Sunday, January 19, 2025
Sunday, January 19, 2025

ಉಡುಪಿ: ಜುಲೈ 19 ರವರೆಗೆ ಪರಿಷ್ಕೃತ ಮಾರ್ಗಸೂಚಿ

ಉಡುಪಿ: ಜುಲೈ 19 ರವರೆಗೆ ಪರಿಷ್ಕೃತ ಮಾರ್ಗಸೂಚಿ

Date:

ರಾಜ್ಯ ಸರ್ಕಾರವು ಕೋವಿಡ್-19 ಪಾಸಿಟಿವಿಟಿ ಆಧಾರದ ಮೇಲೆ ಹೆಚ್ಚಿನ ಆರ್ಥಿಕ ಮತ್ತು ಇತರೆ ಚಟುವಟಿಕೆಗಳನ್ನು ತೆರೆಯಲು ಅನುಮತಿ ನೀಡಿ, ಈ ಹಿಂದೆ ಹೊರಡಿಸಿದ ಎಲ್ಲಾ ಆದೇಶಗಳನ್ನು ರದ್ದುಪಡಿಸಿ, ಜುಲೈ 19 ರ ಬೆಳಗ್ಗೆ 6 ಗಂಟೆಯವರೆಗೆ ಅನುಸರಿಸಬೇಕಾದ ಮಾರ್ಗಸೂಚಿಗಳನ್ನು ಹೊರಡಿಸಿರುತ್ತದೆ.

ಜಿಲ್ಲೆಯ ಪ್ರಸ್ತುತ ವಿದ್ಯಮಾನಗಳನ್ನು ಪರಿಗಣಿಸಿ, ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಸಿ.ಆರ್.ಪಿ.ಸಿ ಸೆಕ್ಷನ್ 144(3) ರಂತೆ ಜುಲೈ 5 ರಿಂದ ಮುಂದಿನ ಆದೇಶದವರೆಗೆ ಈ ಕೆಳಗಿನಂತೆ ಮಾರ್ಗಸೂಚಿಗಳನ್ನು ಹೊರಡಿಸಿ ಜಿಲ್ಲಾಧಿಕಾರಿ ಜಿ. ಜಗದೀಶ್ ಆದೇಶಿಸಿರುತ್ತಾರೆ. ಜಿಲ್ಲೆಯಾದ್ಯಂತ ಸಂಜೆ 9 ಗಂಟೆಯಿಂದ ಬೆಳಗ್ಗೆ 5 ಗಂಟೆಯವರೆಗೆ ಕಟ್ಟುನಿಟ್ಟಿನ ರಾತ್ರಿ ಕರ್ಫ್ಯೂ ಜಾರಿಯಲ್ಲಿರುತ್ತದೆ.

ಚಿತ್ರಮಂದಿರಗಳು, ಸಿನಿಮಾ ಹಾಲ್‌ಗಳು ಮತ್ತು ಪಬ್‌ಗಳಿಗೆ ಅನುಮತಿ ಇರುವುದಿಲ್ಲ. ಕೋವಿಡ್-19 ಸೂಕ್ತ ನಡವಳಿಕೆಯನ್ನು ಹಾಗೂ ಸಂಬಂಧಪಟ್ಟ ಇಲಾಖೆಯವರು ಹೊರಡಿಸಿರುವ ಕೋವಿಡ್-19 ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸುವ ಷರತ್ತುಗಳೊಂದಿಗೆ ಸ್ಪರ್ಧಾತ್ಮಕ ತರಬೇತಿಗಳಿಗೆ ಮಾತ್ರ ಈಜು ಕೊಳಗಳನ್ನು ತೆರೆಯಲು ಅನುಮತಿ ನೀಡಲಾಗಿದೆ.

ಕೋವಿಡ್-19 ಸೂಕ್ತ ಶಿಷ್ಟಾಚಾರವನ್ನು ಅನುಸರಿಸುವ ಷರತ್ತುಗಳೊಂದಿಗೆ ಕ್ರೀಡಾಪಟುಗಳು ಅಭ್ಯಾಸಕ್ಕೆ ಮಾತ್ರ ಕ್ರೀಡಾ ಸಂಕೀರ್ಣಗಳನ್ನು ಅಥವಾ ಸ್ಟೇಡಿಯಂಗಳನ್ನು ತೆರೆಯಲು ಅನುಮತಿ ನೀಡಲಾಗಿದ್ದು, ಪ್ರೇಕ್ಷಕರಿಗೆ ಅನುಮತಿ ಇರುವುದಿಲ್ಲ. ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಅಕಾಡೆಮಿಕ್, ಸಾಂಸ್ಕೃತಿಕ, ಧಾರ್ಮಿಕ ಸಭೆ, ಸಮಾರಂಭಗಳು ಮತ್ತು ಇತರೆ ಜನ ಸೇರುವ ಕಾರ್ಯಕ್ರಮಗಳಿಗೆ ಅನುಮತಿ ಇರುವುದಿಲ್ಲ.

ಕೋವಿಡ್-19 ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸುವ ಷರತ್ತುಗಳೊಂದಿಗೆ ಮದುವೆ, ಕೌಟುಂಬಿಕ ಶುಭ ಸಮಾರಂಭಗಳಿಗೆ ಸರ್ಕಾರದ ಹಿಂದಿನ ಮಾರ್ಗಸೂಚಿಯಂತೆ ಈ ಕೆಳಗೆ ನಿಗದಿಪಡಿಸಿದ ಷರತ್ತಿಗೊಳಪಟ್ಟು 100 ಜನ ಮೀರದಂತೆ ನಡೆಸಲು ಅನುಮತಿ ನೀಡಲಾಗಿದೆ.

ಮದುವೆ/ ಕೌಟುಂಬಿಕ ಶುಭ ಸಮಾರಂಭಗಳನ್ನು ಆಯೋಜಿಸುವವರು ಆಮಂತ್ರಣ ಪತ್ರ ಅಥವಾ ಇತರ ಯಾವುದೇ ಸಂಬಂಧಿತ ದಾಖಲೆಗಳೊಂದಿಗೆ ಸಹಿ ಮಾಡಿದ ಅರ್ಜಿಯನ್ನು ಸಂಬಂಧಪಟ್ಟ ತಹಶೀಲ್ದಾರ್ ಅವರಿಗೆ ಸಲ್ಲಿಸಬೇಕು. ಅರ್ಜಿಯ ಸ್ವೀಕೃತಿಯ ಮೇರೆಗೆ ತಹಶೀಲ್ದಾರರು ಪ್ರತಿ ಮದುವೆ/ ಕೌಟುಂಬಿಕ ಶುಭ ಸಮಾರಂಭ ಕಾರ್ಯಕ್ರಮಕ್ಕೆ 100 ಪಾಸ್‌ಗಳನ್ನು ನೀಡಬೇಕು. ಪಾಸ್ ಹೊಂದಿರುವ ಜನರಿಗೆ ಮಾತ್ರ ಮದುವೆ/ ಕೌಟುಂಬಿಕ ಶುಭ ಸಮಾರಂಭ ಕಾರ್ಯಕ್ಕೆ ಹಾಜರಾಗಲು ಅವಕಾಶವಿದ್ದು, ಪಾಸ್ ಅನ್ನು ವರ್ಗಾಯಿಸಲು ಅವಕಾಶವಿರುವುದಿಲ್ಲ.

ಮದುವೆ/ ಕೌಟುಂಬಿಕ ಶುಭ ಸಮಾರಂಭ ಕಾರ್ಯಕ್ಕೆ ಹಾಜರಾಗುವ ಜನರು ಕೋವಿಡ್ ಸಮುಚಿತ ವರ್ತನೆಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು ಮತ್ತು ಪಾಸ್‌ಗಳನ್ನು ಅಧಿಕೃತ ಪರಿಶೀಲನಾ ಅಧಿಕಾರಿಗಳಿಗೆ ತೋರಿಸಬೇಕು.

ಕೋವಿಡ್-19 ಸೂಕ್ತ ನಡವಳಿಕೆಯಂತೆ ಅಂತ್ಯ ಸಂಸ್ಕಾರಕ್ಕೆ 20 ಜನ ಮೀರದಂತೆ ನಡೆಸಲು ಅನುಮತಿಸಲಾಗಿದೆ.

ಕೋವಿಡ್ ಸಮುಚಿತ ವರ್ತನೆಯನ್ನು ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದಿಂದ ಹೊರಡಿಸಲಾದ ಕೋವಿಡ್-19 ಪ್ರಮಾಣಿತ ಕಾರ್ಯವಿಧಾನವನ್ನು ಅನುಸರಿಸುವ ಷರತ್ತುಗಳೊಂದಿಗೆ ಪೂಜಾ ಸ್ಥಳಗಳಲ್ಲಿ ದೇವರ ದರ್ಶನಕ್ಕೆ/ ಪ್ರಾರ್ಥನೆಗೆ ಮಾತ್ರ ಅನುಮತಿ ನೀಡಲಾಗಿದ್ದು, ಯಾವುದೇ ಸೇವೆ/ ಅರ್ಪಣೆ ಅಥವಾ ಇತರೆ ಚಟುವಟಿಕೆಗಳಿಗೆ ಅವಕಾಶ ಇರುವುದಿಲ್ಲ.

ಕೋವಿಡ್-19 ಸೂಕ್ತ ನಡವಳಿಕೆಯಂತೆ ಶೇ. 100 ರಷ್ಟು ಆಸನ ಸಾಮರ್ಥ್ಯದವರೆಗೆ ಸಾರ್ವಜನಿಕ ಸಾರಿಗೆಗಳಿಗೆ ಅನುಮತಿ ನೀಡಲಾಗಿದೆ. ಎಲ್ಲಾ ಅಂಗಡಿಗಳು, ರೆಸ್ಟೋರೆಂಟ್‌ಗಳು, ಮಾಲ್‌ಗಳು, ಖಾಸಗಿ ಕಚೇರಿಗಳು ಮತ್ತು ಮುಚ್ಚಿದ ಸ್ಥಳಗಳಲ್ಲಿ ಕೋವಿಡ್-19 ನಡವಳಿಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ತಪ್ಪಿದಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ 2005 ರನ್ವಯ ಕ್ರಮ ಕೈಗೊಳ್ಳಲಾಗುವುದು.

ಶೈಕ್ಷಣಿಕ ಸಂಸ್ಥೆಗಳು, ಟುಟ್ಯೋರಿಯಲ್ಸ್ ಹಾಗೂ ಕಾಲೇಜುಗಳು ಮುಂದಿನ ಆದೇಶದವರೆಗೆ ಮುಚ್ಚಲ್ಪಟ್ಟಿರುತ್ತದೆ.

ಕೋವಿಡ್ -19 ಸಮುಚಿತ ವರ್ತನೆಯನ್ನು ಪಾಲಿಸಲು ಮುಖಗವಸುಗಳನ್ನು ಕಡ್ಡಾಯವಾಗಿ ಧರಿಸಬೇಕು. ಕೈಗಳ ನೈರ್ಮಲ್ಯ ಮತ್ತು ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳುವುದನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಮಾಸ್ಕ್ ಧರಿಸುವುದು, ಸೋಂಕು ಹರಡುವಿಕೆಯನ್ನು ನಿಯಂತ್ರಿಸಲು ಅತ್ಯವಶ್ಯಕ ಕ್ರಮವಾಗಿದ್ದು, ಮುಖಗವಸನ್ನು ಧರಿಸದ ವ್ಯಕ್ತಿಗಳ ವಿರುದ್ಧ ಮಹಾನಗರ ಪಾಲಿಕೆ ಪ್ರದೇಶಗಳಲ್ಲಿ 250 ರೂ. ಮತ್ತು ಇನ್ನಿತರ ಪ್ರದೇಶಗಳಲ್ಲಿ 100 ರೂ. ದಂಡ ವಿಧಿಸಲಾಗುವುದು. ಕೋವಿಡ್ ನಿರ್ವಹಣೆಗಾಗಿ ರಾಷ್ಟ್ರ‍ೀಯ ನಿರ್ದೇಶನಗಳನ್ನು ಜಿಲ್ಲೆಯಾದ್ಯಂತ ಕಟ್ಟುನಿಟ್ಟಾಗಿ ಪಾಲಿಸಬೇಕು.

ನೈಟ್ ಕಫ್ಯೂ ಮಾರ್ಗಸೂಚಿಗಳು: ರಾತ್ರಿ 9 ರಿಂದ ಬೆಳಗ್ಗೆ 5 ಗಂಟೆಯವರೆಗೆ ಅಗತ್ಯ ಚಟುವಟಿಕೆಗಳಿಗೆ ಹೊರತುಪಡಿಸಿ ಜನರ ಓಡಾಟಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ರೋಗಿಗಳು ಮತ್ತು ಅವರೊಂದಿಗಿರುವ ಪರಿಚಾರಕರು ತುರ್ತು ಅಗತ್ಯತೆಗಾಗಿ ವ್ಯಕ್ತಿಗಳನ್ನು ಸ್ಥಳಾಂತರಿಸಲು ಅನುಮತಿಸಲಾಗಿದೆ. ರಾತ್ರಿ ಪಾಳಿಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಕೈಗಾರಿಕೆಗಳು, ಕಂಪೆನಿಗಳಿಗೆ ರಾತ್ರಿ ಸಮಯದಲ್ಲಿ ಕಾರ್ಯಾಚರಿಸಲು ಅನುಮತಿ ನೀಡಲಾಗಿದ್ದು, ಸಂಸ್ಥೆಯಲ್ಲಿ ಕರ್ತವ್ಯ ನಿರ್ವಹಿಸುವ ನೌಕರರು, ಸಂಸ್ಥೆಯಿಂದ ನೀಡಲಾದ ಸೂಕ್ತ ಗುರುತಿನ ಚೀಟಿ ಅಥವಾ ಅನುಮತಿಗೆ ಸಂಬಂಧಿಸಿದ ದಾಖಲೆಯನ್ನು ಸಲ್ಲಿಸುವ ಮೂಲಕ ಸಂಚರಿಸಬಹುದಾಗಿದೆ.

ದೂರವಾಣಿ ಹಾಗೂ ಅಂತರ್ಜಾಲ ಸೇವೆಯನ್ನು ಒದಗಿಸುವ ನೌಕರರು ಹಾಗೂ ವಾಹನಗಳನ್ನು ಸಂಸ್ಥೆಯಿಂದ ಪಡೆದಿರುವ ಸೂಕ್ತ ಗುರುತಿನ ಚೀಟಿಯನ್ನು ಸಲ್ಲಿಸಿ ಸಂಚರಿಸಬಹುದು. ಮಾಹಿತಿ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಆಧಾರಿತ ಕಂಪೆನಿ/ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಅಗತ್ಯ ಸಿಬ್ಬಂದಿ ಹಾಗೂ ಕಾರ್ಮಿಕರನ್ನು ಹೊರತುಪಡಿಸಿ, ಇತರೆ ಸಿಬ್ಬಂದಿ ಹಾಗೂ ಕೆಲಸಗಾರರು ಮನೆಗಳಲ್ಲಿಯೇ ಕಾರ್ಯನಿರ್ವಹಿಸಬೇಕು.

ವೈದ್ಯಕೀಯ, ತುರ್ತು ಹಾಗೂ ಔಷಧಾಲಯಗಳನ್ನು ಒಳಗೊಂಡ ಅವಶ್ಯಕ ಸೇವೆಗಳು ಯಥಾ ರೀತಿಯಲ್ಲಿ ಸರಕಾರದ ನಿಯಮಗಳೊಂದಿಗೆ ಕಾರ್ಯನಿರ್ವಹಿಸಲಿದ್ದು, ಇತರೆ ವಾಣಿಜ್ಯ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.

ಎಲ್ಲಾ ತರಹದ ಟ್ರಕ್‌ಗಳಲ್ಲಿ ಸಾಗಿಸುವ ಸರಕುಗಳು, ಸರಕು ವಾಹನ ಅಥವಾ ಇತರೆ ಸಾಗಾಟ ವಾಹನಗಳು ಹಾಗೂ ಖಾಲಿ ವಾಹನಗಳ ಓಡಾಟಕ್ಕೆ ಅವಕಾಶ ನೀಡಲಾಗಿದೆ. ಇ-ಕಾಮರ್ಸ್ ಕಂಪೆನಿಗಳು ಹಾಗೂ ಹೋಮ್ ಡೆಲಿವರಿ ಕೆಲಸವನ್ನು ಮುಂದುವರೆಸಲು ಅನುಮತಿ ನೀಡಲಾಗಿದೆ.

ಬಸ್ ಸೇವೆಗಳು, ರೈಲುಗಳು ಮತ್ತು ವಿಮಾನ ಪ್ರಯಾಣವನ್ನು ಅನುಮತಿಸಲಾಗಿದ್ದು, ವಿಮಾನ, ರೈಲು ಬಸ್ ನಿಲ್ದಾಣಕ್ಕೆ ಹಾಗೂ ವಿಮಾನ, ರೈಲು , ಬಸ್ ನಿಲ್ದಾಣಗಳಿಂದ ಹೊರಡುವ ಸಾರ್ವಜನಿಕ ಸಾರಿಗೆ ವಾಹನಗಳು, ಖಾಸಗಿ ವಾಹನಗಳು ಮತ್ತು ಟ್ಯಾಕ್ಸಿಗಳ ಓಡಾಟಕ್ಕೆ ಅನುಮತಿ ನೀಡಲಾಗಿದ್ದು, ಪ್ರಯಾಣ ಮಾಡುವ ಸಂದರ್ಭದಲ್ಲಿ ಪ್ರಯಾಣಿಕರು ಸೂಕ್ತ ಪ್ರಯಾಣದ ದಾಖಲೆಗಳು/ ಟಿಕೆಟುಗಳನ್ನು ಸಲ್ಲಿಸುವುದು ಕಡ್ಡಾಯವಾಗಿರುತ್ತದೆ.

ಮೇಲಿನ ಆದೇಶಗಳನ್ನು ಪಾಲಿಸದೇ ಇದ್ದವರ ವಿರುದ್ಧ ಪೊಲೀಸ್ ಠಾಣೆಗಳಲ್ಲಿ ಕ್ರಿಮಿನಲ್ ಪ್ರಕರಣಗಳನ್ನು, ಡಿಸಾಸ್ಟರ್ ಮ್ಯಾನೇಜ್‌ಮೆಂಟ್ ಆ್ಯಕ್ಟ್ 2005, ಕರ್ನಾಟಕ ಎಪಿಡೆಮಿಕ್ ಡಿಸೀಸಸ್ ಆ್ಯಕ್ಟ್ 2020 ಮತ್ತು ಐ.ಪಿ.ಸಿ ಸೆಕ್ಷನ್ 188 ಪ್ರಕಾರ ನಿಯಮಾನುಸಾರ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!