ಕಲ್ಮತ್ ಮಸೀದಿಯ ವಿಚಾರಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಕಟಣೆಯ ಮೂಲಕ ಹೇಳಿಕೆಯನ್ನು ನೀಡಿದ್ದಾರೆ.
ಉಡುಪಿ ವಿಧಾನಸಭಾ ಕ್ಷೇತ್ರದಲ್ಲಿರುವ ನಗರಸಭಾ ವ್ಯಾಪ್ತಿಯ ಕೊಡವೂರು ಗ್ರಾಮದ ಸರಕಾರಿ ಜಾಗದ ಸರ್ವೇ ನಂ 53/6 ರಲ್ಲಿನ 67 ಸೆಂಟ್ಸ್ ಜಾಗವನ್ನು ನಾನು ಶಾಸಕನಾಗಿದ್ದಾಗ ವಕ್ಫ್ ಬೋರ್ಡ್ ಮುಖಾಂತರ ಕಲ್ಮತ್ ಮಸೀದಿ ಹೆಸರಿಗೆ ವರ್ಗಾಯಿಸಿದ್ದೇನೆ ಎನ್ನುವ ಆಪಾದನೆಯ ಸಂದೇಶವು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು ಈ ಬಗ್ಗೆ ಸ್ಪಷ್ಟೀಕರಣ ನೀಡುವ ಸಲುವಾಗಿ ಪ್ರಕಟಣೆಯನ್ನು ನೀಡಿದ್ದಾರೆ.
ನಾನು ಶಾಸಕನಾಗಿರುವ ಸಂದರ್ಭದಲ್ಲಿ ಕ್ಷೇತ್ರದಲ್ಲಿರುವ ಎಲ್ಲಾ ಇಲಾಖೆಗಳಲ್ಲಿ ಸಮಸ್ಯೆಗಳನ್ನು ಅನುಭವಿಸುತ್ತಿರುವ ಜನಸಾಮಾನ್ಯರು ಸಮಸ್ಯೆ ಪರಿಹಾರಕ್ಕಾಗಿ ಮತ್ತು ಹೊಸ ಯೋಜನೆಗಳ ಅನುಷ್ಟಾನಕ್ಕಾಗಿ ಸಾವಿರಾರು ಅರ್ಜಿಗಳು ಬರುತ್ತವೆ ಅಂತಹ ಅರ್ಜಿಗಳನ್ನು ಸಂಬಂಧಪಟ್ಟ ಇಲಾಖೆಗಳಿಗೆ ಪರಿಶೀಲಿಸಿ ಕ್ರಮವಹಿಸುವಂತೆ ರವಾನಿಸುವುದು ಜನಪ್ರತಿನಿಧಿಗಳ ಜವಾಬ್ದಾರಿ.
ಪ್ರಜಾಪ್ರಭುತ್ವದಲ್ಲಿ ಜನಪ್ರತಿನಿಧಿಯಾಗಿ ಜಾತಿ-ಮತ, ವರ್ಣ-ಭೇದ, ಧರ್ಮವನ್ನು ನೋಡಿ ಯಾವುದೇ ಅರ್ಜಿಗಳಲ್ಲಿ ತಾರತಮ್ಯ ಮಾಡದೇ ಜವಾಬ್ದಾರಿಯನ್ನು ಶಾಸಕನಾಗಿ ನಿರ್ವಹಿಸಲೇಬೇಕು.ಕೊಡವೂರು ಗ್ರಾಮದಲ್ಲಿ ಕಲ್ಮತ್ ಮಸೀದಿಗೆ ಜಾಗದ ಹಸ್ತಾಂತರದ ಪ್ರಕ್ರಿಯೆಗಳು 2018 ರಲ್ಲಿ ನಡೆದಿರುವ ಬಗ್ಗೆ ಮಾಹಿತಿಯಿದ್ದು, ಮೇ ತಿಂಗಳಿನಲ್ಲಿ ಚುನಾವಣೆ ನಡೆದು ನಾನು ಸೋತು ಶಾಸಕ ಸ್ಥಾನದ ಅಧಿಕಾರವನ್ನು ಕಳೆದುಕೊಂಡಿದ್ದೆ ಎನ್ನುವುದು ನನ್ನ ವಿರುದ್ದ ಅಪಪ್ರಚಾರ ನಡೆಸುತ್ತಿರುವವರು ಮರೆತಿರುವಂತಿದೆ. 2018 ರ ಬಳಿಕದ ಈ ಎಲ್ಲಾ ಸರಕಾರಿ ಪ್ರಕ್ರಿಯೆಗಳು ಸರಕಾರಿ ಇಲಾಖೆಗಳ ಮೂಲಕವೇ ಆಗಿದೆ ಎನ್ನುವುದು ಗಮನಿಸಬೇಕಾಗಿದೆ.
ನಾನು ನನ್ನ ಶಾಸಕತ್ವದ ಅವಧಿಯಲ್ಲಿ ಯಾವುದೇ ರೀತಿಯಲ್ಲಿ ಯಾವ ಜಾತಿ-ಧರ್ಮದ ರಾಜಕೀಯ ಮಾಡದೇ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ಪಾಲಿಸಿದ್ದೇನೆ. ಈ ಜಾಗಕ್ಕೆ ಸಂಬಂಧಪಟ್ಟಂತೆ ವೈಯಕ್ತಿಕವಾಗಿ ನಾನು ಯಾವ ಇಲಾಖೆಯ ಅಧಿಕಾರಿಯನ್ನು ಸಂಪರ್ಕಿಸಿ ಚರ್ಚಿಸಿಲ್ಲ ಮತ್ತು ಯಾವ ಅಧಿಕಾರಿಗಳು ನನ್ನನ್ನು ಸಂಪರ್ಕಿಸಿಲ್ಲ ಎನ್ನುವುದನ್ನು ಎಲ್ಲರ ಗಮನಕ್ಕೆ ತರಲಿಚ್ಚಿಸುತ್ತೇನೆ.
ಈ ಭೂ ಹಸ್ತಾಂತರ ಮತ್ತು ರದ್ದತಿ ಪ್ರಕ್ರಿಯೆಗಳಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡದೇ ಇರುವುದನ್ನು ಮತ್ತೊಮ್ಮೆ ಈ ಮುಖೇನ ತಿಳಿಸಲಿಚ್ಚಿಸುತ್ತೇನೆ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಪ್ರಕಟಣೆಯ ಮೂಲಕ ತಿಳಿಸಿದ್ದಾರೆ.