಿನ ಮಕ್ಕಳಿಗೆ ಅವರು ವಾಸಿಸುವ ಸ್ಥಳದ ಹತ್ತಿರದ ಲಸಿಕಾ ಶಿಬಿರದಲ್ಲಿ ಲಸಿಕೆ ನೀಡಲು ವ್ಯವಸ್ಥೆ ಮಾಡಲಾಗುವುದು ಎಂದರು.
ಮಕ್ಕಳು ಲಸಿಕೆ ಪಡೆಯಲು ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಅಗತ್ಯವಿದ್ದು, ಪೋಷಕರು ಮಕ್ಕಳ ಆಧಾರ್ ಕಾರ್ಡ್ ಅಥವಾ ರೇಷನ್ ಕಾರ್ಡ್ ಮತ್ತು ಪೋಷಕರ ಮೊಬೈಲ್ ಸಂಖ್ಯೆ ನೀಡಿ, ಮಕ್ಕಳು ಲಸಿಕೆ ಪಡೆಯುವಂತೆ ಪ್ರೇರೇಪಿಸಬೇಕು.
ಫಲಾನುಭವಿ ಮಕ್ಕಳು ಸ್ವಂತ ಮೊಬೈಲ್ ಸಂಖ್ಯೆ ಬಳಸಿ ಅಥವಾ ಕೋವಿನ್ ಪೋರ್ಟಲ್‌ನಲ್ಲಿ ಈಗಾಗಲೇ ಇರುವ ಪೋಷಕರ ಅಕೌಂಟ್‌ನಲ್ಲಿ ನೋಂದಣಿ ಮಾಡಿಕೊಳ್ಳಬಹುದು. ಒಂದು ವೇಳೆ ಲಭ್ಯವಿಲ್ಲದಿದ್ದರೆ ಶಾಲೆಯ ಮಖ್ಯೋಪಾಧ್ಯಾಯರ ಅಥವಾ ಶಿಕ್ಷಕರ ಮೊಬೈಲ್ ಸಂಖ್ಯೆ ಮೂಲಕ ಲಸಿಕಾ ಶಿಬಿರದಲ್ಲಿಯೂ ನೋಂದಣಿ ಮಾಡಿಕೊಳ್ಳಬಹುದು ಎಂದರು. ಲಸಿಕಾ ಶಿಬಿರ ದಿನಾಂಕದಂದು ಪೋಷಕರು ಲಸಿಕಾ ಶಿಬಿರ ನಡೆಯುವ ಶಿಕ್ಷಣ ಸಂಸ್ಥೆಗಳಲ್ಲಿ ಉಪಸ್ಥಿತರಿದ್ದು, ಲಸಿಕಾ ಕಾರ್ಯಕ್ರಮಕ್ಕೆ ಸಹಕರಿಸಬೇಕು.
ಜಿಲ್ಲೆಯಲ್ಲಿ 18 ವರ್ಷ ಮೇಲ್ಪಟ್ಟವರಲ್ಲಿ ಪ್ರಥಮ ಡೋಸ್ 100% ಆಗಿದ್ದು, ದ್ವಿತೀಯ ಡೋಸ್‌ನಲ್ಲಿ 93.50% ಸಾಧನೆ ಆಗಿರುತ್ತದೆ. 15 ವರ್ಷ ಮೇಲ್ಪಟ್ಟರನ್ನು ಪರಿಗಣಿಸಿದಾಗ ಪ್ರಥಮ ಡೋಸ್ 99.92% ಮತ್ತು ದ್ವಿತೀಯ ಡೋಸ್ 92.87% ಸಾಧನೆ ಆಗಿರುತ್ತದೆ ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.