ಉಡುಪಿ: ಕೇಂದ್ರ ಸರಕಾರ ಜಾರಿಗೆ ತರಲು ಉದ್ದೇಶಿಸಿರುವ ವಿದ್ಯುತ್ ಕಾಯಿದೆ ತಿದ್ದುಪಡಿ ಮಸೂದೆ – 2020, ದೇಶದ ರೈತರು, ಕಿರು ಕೈಗಾರಿಕೋದ್ಯಮಿಗಳು, ಹಾಗೂ ಬಡವರ ಪಾಲಿಗೆ ಮರಣ ಶಾಸನವಾಗಲಿದೆ ಎಂದು ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಈಗಾಗಲೆ ದೇಶದ ಬೃಹತ್ ವಿಮಾನ ನಿಲ್ಧಾಣಗಳೂ ಸೇರಿ ನೂರಕ್ಕೂ ಹೆಚ್ಚು ಸರಕಾರಿ ಸ್ವಾಮ್ಯದ ಸಂಸ್ಥೆಗಳಲ್ಲಿರುವ ತನ್ನ ಶೇರ್ ಹಿಂತೆಗೆದುಕೊಂಡು ಖಾಸಗಿಯವರ ಕೈಗಿತ್ತು ಬಂಡವಾಳಶಾಹಿಗಳನ್ನು ಪ್ರೋತ್ಸಾಹಿಸುತ್ತಲೇ ಬಂದ ಕೇಂದ್ರ
ಸರಕಾರ, ಇದೀಗ ರಾಜ್ಯ ಮತ್ತು ಕೇಂದ್ರ ಎರಡೂ ಸರಕಾರಗಳ (ಕಾನ್ಕರೆಂಟ್ ಲಿಸ್ಟ್) ಅಧಿಕಾರ ವ್ಯಾಪ್ತಿಯಡಿಯಲ್ಲಿ ಬರುವ ಆಧ್ಯತಾ ವಲಯದ ಈ ವ್ಯವಸ್ಥೆಯನ್ನು ಖಾಸಗೀಕರಣಗೊಳಿಸಿ, ಕೇಂದ್ರ ವ್ಯಾಪ್ತಿಗೆ ತಂದು ಸರ್ವಾಧಿಕಾರ ಮೆರೆಸುವ ಗುರಿಯೊಂದಿಗೆ ಈ ಕಾಯಿದೆಯನ್ನು ಜಾರಿಗೆ ತರುತ್ತಿದೆ.
ಆಧುನೀಕರಣದ ಹೆಸರಲ್ಲಿ ವಿದ್ಯುತ್ ಉತ್ಫಾದನೆ ಮತ್ತು ಪ್ರಸರಣ ವ್ಯವಸ್ಥೆಯಲ್ಲಿ ರಾಜ್ಯಕ್ಕಿರುವ ಹಕ್ಕನ್ನು ಕೇಂದ್ರ ಕಸಿದುಕೊಂಡಂತಾಗಿದೆ. ಖಾಸಗೀಕರಣದ ಪರಿಣಾಮವಾಗಿ ರಾಜ್ಯ ಸರಕಾರಗಳ ಉದಾರ ನೀತಿ ಮರೆಯಾಗಲಿದೆ. ಸಬ್ಸಿಡಿ ವ್ಯವಸ್ಥೆ, ಮೀಟರ್ ರಹಿತ ಉಚಿತ ವಿಧ್ಯುತ್ ಸರಬರಾಜು ವ್ಯವಸ್ಥೆ ಸಂಫೂರ್ಣ ರದ್ಧಾಗಿ, ಕಡ್ಡಾಯ ಮೀಟರ್ ಅಳವಡಿಕೆ ಕಡ್ಡಾಯವಾಗಲಿದೆ. ಪರಿಣಾಮವಾಗಿ ರಾಜ್ಯದಲ್ಲಿ ಸುಮಾರು 30ಲಕ್ಷ ಭಾಗ್ಯ ಜ್ಯೋತಿ, ಕುಟೀರ ಜ್ಯೋತಿ ಫಲಾನುಭವಿಗಳ ಮನೆಯ ದೀಪ ಆರಲಿದೆ.
ಈಗಾಗಲೇ ನೆರೆ ಹಾವಳಿ, ಕೋರೋನಾ ಸಾಂಕ್ರಾಮಿಕತೆಯಿಂದ ಬಳಲಿ ಬೆಂಡಾಗಿರುವ ಸುಮಾರು 87ಲಕ್ಷ ರೈತ ಕುಟುಂಬಗಳ ಹೊಲದ ಪಂಪುಸೆಟ್ಟುಗಳು ಸ್ತಬ್ಧವಾಗಲಿವೆ. ರಾಜ್ಯದಲ್ಲಿ 12 ಸಾವಿರ ನೊಂದಾಯಿತ ಇಲೆಕ್ಟ್ರಿಕ್ ಗುತ್ತಿಗೆದಾರರ ಸಂಘವಿದ್ದು ಅವೆಲ್ಲದರ ಸುಮಾರು 1.50 ಲಕ್ಷ ಸದಸ್ಯರು, 10 ಲಕ್ಷಕ್ಕೂ ಹೆಚ್ಚು ಇದಕ್ಕೆ ಸಂಬಂಧಪಟ್ಟ ಅಸಂಘಟಿತ ಕಾರ್ಮಿಕರು ಮುಂದಿನ ದಿನಗಳಲ್ಲಿ ಖಾಸಗೀಕರಣದ ಲಾಭಿಗೆ ಬಲಿಯಾಗಲಿದ್ದಾರೆ. ಹೊಸ ತಂತ್ರಜ್ಞಾನ ಅನುಷ್ಠಾನದ ಪರಿಣಾಮವಾಗಿ ಇಲಾಖೆಯಲ್ಲಿ 45 ಶೇಕಡಾ ಉದ್ಯೋಗ ನಷ್ಟವಾಗಲಿದ್ದು, ಮುಂದಿನ ದಿನಗಳಲ್ಲಿ ಇದು ಸಮಾಜದ ಮೇಲೆ ಕೆಟ್ಟ ಪರಿಣಾಮ ಬೀರಲಿದೆ ಎಂದಿದ್ದಾರೆ.
ಈಗಾಗಲೇ ಪಂಜಾಬ್ ಮತ್ತು ತೆಲಂಗಾಣ ರಾಜ್ಯ ಸರಕಾರಗಳು ಈ ಮಸೂದೆಯನ್ನು ಹಿಂತೆಗೆದುಕೊಳ್ಳುವಂತೆ ತಮ್ಮ ವಿಧಾನಸಭೆಗಳಲ್ಲಿ ನಿರ್ಣಯ ಮಂಡಿಸಿ ಕೇಂದ್ರ ಸರಕಾರವನ್ನು ಒತ್ತಾಯಿಸಿವೆ. ರಾಜ್ಯದ ಹಿತದೃಷ್ಟಿಯಿಂದ ನಮ್ಮ ರಾಜ್ಯ ಸರಕಾರವೂ ಈ ಮಸೂದೆಯನ್ನು ಕೈ ಬಿಡುವಂತೆ ಕೇಂದ್ರ ಸರಕಾರವನ್ನು ಒತ್ತಾಯಿಸಬೇಕು ಎಂದು ಅಶೋಕ್ ಕುಮಾರ್ ಕೊಡವೂರು ಹೇಳಿದ್ದಾರೆ.