ಕೋಟ: ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದ ಕಾರ್ಯದಿಂದ ನಮಗೆ ಮನಸ್ಸಿನಲ್ಲಿ ನೆಮ್ಮದಿ ಸಿಗುತ್ತದೆ. ಸಮಾಜದಲ್ಲಿ ನಮ್ಮ ನಡುವೆ ಸುದ್ಧಿ ಇಲ್ಲದೇ ಸಮಾಜಮುಖಿ ಸೇವೆಗಳಲ್ಲಿ ತೊಡಗಿಸಿಕೊಂಡವರಿರುತ್ತಾರೆ, ಅಂತವರನ್ನು ಮುಖ್ಯವಾಹಿನಿಗೆ ಪರಿಚಯಿಸುವ ಕೆಲಸವಾಗಬೇಕು ಎಂದು ಪುರೋಹಿತ ರಾಜೇಶ್ ಐತಾಳ್ ಎತ್ತಿನಟ್ಟೆ ಹೇಳಿದರು.
ಅವರು ಶ್ರೀ ವಿನಾಯಕ ಯುವಕ ಮಂಡಲ(ರಿ.) ಸಾಯ್ಬ್ರಕಟ್ಟೆ-ಯಡ್ತಾಡಿ ಇವರ ಆಶ್ರಯದಲ್ಲಿ ಮಹಾತ್ಮ ಗಾಂಧಿ ಪ್ರೌಢಶಾಲೆಯಲ್ಲಿ ನಡೆದ 37 ವರ್ಷಗಳ ಕಾಲ ವಿದ್ಯಾರ್ಥಿ ವಸತಿ ನಿಲಯದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿರುವ ಜನಸ್ನೇಹಿ ತೇಜ ನಾಯ್ಕ್ ಅವರ ಅಭಿನಂದನಾ ಕಾರ್ಯಕ್ರಮ ತೇಜೋಮಯ-2021 (ನಳಪಾಕದ ನಡುಶಾಲೆ) ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಶಾಲಾಭಿವೃದ್ಧಿ ಅಧ್ಯಕ್ಷ ರವಿ ಶೆಟ್ಟಿ ಕೊಳ್ಕೆಬೈಲು ಮಾತಾನಾಡಿ, ತೇಜ ನಾಯ್ಕ ಅವರ ಏಳು- ಬೀಳು ಸಮಾನಾಗಿ ಸ್ವೀಕರಿಸಿ ಮುನ್ನೆಡೆದವರು. ಅವರ ಮುಂದಿನ ಜೀವನ ಸುಖವಾಗಿರಲಿ ಎಂದು ಹಾರೈಸಿದರು.
ಯುವಕ ಮಂಡಲದ ಅಧ್ಯಕ್ಷ ರತ್ನಾಕರ ಪೂಜಾರಿ, ಮಹಾತ್ಮ ಗಾಂಧಿ ಪ್ರೌಢಶಾಲೆಯ ಮುಖ್ಯೋಪಾಧ್ಯಾಯ ಸತೀಶ್ ನಾಯ್ಕ್, ನೆಹರು ಯುವ ಕೇಂದ್ರ ಉಡುಪಿ ಇದರ ಪ್ರದೀಪ್, ಯುವಕ ಮಂಡಲದ ಕಾರ್ಯದರ್ಶಿ ಪ್ರಶಾಂತ್ ಸೂರ್ಯ, ಉಪಾಧ್ಯಕ್ಷ ರಾಜೇಶ್ ದೇವಾಡಿಗ ಹಾಗೂ ಸದಸ್ಯರು ಉಪಸ್ಥಿತರಿದ್ದರು. ಸದಸ್ಯ ಅಜಿತ್ ಕುಮಾರ್ ಪ್ರಸ್ತಾವಿಸಿ ಕಾರ್ಯಕ್ರಮ ನಿರೂಪಿಸಿದರು.