ಉಡುಪಿ: ಅಜೆಕಾರು ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟಿಗ ಒಳಪಟ್ಟ ಅಂಗ ಸಂಸ್ಥೆಯಾದ ಉಡುಪಿ ಜ್ಞಾನಸುಧಾ ಪದವಿಪೂರ್ವ ಕಾಲೇಜು ಕಡಿಯಾಳಿಯ ನಾಗಬನ ಕ್ಯಾಂಪಸ್‌ನಲ್ಲಿ ಕರ್ನಾಟಕ ಸರಕಾರದ ಅನುಮತಿಯೊಂದಿಗೆ ಪ್ರಾರಂಭಗೊಂಡಿದೆ.
ಪದವಿಪೂರ್ವ ಕಾಲೇಜಿನ ಕಟ್ಟಡವನ್ನು ಕೃಷ್ಣಾಪುರ ಮಠದ ಮಠಾಧಿಪತಿ ಶ್ರೀ ಶ್ರೀ ಶ್ರೀ ವಿದ್ಯಾಸಾಗರತೀರ್ಥ ಸ್ವಾಮೀಜಿಯವರು ಇತ್ತೀಚೆಗೆ ಉದ್ಘಾಟಿಸಿ ಶೈಕ್ಷಣಿಕ ಕ್ಷೇತ್ರದಲ್ಲಿ ಕಾರ್ಕಳ ಜ್ಞಾನಸುಧಾವು ಉನ್ನತ ಸಾಧನೆಗೈಯುತ್ತಿರುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಅಂತಹ ಸಂಸ್ಥೆಯು ದಶಮಾನೋತ್ಸವದ ಸಂದರ್ಭದಲ್ಲಿ ಕೃಷ್ಣನೂರು ಉಡುಪಿಯಲ್ಲಿ ಅದರ ಅಂಗ ಸಂಸ್ಥೆಯನ್ನು ಪ್ರಾರಂಭಿಸುತ್ತಿರುವುದು ಸಂತಸದ ಸಂಗತಿ. ಈಗಾಗಲೇ ಅಸ್ತಿತ್ವದಲ್ಲಿದ್ದ ಕಟ್ಟಡವನ್ನು ಸುಸಜ್ಜಿತ ಪದವಿಪೂರ್ವ ಕಾಲೇಜನ್ನಾಗಿ ಮರುವಿನ್ಯಾಸಗೊಳಿಸಿ ವಿದ್ಯಾರ್ಥಿಗಳಿಗೆ ಮೌಲ್ಯಯುತ ಶಿಕ್ಷಣವನ್ನು ನೀಡಬೇಕೆಂಬ ಡಾ. ಸುಧಾಕರ ಶೆಟ್ಟಿಯವರ ಸದುದ್ದೇಶಕ್ಕೆ ಭಗವಂತನ ಅನುಗ್ರಹವಿರಲಿ ಎಂದು ಆಶೀರ್ವಚನ ನೀಡಿದರು.
ಕರ್ನಾಟಕ ಸರಕಾರದ ಇಂಧನ ಮತ್ತು ಕನ್ನಡ ಹಾಗೂ ಸಂಸ್ಕೃತಿ ಇಲಾಖೆಯ ಸಚಿವರಾದ ವಿ.ಸುನಿಲ್ ಕುಮಾರ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ವಿವಿಧ ಪ್ರಯೋಗಾಲಯಗಳ ಉದ್ಘಾಟನೆಯನ್ನು ನೆರವೇರಿಸಿ ಪ್ರಯೋಗಾಲಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಸಕ ಕೆ. ರಘುಪತಿ ಭಟ್ ವಹಿಸಿದ್ದರು.
ಕೋವಿಡ್‌ನ ಕಾರಣದಿಂದಾಗಿ ಕಾರ್ಯಕ್ರಮವು ತೀರಾ ಸರಳವಾಗಿ ನಡೆದಿದ್ದು, ಪ್ರಸಾದ್ ನೇತ್ರಾಲಯದ ಸ್ಥಾಪಕ ನಿರ್ದೇಶಕರಾದ ಡಾ. ಕೃಷ್ಣಪ್ರಸಾದ್ ದಂಪತಿಗಳು, ಟ್ರಸ್ಟಿಗಳಾದ ವಿದ್ಯಾವತಿ ಎಸ್. ಶೆಟ್ಟಿ, ಕರುಣಾಕರ್ ಶೆಟ್ಟಿ, ಗವರ್ನಿಂಗ್ ಕೌನ್ಸಿಲ್ ಸದಸ್ಯರಾದ ಅನಿಲ್ ಕುಮಾರ್ ಜೈನ್, ಡಾ.ಪ್ರಕಾಶ್ ಶಣೈ, ಕಾರ್ಕಳ ಜ್ಞಾನಸುಧಾದ ಪ್ರಾಂಶುಪಾಲರಾದ ದಿನೇಶ್ ಎಂ. ಕೊಡವೂರು, ಉಡುಪಿ ಜ್ಞಾನಸುಧಾದ ಪ್ರಾಂಶುಪಾಲರಾದ ಗಣೇಶ್ ಶೆಟ್ಟಿ, ಕಾರ್ಕಳ ಜ್ಞಾನಸುಧಾ ಹೈಸ್ಕೂಲಿನ ಪ್ರಾಂಶುಪಾಲೆ ಉಷಾ ರಾವ್, ಸಾರ್ವಜನಿಕ ಸಂಪರ್ಕಾಧಿಕಾರಿ ಜ್ಯೋತಿ ಪದ್ಮನಾಭ್ ಮೊದಲಾದವರು ಉಪಸ್ಥಿತರಿದ್ದರು.
ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ನ ಸಂಸ್ಥಾಪಕರಾದ ದಿ. ಗೋಪ ಶೆಟ್ಟಿಯವರ ಜನ್ಮಶತಾಬ್ದಿ ಹಾಗೂ ಜ್ಞಾನಸುಧಾದ ದಶಮಾನೋತ್ಸವದ ಸಂದರ್ಭದಲ್ಲಿ ಉಡುಪಿ ಜ್ಞಾನಸುಧಾದ ಪ್ರತಿಭಾನ್ವಿತ ವಿಧ್ಯಾರ್ಥಿಗಳಿಗೆ ಉಚಿತ ಶಿಕ್ಷಣವನ್ನು ಟ್ರಸ್ಟಿನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ ಘೋಷಿಸಿದರು ಮತ್ತು ಉಡುಪಿ ಜ್ಞಾನ ಸುಧಾದ ಸ್ಥಾಪನೆಗೆ ಹಾಗೂ ಸರಕಾರದಿಂದ ಅನುಮತಿಗಾಗಿ ಸಹಕರಿಸಿದ ಸರ್ವರನ್ನೂ ಸ್ಮರಿಸಿದರು.