ಉಡುಪಿ: ಗ್ರಾಮೀಣ ಪರಿಸರದ ಬಡ ಮಕ್ಕಳು ಮತ್ತು ಗರ್ಭಿಣಿ ಮಹಿಳೆಯರಲ್ಲಿ ಪೌಷ್ಠಿಕತೆ ಹೆಚ್ಚಿಸುವ ಗುರಿಯೊಂದಿಗೆ ಅಂಗನವಾಡಿ ಕೇಂದ್ರಗಳಿಗೆ ಮಾತೃಪೂರ್ಣ ಯೋಜನೆಯಡಿಯಲ್ಲಿ ರಾಜ್ಯ ಸರಕಾರ ಕೊಡಮಾಡುತ್ತಿದ್ದ ಮೊಟ್ಟೆ ಸರಬರಾಜು ಟೆಂಡರ್ ಪ್ರಕ್ರಿಯೆಯಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಶಶಿಕಲಾ ಜೊಲ್ಲೆ ಹಸ್ತಕ್ಷೇಪ ನಡೆಸಲು ಒಪ್ಪಿಕೊಂಡು, ಮಾಸಿಕ ಕೋಟಿ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವುದು ಟಿವಿ ಮಾಧ್ಯಮವೊಂದರ ಕುಟುಕು ಕಾರ್ಯಾಚರಣೆಯಲ್ಲಿ ಬಹಿರಂಗ ಗೊಂಡಿದ್ದು, ಆ ನೆಲೆಯಲ್ಲಿ ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಸೂಕ್ತ ತನಿಕೆಗೆ ಅವಕಾಶ ಮಾಡಿಕೊಡಬೇಕು ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಆಗ್ರಹಿಸಿದೆ.
ರಕ್ಷಣಾ ಇಲಾಖೆಯ ಟೆಂಡರ್ ಪ್ರಕ್ರಿಯೆಯೊಂದರಲ್ಲಿ ಸಮತಾ ಪಕ್ಷದ ಜಯಾ ಜೆಟ್ಲಿ ಹಸ್ತಕ್ಷೇಪವನ್ನು ಗುರಿಯಾಗಿರಿಸಿ, 2001ರಲ್ಲಿ ಅಂದಿನ ಪ್ರಧಾನಿ ದಿ. ವಾಜಪೇಯಿ ಸರಕಾರದ ಆಡಳಿತಾವಧಿಯಲ್ಲಿ ನಡೆದ ತೆಹಲ್ಕಾ ಕುಟುಕು ಕಾರ್ಯಾಚರಣೆಯನ್ನೇ ಮಾನದಂಡವನ್ನಾಗಿರಿಸಿ, ಈ ಹಗರಣದ ಸೂಕ್ತ ತನಿಕೆ ಆಗಬೇಕು. ಬಡಮಕ್ಕಳ ಮತ್ತು ಮಹಿಳೆಯರ ಅನ್ನಕ್ಕೆ ಕನ್ನ ಹಾಕುವವರಿಗೆ ಸರಿಯಾದ ಶಿಕ್ಷೆ ಆಗಬೇಕು ಎಂದು ಕಾಂಗ್ರೆಸ್ ಒತ್ತಾಯಿಸಿದೆ.
ಮಾಜಿ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಆಡಳಿತದ ಅವಧಿಯಲ್ಲಿ ಜಾರಿಗೆ ಬಂದಿದ್ದ ಈ ಜನಪರ ಯೋಜನೆಯಡಿಯಲ್ಲಿ ಅಂಗನವಾಡಿಗಳ ಮೂಲಕ ಹಾಲಿನೊಂದಿಗೆ ಮೊಟ್ಟೆಯನ್ನು ನೀಡಲಾಗುತ್ತಿತ್ತು. ಅಂದು ವಿರೋಧ ಪಕ್ಷವಾಗಿದ್ದ ಬಿಜೆಪಿ ಧರ್ಮದ ನೆಲೆಗಟ್ಟಿನಲ್ಲಿ ಇದನ್ನು ವಿರೋಧಿಸಿತ್ತು. ಇಂದು ಅದೇ ಪಕ್ಷದ ಸಚಿವೆಯೊಬ್ಬರು ಮೊಟ್ಟೆಯ ವಿಚಾರದಲ್ಲಿ ಭ್ರಷ್ಠಾಚಾರ ನಡೆಸಿದ್ದಾರೆ ಎಂಬ ವಿಚಾರವು ಮಾಧ್ಯಮದಲ್ಲಿ ಬಂದಿರುವುದು ಸರಕಾರದ ಜನಪರ ಚಿಂತನೆಯ ಆಡಳಿತಾತ್ಮಕ ವೈಫಲ್ಯಕ್ಕೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ವಕ್ತಾರ ಬಿಪಿನಚಂದ್ರ ಪಾಲ್ ನಕ್ರೆ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.