ಕಾರ್ಕಳ: ಭಾರತ ಸರ್ಕಾರ ಯುವ ಕಾರ್ಯ ಕ್ರೀಡಾ ಸಚಿವಾಲಯ, ನೆಹರು ಯುವ ಕೇಂದ್ರ ಸಂಘಟನೆ ಉಡುಪಿ ಹಾಗೂ ಯುವಕ ಮಂಡಲ (ರಿ.) ಸಾಣೂರು ಇದರ ಸಂಯುಕ್ತ ಆಶ್ರಯದಲ್ಲಿ 2020/21 ನೇ ಸಾಲಿನ ಎಸ್. ಎಸ್. ಎಲ್. ಸಿ ಪರೀಕ್ಷೆಯಲ್ಲಿ ಶೇಕಡಾ 90ಕ್ಕಿಂತ ಅಧಿಕ ಅಂಕ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನಾ ಕಾರ್ಯಕ್ರಮ ಪಟೇಲ್ ಮುದ್ದಣ್ಣ ಶೆಟ್ಟಿ ಸ್ಮಾರಕ ಜ್ಯೋತಿ ಕಲಾ ಮಂಟಪದಲ್ಲಿ ನಡೆಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸುಂದರ ಪುರಾಣಿಕ ಸ್ಮಾರಕ ಸರಕಾರಿ ಪ್ರೌಢಶಾಲೆ ಪೆರ್ವಾಜೆ ಕಾರ್ಕಳ ಇಲ್ಲಿನ ಮುಖ್ಯೋಪಾಧ್ಯಾಯಿನಿ ಕೆ. ಹರ್ಷಿಣಿ, ಅಂಕಗಳೊಂದಿಗೆ ವಿನಯತೆ, ಸಂಸ್ಕಾರ, ಒಳ್ಳೆಯ ಗುಣನಡತೆ ಇದ್ದಲ್ಲಿ ಜೀವನದಲ್ಲಿ ಯಶಸ್ಸು ಸಾಧಿಸಲು ಸಾಧ್ಯ. ಸಾಣೂರು ಯುವಕ ಮಂಡಲ ಪ್ರತಿಭೆಗಳನ್ನು ಗುರುತಿಸಲು ನಡೆಸುವ ಕಾರ್ಯ ಅಭಿನಂದನೀಯ ಎಂದರು.
ಮುಖ್ಯ ಅಭ್ಯಾಗತರಾಗಿ ಸರಕಾರಿ ಪ್ರೌಢಶಾಲೆ ಸಾಣೂರು ಪ್ರಭಾರ ಮುಖ್ಯ ಶಿಕ್ಷಕ ಗಿರೀಶ್ ಕುಮಾರ್, ಲಕ್ಷ್ಮಿ ಜನಾರ್ಧನ ಪದವಿಪೂರ್ವ ಕಾಲೇಜು ಬೆಳ್ಮಣ್ಣು ಉಪ ಪ್ರಾಂಶುಪಾಲ ಸಂದೀಪ್ ಪುತ್ರನ್ ಸಮಾಯೋಚಿತವಾಗಿ ಮಾತನಾಡಿದರು. ಅಧ್ಯಕ್ಷತೆ ವಹಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ವೆಂಕಟೇಶ್ ಜಿ. ನಾಯಕ್ ಮಾತನಾಡಿ, ವಿದ್ಯಾರ್ಥಿಗಳು ನಮ್ಮ ಆಸ್ತಿ. ವಿದ್ಯಾರ್ಥಿಗಳ ಜೀವನ ನಿರೂಪಣೆಯಲ್ಲಿ ಶಿಕ್ಷಕರ ಪಾತ್ರ ಎಷ್ಟಿದೆಯೂ ಸಂಘ ಸಂಸ್ಥೆಗಳ ಪ್ರೋತ್ಸಾಹ ಅಷ್ಟೇ ಅಗತ್ಯ. ಶೈಕ್ಷಣಿಕ ಕ್ಷೇತ್ರವನ್ನು ಸದಾ ಪ್ರೋತ್ಸಾಹಿಸುವ ಸಾಣೂರು ಯುವಕ ಮಂಡಲದ ಕಾರ್ಯ ಪ್ರಸಂಶನಿಯ. ಇದು ರಾಜ್ಯಕ್ಕೆ ಮಾದರಿಯೆಂದರು.
ಎಸ್. ಎಸ್. ಎಲ್. ಸಿ ರಾಜ್ಯಕ್ಕೆ ನಾಲ್ಕನೇ ಸ್ಥಾನ ಪಡೆದ ಮಯೂರಿ ಜೆ ಶೆಟ್ಟಿ ಸೇರಿದಂತೆ ಶೇಕಡಾ 90% ಕ್ಕಿಂತ ಅಧಿಕ ಅಂಕ ಪಡೆದ 8 ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು. ಶಿಕ್ಷಕರ ದಿನಾಚರಣೆಯ ಪ್ರಯುಕ್ತ ದೇಶದ ಮಾಜಿ ರಾಷ್ಟ್ರಪತಿ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರ ಜನ್ಮದಿನಾಚರಣೆಯನ್ನು ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡುವ ಮೂಲಕ ಆಚರಿಸಲಾಯಿತು.
ಸಾಣೂರು ಗ್ರಾಮದ 5 ನಿವೃತ್ತ ಶಿಕ್ಷಕರಿಗೆ ಗೌರವ ಅಭಿನಂದನೆ ಸಲ್ಲಿಸಲಾಯಿತು. ನಿವೃತ ಶಿಕ್ಷಕರ ಪರವಾಗಿ ಬಿ. ಪುರುಷೋತ್ತಮ ಗೌಡ ಮಾತನಾಡಿದರು. ವಿದ್ಯಾರ್ಥಿಗಳ ಪೋಷಕರ ಪರವಾಗಿ ಸಾಣೂರು ನರಸಿಂಹ ಕಾಮತ್ ಅಭಿಪ್ರಾಯ ವ್ಯಕ್ತಪಡಿಸಿದರು. ವೇದಿಕೆಯಲ್ಲಿ ಶ್ಯಾಮ ಶೆಟ್ಟಿ ಸಾಣೂರು, ಪ್ರಭಾತ್ ನಾಯ್ಕ್ ಉಪಸ್ಥಿತರಿದ್ದರು.
ಮಂಡಲದ ಮಾಜಿ ಅಧ್ಯಕ್ಷರುಗಳು, ಪದಾಧಿಕಾರಿಗಳು, ವಿದ್ಯಾರ್ಥಿಗಳ ಪೋಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಮಂಡಲದ ಅಧ್ಯಕ್ಷರಾದ ಪ್ರಸಾದ್ ಪೂಜಾರಿ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿ, ಸಮಿತಿ ಸದಸ್ಯರಾದ ಸತೀಶ್ ಮಡಿವಾಳ ವಂದಿಸಿದರು. ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ನಿವೃತ್ತ ಶಿಕ್ಷಕರ ಪಟ್ಟಿ ವಾಚಿಸಿ ಜೊತೆ ಕಾರ್ಯದರ್ಶಿ ಪ್ರಕಾಶ್ ರಾವ್ ವಿದ್ಯಾರ್ಥಿಗಳ ಪಟ್ಟಿ ವಾಚಿಸಿದರು. ಕಾರ್ಯದರ್ಶಿ ಮೋಹನ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.