ಉಡುಪಿ: ಜಿಲ್ಲೆಯಲ್ಲಿ ಹೆಚ್ಚು ಕೊರೊನಾ ಪರೀಕ್ಷೆಗಳನ್ನು ಮಾಡಿಸುವುದರ ಜೊತೆಗೆ ಸೋಂಕಿತರನ್ನು ಗುರುತಿಸಿ ಪ್ರತ್ಯೇಕಿಸಿ ಸೂಕ್ತ ಚಿಕಿತ್ಸೆ ನೀಡುವುದರೊಂದಿಗೆ ಕೊರೋನಾ ನಿಯಂತ್ರಣಕ್ಕೆ ಮುಂದಾಗಬೇಕು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ವಿ. ಸುನಿಲ್ ಕುಮಾರ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅವರು ಇಂದು ನಗರದ ಜಿಲ್ಲಾ ಪಂಚಾಯತ್‌ನ ವಿ. ಎಸ್. ಆಚಾರ್ಯ ಸಭಾಂಗಣದಲ್ಲಿ ಕೊರೋನಾ ನಿಯಂತ್ರಣ ಹಾಗೂ ಅಮೃತ್ ಗ್ರಾಮ ಪಂಚಾಯತ್ ಯೋಜನೆಯ ಗ್ರಾಮ ಪಂಚಾಯತ್ ಆಯ್ಕೆಗಳ ಕುರಿತ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡುತ್ತಿದ್ದರು.
ಜಿಲ್ಲೆಯಲ್ಲಿ ಕನಿಷ್ಠ ಪ್ರತಿದಿನ 8 ಸಾವಿರ ಕೋವಿಡ್ ಪರೀಕ್ಷೆಯ ಗುರಿಯನ್ನಿಟ್ಟುಕೊಂಡು ಪರೀಕ್ಷೆ ಮಾಡಬೇಕು ಎಂದ ಅವರು ಕಳೆದ ವಾರದಿಂದ ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ದರ 1.4 ರಷ್ಟಿದ್ದು ಅದನ್ನು 1 ರ ಒಳಗೆ ತರುವಂತೆ ಆರೋಗ್ಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿಲ್ಲೆಯಲ್ಲಿ ಈಗಾಗಲೇ 11.33 ಲಕ್ಷಗಳಷ್ಟು ಜನರಿಗೆ ಕೋವಿಡ್ ನಿರೋಧಕ ಮೊದಲ ಡೋಸ್ ನೀಡಲಾಗಿದ್ದು, 3 ಲಕ್ಷಕ್ಕೂ ಅಧಿಕ ಜನರಿಗೆ ಎರಡನೇ ಡೋಸ್ ಲಸಿಕೆ ಪ್ರಗತಿ ಆಗಿದೆ. ಸೆಪ್ಟಂಬರ್ ಅಂತ್ಯದ ಒಳಗೆ ಜಿಲ್ಲೆಯಲ್ಲಿ ಶೇ. 100 ರಷ್ಟು ಜನರಿಗೆ ಲಸಿಕೆ ನೀಡಬೇಕು. ಹೆಚ್ಚಾಗಿ ಗ್ರಾಮೀಣ ಭಾಗದ ಜನರು ಬಾಕಿ ಇರುವುದರಿಂದ ಪ್ರತಿ ದಿನ 5 ಗ್ರಾಮ ಪಂಚಾಯತ್‌ಗಳನ್ನು ಗುರುತಿಸಿ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಬೇಕು ಎಂದರು.
ತಾಲ್ಲೂಕು ಮಟ್ಟದಲ್ಲಿ ನೂತನ ಆಕ್ಸಿಜನ್ ತಯಾರಿಕಾ ಘಟಕಗಳ ನಿರ್ಮಾಣ ಕಾಮಗಾರಿಯನ್ನು ಈಗಾಗಲೇ ಪೂರ್ಣಗೊಂಡು ಉದ್ಘಾಟನೆ ಆಗಬೇಕಿತ್ತು ಆದರೆ ವಿಳಂಬ ಆಗಿರು ಬಗ್ಗೆ ಅಸಮಧಾನ ವ್ಯಕ್ತಪಡಿಸಿದ ಅವರು ಸಂಬಂಧಿಸಿದ ಅಧಿಕಾರಿಗಳನ್ನು ಕರೆಸಿ ಮೇಲ್ವಿಚಾರಣೆ ಮಾಡಿ 10 ದಿನದೊಳಗೆ ಉದ್ಘಾಟನೆ ಆಗುವಂತೆ ನೊಡಿಕೊಳ್ಳುಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಪಕ್ಕದ ರಾಜ್ಯ ಕೇರಳದಲ್ಲಿ ನಿಫಾ ವೈರಸ್ ಹರಡುತ್ತಿರುವ ಬಗ್ಗೆ ಕೇಳಿಬರುತ್ತಿದೆ. ಜಿಲ್ಲೆಗೆ ಶಿಕ್ಷಣ ಹಾಗೂ ಉದ್ಯೋಗ ಹರಸಿ ಬರುವ ಕೇರಳ ರಾಜ್ಯದವರು ಬಂದಾಗ ಸರಕಾರ ಸೂಚಿಸಿರುವ ಮಾರ್ಗಸೂಚಿಗಳನ್ನು ತಪ್ಪದೆ ಕೈಗೊಳ್ಳಬೇಕು. ಈಗಾಗಲೇ ಇಲ್ಲಿಗೆ ವಿದ್ಯಾರ್ಥಿಗಳು ಬಂದಿದ್ದಾರೆ. ಅವರುಗಳಿಗೆ ಮತ್ತೊಮ್ಮೆ ಕೋವಿಡ್ ಪರೀಕ್ಷೆಗೆ ಅಳವಡಿಸುವುದು ಸೂಕ್ತ ಎಂದರು.
75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸವಿನೆನಪಿಗಾಗಿ ಜಿಲ್ಲೆಯ ಆಯ್ದ 18 ಗ್ರಾಮ ಪಂಚಾಯತಿಗಳಲ್ಲಿ ಸಮಗ್ರ ಮೂಲಭೂತ ಸೌಕರ್ಯ ಅಭಿವೃದ್ಧಿಗಾಗಿ ಪೋಷಿಸಿರುವಂತೆ ಅಮೃತ ಗ್ರಾಮ ಪಂಚಾಯತ್ ಯೋಜನೆಯನ್ನು ಅನುಷ್ಠಾನಗೊಳಿಸಲು ಸರ್ಕಾರ ತೀರ್ಮಾನಿಸಿದೆ ಎಂದರು.
ಈ ಗ್ರಾಮ ಪಂಚಾಯತಿಗಳಲ್ಲಿ ಬೀದಿ ದೀಪ, ಕುಡಿಯುವ ನೀರಿನ ನಳ್ಳಿ ಸಂಪರ್ಕ, ಘನತ್ಯಾಜ್ಯ ವಿಂಗಡನೆ ಹಾಗೂ ವಿಲೇವಾರಿ, ಪಂಚಾಯತ್ ಗಳಿಗೆ ಸೌರ ವಿದ್ಯುತ್ ಅಳವಡಿಕೆ, ಉದ್ಯಾನವನ, ಲೈಬ್ರರಿ ಡಿಜಿಟಲೀಕರಣ ಶಾಲೆ ಹಾಗೂ ಅಂಗನವಾಡಿಗಳಿಗೆ ಅಗತ್ಯ ಮೂಲಭೂತ ಸೌಕರ್ಯಗಳ ಕೆರೆ, ಕಲ್ಯಾಣಿಗಳ ಪುನಶ್ಚೇತನ ಸೇರಿದಂತೆ ಇತರ ಮೂಲ ಭೂತ ಸೌಕರ್ಯಗಳ ಅಭಿವೃದ್ಧಿ ಪಡಿಸುವುದು ಉದ್ದೇಶವಾಗಿದೆ ಎಂದರು.
ಈ ಯೋಜನೆಗಳನ್ನು ಯಶಸ್ವಿಯಾಗಿ ಅನುಷ್ಠಾನಗೊಳಿಸಿದ್ದಲ್ಲಿ ಅಂತಹ ಗ್ರಾಮ ಪಂಚಾಯತ್ ಗಳಿಗೆ ಸರ್ಕಾರವು ತಲಾ 25 ಲಕ್ಷ ಅನಿರ್ಭಂದಿತ ಅನುದಾನವನ್ನು ನೀಡಲಾಗುತ್ತದೆ ಎಂದ ಅವರು ಪ್ರಸಕ್ತ ಹಾಲಿ ಚಾಲ್ತಿಯಲ್ಲಿರುವ ಯೋಜನೆಗಳ ಅನುದಾನವನ್ನು ಒಗ್ಗೂಡಿಸುವ ಮೂಲಕ ಅಭಿವೃದ್ಧಿಗೊಳಿಸಬೇಕು ಎಂದರು.
ಶಾಸಕ ಕೆ. ರಘುಪತಿ ಭಟ್ ಮಾತನಾಡಿ, ಜಿಲ್ಲೆಯಲ್ಲಿ ಈಗಾಗಲೇ ಕೊರೋನಾ ನಿರೋಧಕ ಲಸಿಕೆ ಪಡೆದವರಿಗೂ ಸೋಂಕು ಹರಡಿರುವ ಬಗ್ಗೆ ಕೇಳಿಬರುತ್ತಿದೆ. ಈ ಬಗ್ಗೆ ನಿಖರ ಮಾಹಿತಿಗಳನ್ನು ಸಂಗ್ರಹಿಸಿ ಸೋಂಕಿನ ತೀವ್ರತೆ ಬಗ್ಗೆ ದಾಖಲೆಗಳನ್ನು ಇಡುವುದು ಒಳಿತು ಎಂದು ತಿಳಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ಕೂರ್ಮಾ ರಾವ್ ಎಂ, ಜಿ.ಪಂ. ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ವೈ, ಕಾಪು ಶಾಸಕ ಲಾಲಾಜಿ ಆರ್ ಮೆಂಡನ್, ಕರಾವಳಿ ಪ್ರಾಧಿಕಾರದ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ಹಾಗೂ ಜಿಲ್ಲಾ ಮಟ್ಟದ ಅನುಷ್ಠಾನಾಧಿಕಾರಿಗಳು ಉಪಸ್ಥಿತರಿದ್ದರು.