Monday, January 20, 2025
Monday, January 20, 2025

ಚೇರ್ಕಾಡಿ ದೊಡ್ಡಮನೆ ಸುಲೋಚನಾ ಶೆಟ್ಟಿ ಕೊಡವೂರು 75ರ ಸಂಭ್ರಮ

ಚೇರ್ಕಾಡಿ ದೊಡ್ಡಮನೆ ಸುಲೋಚನಾ ಶೆಟ್ಟಿ ಕೊಡವೂರು 75ರ ಸಂಭ್ರಮ

Date:

ಉಡುಪಿ: ದೇಶದೆಲ್ಲೆಡೆ ಸ್ವಾತಂತ್ರ್ಯ ಅಮೃತ ಮಹೋತ್ಸವವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ, ಅದೇ 1947ರ ಸ್ವಾತಂತ್ರ ದಿನಾಚರಣೆಯ ಸರಿಯಾಗಿ ಒಂದು ತಿಂಗಳ ನಂತರ ಅಂದರೆ ಸೆಪ್ಟೆಂಬರ್ 15ರಂದು ಕೊಡವೂರು ಗ್ರಾಮದ ಉತ್ತಮ ಕೃಷಿಕೆಯಾಗಿದ್ದ ಚೇರ್ಕಾಡಿ ದೊಡ್ಡಮನೆ ದಿ. ಪದ್ಮಾವತಿ ಶೆಡ್ತಿ ಯಾನೆ ಹೆಗ್ಗಡ್ತಿ ಹಾಗೂ ಉಡುಪಿಯ ಕ್ರಿಶ್ಚಿಯನ್ ಹೈಸ್ಕೂಲ್ ನಲ್ಲಿ ದೈಹಿಕ ಶಿಕ್ಷಕರಾಗಿದ್ದ ಕೊಡವೂರು ಜನ್ನಿಬೆಟ್ಟು ದಿ.ಗೋಪಾಲ ಶೆಟ್ಟಿ ಯವರ ಮಕ್ಕಳಲ್ಲಿ ಅತ್ಯಂತ ಹಿರಿಯ ಪುತ್ರಿಯಾಗಿ ಜನ್ಮತಾಳಿದ ಸುಲೋಚನಾ ಶೆಟ್ಟಿ ಕೊಡವೂರುರವರು, ನಂತರ ತಮ್ಮ ದಾಂಪತ್ಯ ಜೀವನವನ್ನು ಕೊರಂಗ್ರಪಾಡಿ ದೊಡ್ಡಮನೆ ದಿ. ಜಯರಾಮ ಶೆಟ್ಟಿ ಯಾನೆ ಹೆಗ್ಡೆಯವರ ಧರ್ಮಪತ್ನಿಯಾಗಿ, ಈ ದಾಂಪತ್ಯದಿಂದ ಸ್ವಉದ್ಯೋಗ ನಡೆಸುತ್ತಿರುವ ಓಂ ಪ್ರಸಾದ್ ಹಾಗೂ ನ್ಯಾಯವಾದಿ ಸಾಮಾಜಿಕ ಕಾರ್ಯಕರ್ತ ಹಾಗೂ ಶಿಕ್ಷಣ ಸಂಸ್ಥೆಯ ಸ್ಥಾಪಕರಾಗಿರುವ ಪ್ರೇಮ್ ಪ್ರಸಾದ್ ಎಂಬ ಇಬ್ಬರು ಗಂಡು ಮಕ್ಕಳನ್ನು ಪಡೆದು, ಇದೀಗ ಪ್ರಜ್ಞಾ ಹಾಗೂ ಪೌರ್ಣಮಿ ಎಂಬ ಸೊಸೆಯಂದಿರನ್ನು ಹಾಗೂ ನೈತಿಕ್ ಎಂಬ ಮೊಮ್ಮಗನನ್ನು ಹೊಂದಿ, ಹತ್ತು ಹಲವು ಕ್ಷೇತ್ರಗಳಲ್ಲಿ ತನ್ನ ಕೆಲಸವನ್ನು ಯಶಸ್ವಿಯಾಗಿ ನಿರ್ವಹಿಸಿ, ಇದೀಗ ಸಾರ್ಥಕ 75ನೇ ವರ್ಷಕ್ಕೆ ಕಾಲಿಡುತ್ತಿರುವುದು ಒಂದು ಸಾಧನೆಯೇ ಸರಿ.

ಶಿಕ್ಷಕಿ:
ಮೂಲತಃ ಟಿ ಸಿ ಎಚ್ ಬಿ.ಎ ಪದವಿಯನ್ನು ಹೊಂದಿ 1972ರಿ0ದ 2005ರ ತನಕ ಎಸ್ ವಿ ಎಸ್ ವಿದ್ಯಾವರ್ಧಕ ಸಂಘ, ಕಟಪಾಡಿ ಆಡಳಿತ ಮಂಡಳಿಯ ಪ್ರಾಥಮಿಕ ಶಾಲೆಗಳಲ್ಲಿ ಶಿಕ್ಷಕಿಯಾಗಿ ತನ್ನ ವೃತ್ತಿ ಜೀವನವನ್ನು ಪ್ರಾರಂಭಿಸಿ, ಎಲ್ಲಾ ತರಗತಿಗಳ ಎಲ್ಲಾ ಪಾಠಗಳನ್ನು ಅದರಲ್ಲೂ ವಿಶೇಷವಾಗಿ ಕನ್ನಡ ಹಾಗೂ ವಿಜ್ಞಾನ ವಿಷಯಗಳಲ್ಲಿ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಯನ್ನು ಮಾಡಿ, ಸುಮಾರು 27 ವರ್ಷಗಳ ಕಾಲ ಮುಖ್ಯೋಪಾಧ್ಯಾಯಿನಿಯಾಗಿ ಸೇವೆಯನ್ನು ಸಲ್ಲಿಸಿ, ಇದೀಗ ನಿವೃತ್ತ ಜೀವನ ಸಾಗಿಸುತ್ತಿದ್ದಾರೆ. ವರ್ಷ 2004ರ ಶಿಕ್ಷಕ ದಿನಾಚರಣೆಯ ಸಂದರ್ಭದಲ್ಲಿ ಇವರನ್ನು ಸರ್ಕಾರವು “ಉಡುಪಿ ಜಿಲ್ಲಾ ಉತ್ತಮ ಶಿಕ್ಷಕಿ ಪ್ರಶಸ್ತಿ”ಯಿಂದ ಗೌರವಿಸಿರುತ್ತದೆ. ತನ್ನ ವೃತ್ತಿ ಜೀವನದ ಸಂದರ್ಭದಲ್ಲಿ ಹಾಗೂ ನಿವೃತ್ತ ಜೀವನದಲ್ಲೂ ಪಾದರಸದಂತೆ ಚುರುಕಾಗಿ ವಿವಿಧ ಆಯಾಮಗಳಲ್ಲಿ ತನ್ನ ಕಾರ್ಯವನ್ನು ಮುಂದುವರಿಸುವ ಇವರ ವ್ಯಕ್ತಿತ್ವ ಪರಿಚಯದ ಈ ಸಣ್ಣ ಪ್ರಯತ್ನ.

ಸಾಮಾಜಿಕ ಸಂಘಟಕಿ:
1989ರಿಂದ 2004ರ ಅವಧಿಯಲ್ಲಿ ಇವರು ಸಾಕ್ಷರತೆಯ ಆಂದೋಲನದಲ್ಲಿ ಸಲಹೆಗಾರ್ತಿಯಾಗಿ, ಮುಖ್ಯ ತರಬೇತಿದಾರಳಾಗಿ, ಸಮಿತಿಯ ಅಧ್ಯಕ್ಷೆಯಾಗಿ, ಜಿಲ್ಲಾ ಸಂಘಟನಾ ಕಾರ್ಯದರ್ಶಿಯಾಗಿ, ಬೆಳಗಾವಿಯಲ್ಲಿ ನಡೆದ ರಾಜ್ಯಮಟ್ಟದ ನವ ಸಾಕ್ಷರರ ಸಮಾವೇಶದ ಜಿಲ್ಲಾ ಸಂಚಾಲಕಿಯಾಗಿ ಜವಾಬ್ದಾರಿಯನ್ನು ನಿರ್ವಹಿಸಿರುತ್ತಾರೆ. ಈ ಆಂದೋಲನಕ್ಕಾಗಿಯೇ ಇವರು ಬರೆದಿರುವ “ಅರಿವು” ಕವನ ಸಂಕಲನವು ಅಖಿಲ ಭಾರತ ಸಾಹಿತ್ಯ ಸಮ್ಮೇಳನ, ಮೂಡಬಿಡರೆಯಲ್ಲಿ ಬಿಡುಗಡೆಯಾಗಿ, ನೂರಾರು ಕಡೆಗಳಲ್ಲಿ ಬೀದಿ ನಾಟಕದ ಮೂಲಕ ಪ್ರಚಾರಗೊಂಡಿರುತ್ತದೆ. ಪ್ರೊ.ರೋಹಿಡೇಕರ್ ವರದಿಯ “ಹೊಸ ಪಠ್ಯ ವಸ್ತು ತಯಾರಿ” ಹಾಗೂ “ಕನಿಷ್ಠ ಕಲಿಕಾ ಸರಣಿ” ನಿರ್ಮಾಣದಲ್ಲಿ ಇವರು ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಏಕೈಕ ಶಿಕ್ಷಕ ಪ್ರತಿನಿಧಿಯಾಗಿ ಕೆಲಸ ಮಾಡಿರುವ ಅನುಭವವನ್ನು ಪಡೆದಿರುತ್ತಾರೆ.

ಸಂಪನ್ಮೂಲ ವ್ಯಕ್ತಿ:
ಮಂಗಳೂರು ವಿಶ್ವ ವಿದ್ಯಾನಿಲಯದ ಮಾನ್ಯತೆ ಪಡೆದ ಮಾನವ ಸಂಪನ್ಮೂಲ ಅಭಿವೃದ್ಧಿ ಕಾಲೇಜು AIM INSIGHTS ನ ಸಂಪನ್ಮೂಲ ವ್ಯಕ್ತಿಯಾಗಿ ಬೀದಿ ವಾಚನಾಲಯ ರಚನೆ, ಜನರಲ್ಲಿ ಓದುವ ಹವ್ಯಾಸ ಬೆಳೆಸುವ ತರಬೇತಿಗಳನ್ನು ಹಾಗೂ ರಾಷ್ಟ್ರ ಮಟ್ಟದ ಮಕ್ಕಳ ಬೇಸಿಗೆ ಶಿಬಿರ ನಡೆಸಲು ಬೇಕಾದ ತರಬೇತಿ ದೃಢ ಪತ್ರವನ್ನು ಇವರು ಪಡೆದಿರುತ್ತಾರೆ. ಕರ್ನಾಟಕ ಸರ್ಕಾರದ ಪ್ರವಾಸೋದ್ಯಮ ಇಲಾಖೆ ಆಯೋಜಿಸಿದ ರಾಜ್ಯಮಟ್ಟದ 12 ಜನ ತಜ್ಞರ ಕೂಟದಲ್ಲಿ ಭಾಗವಹಿಸಿ ಪ್ರವಾಸೋದ್ಯಮ ಅಭಿವೃದ್ಧಿಗೊಳಿಸಲು ಸಲಹೆ ಮಾರ್ಗದರ್ಶನ ನೀಡಿರುತ್ತಾರೆ.

ಗುಣಮಟ್ಟದ ಶಿಕ್ಷಣಕ್ಕಾಗಿ ಕೆಲಸ ನಿರ್ವಹಿಸುತ್ತಿರುವ ಮಂಗಳೂರಿನ ಪಡಿ ವೆಲೋರೆಡ್ ಸಂಸ್ಥೆಯ ಉಡುಪಿ ಜಿಲ್ಲೆಯ ಪ್ರಥಮ ಅಧ್ಯಕ್ಷೆಯಾಗಿ, ಜಿಲ್ಲಾ ಶಿಕ್ಷಣ ಸಂಪನ್ಮೂಲ ಕೇಂದ್ರದ ಕಾರ್ಯದರ್ಶಿಯಾಗಿ, ತಾಲೂಕು ಶಿಕ್ಷಣ ಸಂಪನ್ಮೂಲ ಕೇಂದ್ರದ ಉಪಾಧ್ಯಕ್ಷೆಯಾಗಿ ಮುಖ್ಯ ತರಬೇತಿ ನೀಡುವ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಕರ್ನಾಟಕ ಸರ್ಕಾರದ ಯುವಜನ ಮತ್ತು ಕ್ರೀಡಾ ಇಲಾಖೆಯ “ಜೀವನ ಕೌಶಲ್ಯಗಳು ಮತ್ತು ಯುವ ಜನಾಂಗ” ತರಬೇತಿಯನ್ನು ಪಡೆದಿರುವ ರಾಜ್ಯದ ಏಕೈಕ ಹಿರಿಯ ನಾಗರೀಕಳಾಗಿ ಹಾಗೂ ಭಾರತೀಯ ಜ್ಞಾನ ವಿಜ್ಞಾನ ಸಮಿತಿಯ ಉಡುಪಿ ಜಿಲ್ಲಾ ಸಂಚಾಲಕಿಯಾಗಿಯೂ ಇವರು ನೇಮಕಗೊಂಡಿರುತ್ತಾರೆ.

ಕರ್ನಾಟಕ ಸರ್ಕಾರದ ರಾಜ್ಯ ಚಲನಚಿತ್ರ ಅಕಾಡೆಮಿಯ ರಾಜ್ಯ ಮಟ್ಟದ ಕಾರ್ಯಾಗಾರದ ಉಡುಪಿ ಜಿಲ್ಲಾ ಸಹಸಂಚಾಲಕಿಯಾಗಿ ನಿಯೋಜಿಸಲ್ಪಟ್ಟು ಶಿಕ್ಷಣದಲ್ಲಿ ಚಲನಚಿತ್ರ ಮಾಧ್ಯಮದ ಬಗ್ಗೆ ವಿವಿಧ ಕಡೆಗಳಲ್ಲಿ ಹೆತ್ತವರಿಗೆ ಮತ್ತು ಶಿಕ್ಷಕರಿಗೆ ಮಾಹಿತಿಯನ್ನು ನೀಡಿರುತ್ತಾರೆ.ರಾಷ್ಟ್ರೀಯ ಮಟ್ಟದ ಶೈಕ್ಷಣಿಕ ಮೌಲ್ಯ ಮಾಪನ ಯೋಜನೆ ASAR ಶೈಕ್ಷಣಿಕ ಸರ್ವೇಯಲ್ಲಿ ಜಿಲ್ಲಾ ಮಟ್ಟದಲ್ಲಿ ಭಾಗವಹಿಸಿರುತ್ತಾರೆ. ಗ್ರಾಮೀಣ ಭಾಗದಲ್ಲಿ ಮಂಡಲ ಪಂಚಾಯತ್ ಜಾರಿಗೆ ಬಂದಾಗ ಅಲ್ಲಿನ ಚುನಾಯಿತ ಜನಪ್ರತಿನಿಧಿಗಳಿಗೆ 5 ಸುತ್ತಿನ ವಾರ್ಷಿಕ ತರಬೇತಿಯನ್ನು ಹಾಗೂ ಮಹಿಳಾ ಪ್ರತಿನಿಧಿಗಳಿಗೆ ಸಶಕ್ತೀಕರಣದ ತರಬೇತಿಯನ್ನೂ ನೀಡಿರುತ್ತಾರೆ.

ಹೋರಾಟಗಾರ್ತಿ:
ಮಕ್ಕಳ ಹಕ್ಕುಗಳು, ಮಕ್ಕಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ, ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆ, ಲಿಂಗ-ಲಿಂಗತ್ವ, ಬಾಲ ನ್ಯಾಯ ಕಾಯ್ದೆ, ಬಾಲ ನ್ಯಾಯ ಮಂಡಳಿ, ಮಕ್ಕಳ ಕಲ್ಯಾಣ ಸಮಿತಿ ಹೀಗೆ ಹತ್ತಾರು ವಿಷಯಗಳ ಬಗ್ಗೆ ಹೋರಾಟಗಾರ್ತಿಯಾಗಿ ಗುರುತಿಸಿಕೊಂಡಿರುವ ಇವರು ರಾಜ್ಯ ಮಟ್ಟದ ಮಹಿಳಾ ತರಬೇತುದಾರರ ಸಂಸ್ಥೆ ಸಂಚಲನ (ರಿ)ನ ಪದಾಧಿಕಾರಿಯಾಗಿ ನೂರಾರು ಕೌಟುಂಬಿಕ ಬಿಕ್ಕಟ್ಟು ನಿರ್ವಹಣಾ ತರಬೇತಿಯನ್ನು ರಾಜ್ಯದ ವಿವಿಧ ಸ್ಥಳಗಳಲ್ಲಿ ನೀಡಿರುತ್ತಾರೆ.

ಯೋಗ ಹಾಗೂ ಆರೋಗ್ಯ ಚಿಕಿತ್ಸಕಿ:
ಋಷಿ ಸಂಸ್ಕೃತಿ ಕೇಂದ್ರ, ಕನಕಪುರ ಬೆಂಗಳೂರು ಇದರ ಸಿದ್ಧಿ ಸಮಾಧಿ ಯೋಗ ತರಬೇತಿ ಪಡೆದು ಯೋಗ ಶಿಕ್ಷಕಿಯಾಗಿ 5000ಕ್ಕೂ ಹೆಚ್ಚಿನ ಜನರಿಗೆ ಯೋಗ ತರಬೇತಿ ನೀಡಿರುತ್ತಾರೆ ಹಾಗೂ ಆ ಸಂಸ್ಥೆಯು ನಡೆಸುವ 5 ವಿಶ್ವ ಸಮ್ಮೇಳನದ ಗುರು ಸಮ್ಮಿಲನದಲ್ಲಿಯೂ ಭಾಗವಹಿಸಿರುತ್ತಾರೆ. ಈಶ್ವರೀಯ ವಿಶ್ವವಿದ್ಯಾನಿಲಯದ ಯೋಗ, ಧ್ಯಾನ ಇತ್ಯಾದಿಗಳ ಬಗ್ಗೆ ಅಭ್ಯಾಸ ಮಾಡಿ ಮೌಂಟ್ ಅಬುವಿನಲ್ಲಿ ನಡೆದ ಸಮ್ಮೇಳನದಲ್ಲಿಯೂ ಭಾಗವಹಿಸಿರುತ್ತಾರೆ.

ಲೇಖಕಿ ಹಾಗೂ ಕವಯತ್ರಿ:
1964ರಿಂದ 2014ರ ತನಕ ತನ್ನ ಸ್ವಾನುಭವಾದ ಆಧಾರದಲ್ಲಿ ಹಾಗೂ ಅಧ್ಯಯನದ ಮೂಲಕ ಸಾಹಿತ್ಯಕ ವೈದ್ಯಕೀಯ ವಿಚಾರದ “ಸ್ವಮೂತ್ರವೆಂಬ ಅಮೃತದ ಮಹಿಮೆ”ಎಂಬ ಪುಸ್ತಕವನ್ನು ಕನ್ನಡದಲ್ಲಿ, “ಮೈನೀರ್ ಪನ್ಪಿ ಅಮುರ್ತದ ಮೈಮೆ” ಎಂದು ತುಳುವಿನಲ್ಲಿ ಹಾಗೂ “Auto Urine Therapy-Nature’s Miracle Care” ಎಂದು ಇಂಗ್ಲಿಷ್ ನಲ್ಲಿ ಪುಸ್ತಕವನ್ನು ಹೊರತಂದಿರುತ್ತಾರೆ.ಈ ಪುಸ್ತಕಕ್ಕೆ ಖ್ಯಾತ ವೈದ್ಯರು, ಪದ್ಮ ವಿಭೂಷಣ ಪುರಸ್ಕೃತರೂ ಆಗಿರುವ ಡಾ.ಬಿ.ಎಂ. ಹೆಗ್ಡೆಯವರು ಮುನ್ನುಡಿ ಬರೆದಿರುವುದು ಇದರ ಮಹತ್ವವನ್ನು ಹೆಚ್ಚಿಸಿರುತ್ತದೆ.

ಹವ್ಯಾಸಿ ಲೇಖಕಿಯಾಗಿ ಕರ್ಮವೀರ, ಬಂಟರವಾಣಿ, ಸಂಪರ್ಕ, ತುಳು ಅಕಾಡೆಮಿ ಹೊರಡಿಸುವ ಮದಿಪು ಪತ್ರಿಕೆಗಳಿಗೆ ಲೇಖನಗಳನ್ನೂ, ವಿವಿಧ ತರಬೇತಿಗಳಿಗಾಗಿ ಅನೇಕ ಕವನಗಳನ್ನೂ ರಚಿಸಿರುತ್ತಾರೆ. ಇವರು ಕರಾವಳಿ ಲೇಖಕಿಯರ ಸಂಘಟನೆಯ ಹಾಗೂ ಕರ್ನಾಟಕ ಸಾಹಿತ್ಯ ಪರಿಷತ್ತಿನ ಸದಸ್ಯೆಯಾಗಿರುತ್ತಾರೆ.

ಸಹಕಾರಿ ಕ್ಷೇತ್ರದ ಸಾಧಕಿ:
ಉಡುಪಿಯಲ್ಲಿ ಕೇಂದ್ರವನ್ನು ಹೊಂದಿರುವ ಪ್ರತಿಷ್ಠಿತ ಟೀಚರ್ಸ್ ಕೋಪರೇಟಿವ್ ಬ್ಯಾಂಕ್ ನಲ್ಲಿ ಸತತ 8 ವರ್ಷಗಳ ಕಾಲ ನಿರ್ದೇಶಕಿಯಾಗಿ ಅಧ್ಯಾಪಕರ ಪರವಾದ ಸೇವೆಯನ್ನು ಸಲ್ಲಿಸಿರುವ ಇವರು, ಪ್ರಸ್ತುತ ಉಡುಪಿಯ ಶ್ರೀ ಗುರು ನಿತ್ಯಾನಂದ ಕೋಪರೇಟಿವ್ ಸಹಕಾರಿ ಸಂಸ್ಥೆಯಲ್ಲಿ ಎರಡನೇ ಅವಧಿಗೆ ನಿರ್ದೇಶಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸದಭಿರುಚಿಯ ಆಸಕ್ತ ಸಾಧಕಿ:
ಇವರು ಶಿಕ್ಷಣ ಇಲಾಖೆಯ ಪ್ರತಿಭಾ ಕಾರಂಜಿ, ಅಂತರ್ ಶಾಲಾ ಕ್ರೀಡಾ ಕೂಟಗಳಲ್ಲಿ ನಿರ್ಣಾಯಕಿಯಾಗಿ, ತುಳುಕೂಟದ ಸಕ್ರಿಯ ಸದಸ್ಯೆಯಾಗಿ, ಆಟಿ ಆಚರಣೆಯ ಕಾರ್ಯಕ್ರಮಗಳಲ್ಲಿ ಆಹ್ವಾನಿತೆಯಾಗಿ, ಜಾತಿ-ಮತವೆನ್ನದೆ ನೂರಾರು ವಧುಗಳನ್ನು ಮದುವೆಯ ಸಂದರ್ಭದಲ್ಲಿ ಉಚಿತವಾಗಿ ಸಿಂಗರಿಸುವ, ಶೋಭಾನೆ ಹಾಡುಗಳು, ಭಕ್ತಿ ಗೀತೆಗಳು, ಜನಪದ ಹಾಡುಗಳನ್ನು ಹಾಡುವ ಸದಭಿರುಚಿಯ ಆಸಕ್ತಿಯನ್ನು ಹೊಂದಿರುತ್ತಾರೆ.

ಮಂಗಳೂರಿನ ಆಕಾಶವಾಣಿ, ನಮ್ಮ ಟಿವಿ, ಸ್ಪಂದನ ಟಿವಿ, ದೂರದರ್ಶನಗಳಲ್ಲಿ ಪ್ರಸಾರಗೊಂಡಿರುವ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿರುವ ಇವರು ಯಕ್ಷಗಾನ, ಜಾನಪದ, ನಾಟಕಗಳು, ತುಳುನಾಡ ಸಂಸ್ಕೃತಿ ಮತ್ತು ಪ್ರಕೃತಿ ಇತ್ಯಾದಿಗಳ ಬಗ್ಗೆ ಆಸಕ್ತಿಯನ್ನು ಹೊಂದಿದ್ದು, ಗೆಳೆಯರ ಬಳಗ- ಮೂಡಬೆಟ್ಟು, ಬಂಟರ ಸಂಘ, ಕಂಬಳಕಟ್ಟ-ಕೊಡವೂರು, ಪೊಲೀಸ್ ಇಲಾಖೆಯ ಮಲ್ಪೆ ಬೀಟ್ ಟೀಮ್ ಸದಸ್ಯೆಯಾಗಿ ಹೀಗೆ ಹತ್ತಾರು ಕ್ಷೇತ್ರದ ಸದಭಿರುಚಿ ಸಾಧಕಿಯಾಗಿ ಗುರುತಿಸಿಕೊಂಡಿರುತ್ತಾರೆ.

ಚೇರ್ಕಾಡಿ ದೊಡ್ಡಮನೆ ಸುಲೋಚನಾ ಶೆಟ್ಟಿ ಕೊಡವೂರು 75ರ ಸಂಭ್ರಮ ಸೆಪ್ಟೆಂಬರ್ 15ರಂದು ನಡೆಯಲಿದೆ. ಚೇರ್ಕಾಡಿ ದೊಡ್ಡಮನೆ ಪಟ್ಟದವರಾದ ಕುಶಲ ಹೆಗ್ಡೆ ಅಧ್ಯಕ್ಷತೆ ವಹಿಸಲಿರುವ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಗಣ್ಯರಾದ ಬಸವಾನಂದ ಸ್ವಾಮೀಜಿ, ಡಾ. ಎಂ. ಮೋಹನ್ ಆಳ್ವ, ಸತ್ಯೇಂದ್ರ ಪೈ, ರೆನ್ನಿ ಡಿಸೋಜ, ಜಾನಕಿ ಬ್ರಹ್ಮಾವರ, ಇಂದ್ರಾಳಿ ಜಯಕರ ಶೆಟ್ಟಿ, ಉದ್ಯಾವರ ನಾಗೇಶ್ ಕುಮಾರ್ ಅತಿಥಿಗಳಾಗಿ ಆಗಮಿಸಲಿದ್ದಾರೆ ಎಂದು ಪ್ರೇಮ್ ಪ್ರಸಾದ್ ಶೆಟ್ಟಿ ಹಾಗೂ ಓಂಪ್ರಸಾದ್ ಶೆಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here

This site uses Akismet to reduce spam. Learn how your comment data is processed.

Share post:

ಜನಪ್ರಿಯ ಸುದ್ದಿ

ಇಂತಹ ಇನ್ನಷ್ಟು ಸುದ್ದಿಗಳು
ಸಂಬಂಧಿತ ಸುದ್ದಿ

ಕಲ್ಸಂಕ ಸರ್ಕಲ್ ನಲ್ಲಿ ಬ್ಯಾರಿಕೇಡ್ ಅಳವಡಿಸಿರುವುದು ಅವೈಜ್ಞಾನಿಕ ಕ್ರಮ: ಮಾಜಿ ಶಾಸಕ ರಘುಪತಿ ಭಟ್

ಉಡುಪಿ, ಜ.19: ಅಂಬಾಗಿಲು - ಗುಂಡಿಬೈಲು ಮಾರ್ಗವಾಗಿ ಉಡುಪಿ ನಗರ ಪ್ರವೇಶಿಸುವ...

ಜ.27: ತೆಂಕನಿಡಿಯೂರು ಕಾಲೇಜಿನಲ್ಲಿ ಡಾ. ಶಿವರಾಮ ಕಾರಂತರ ಕಾದಂಬರಿ ಅಧ್ಯಯನ ಶಿಬಿರ

ಉಡುಪಿ, ಜ.18: ಕರ್ನಾಟಕ ಸರಕಾರದ ಡಾ. ಶಿವರಾಮ ಕಾರಂತ ಟ್ರಸ್ಟ್ ಉಡುಪಿ...

ಮಣಿಪಾಲ ಕೆ.ಎಂ.ಸಿ: ಗೋಲ್- ಡೈರೆಕ್ಟೆಡ್ ಬ್ಲೀಡಿಂಗ್ ಮ್ಯಾನೇಜ್ಮೆಂಟ್ ವಿಚಾರ ಸಂಕಿರಣ

ಮಣಿಪಾಲ, ಜ.19: ಕಸ್ತೂರ್ಬಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆ ಮಣಿಪಾಲದ ಇಮ್ಯುನೊಹೆಮಟಾಲಜಿ...

ಕಲ್ಸಂಕ ಜಂಕ್ಷನ್ ಸುಗಮ ಸಂಚಾರ ವ್ಯವಸ್ಥೆ ಬಗ್ಗೆ ಜಿಲ್ಲಾಧಿಕಾರಿ ಜೊತೆ ಶಾಸಕ ಯಶ್ಪಾಲ್ ಸುವರ್ಣ ಸಮಾಲೋಚನೆ

ಉಡುಪಿ, ಜ.19: ಕಲ್ಸಂಕ ಜಂಕ್ಷನ್ ನಲ್ಲಿ ಬ್ಯಾರಿಕೇಡ್ ಅಳವಡಿಸಿ ಆಂಬಾಗಿಲು ಭಾಗದ...
error: Content is protected !!