ಉಡುಪಿ: ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಸಹಯೋಗದಲ್ಲಿ ಮಂದಾರ (ರಿ.) ಸಾಂಸ್ಕೃತಿಕ ಹಾಗೂ ಸೇವಾ ಸಂಘಟನೆ ಗಾಂಧಿನಗರ ಬೈಕಾಡಿ ವತಿಯಿಂದ ಎರಡು ದಿನಗಳ ಕಾಲ ಸಾರ್ವಜನಿಕ ಸ್ಥಳಗಳಲ್ಲಿ ಅಸ್ಪೃಶ್ಯತೆ ಕುರಿತು ಅರಿವು ಮೂಡಿಸುವ ಬೀದಿ ನಾಟಕ ಪ್ರದರ್ಶಿಸಲಾಯಿತು.
ಉಪ್ಪಿನಕೋಟೆ ನಿಲ್ದಾಣದಿಂದ ಪ್ರಾರಂಭಗೊಂಡು ಸರಕಾರಿ ಪ್ರೌಢಶಾಲೆ ಬ್ರಹ್ಮಾವರ, ಪಾಂಡೇಶ್ವರ ಪ್ರಾಥಮಿಕ ಶಾಲೆಯ ಮೈದಾನ, ಸಾಲಿಗ್ರಾಮ ಬಸ್ ನಿಲ್ದಾಣ, ಕೊಮೆ ತೆಕ್ಕಟ್ಟೆಯ ಶನೀಶ್ವರ ದೇವಸ್ಥಾನ ಹತ್ತಿರ, ಕೋಟೇಶ್ವರ ಬಸ್ ನಿಲ್ದಾಣ, ಕುಂದಾಪುರದ ಶಾಸ್ತ್ರಿ ಸರ್ಕಲ್, ಬಾಳಿಗ ಮೆಡಿಕಲ್ ಸೆಂಟರ್ ಆವರಣದಲ್ಲಿ, ಬಿರ್ತಿ ವಟಾರದಲ್ಲಿ, ಬ್ರಹ್ಮಾವರ ಬಸ್ ನಿಲ್ದಾಣದಲ್ಲಿ ಹೀಗೆ ಸುಮಾರು ಹತ್ತಕ್ಕೂ ಅಧಿಕ ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶನಗೊಂಡು ಸಾರ್ವಜನಿಕರಿಂದ ಪ್ರಶಂಸಿಸಲ್ಪಟ್ಟಿತು.
ಜನವರಿ 29ರಂದು ಈ ಬೀದಿ ನಾಟಕ ತಯಾರಿ ಕಾರ್ಯಕ್ರಮ ಉದ್ಘಾಟನೆಗೊಂಡು ರೋಹಿತ್ ಎಸ್ ಬೈಕಾಡಿ ಅವರ ನಿರ್ದೇಶನದಲ್ಲಿ ಸುಮಾರು ಒಂದು ವಾರಗಳ ತರಬೇತಿಯಲ್ಲಿ ಈ ಬೀದಿ ನಾಟಕ ತಯಾರಿಸಲಾಗಿದ್ದು, ಜನಪದ ಕಲಾವಿದ ಪ್ರಶಾಂತ್ ಬಿರ್ತಿ, ದಿನೇಶ್ ಎಸ್. ಬೈಕಾಡಿ ಹಾಗೂ ರಂಗಕರ್ಮಿ ಪ್ರಸಾದನ ಕಲಾವಿದ ರಮೇಶ್ ಕಪಿಲೇಶ್ವರ ಅವರು ಈ ತರಬೇತಿಯಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದರು.